ಪಟಾಕಿಯ ಸಿಡಿತ ಕಣ್ಣಿಗೆ ಅನಾಹುತ ಮೂವರ ದೃಷ್ಟಿಗೆ ಗಂಭೀರ ತೊಂದರೆ

ನಗರದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರ ಸಂಜೆ ಹಾಗೂ ಗುರುವಾರ ಬಿಡುವ ನೀಡಿದ ಕಾರಣ...
ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಹಾನಿಯಾಗಿರುವ ಮಕ್ಕಳನ್ನು ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿದರು.
ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಹಾನಿಯಾಗಿರುವ ಮಕ್ಕಳನ್ನು ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿದರು.
ಬೆಂಗಳೂರು: ನಗರದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರ ಸಂಜೆ ಹಾಗೂ ಗುರುವಾರ ಬಿಡುವ ನೀಡಿದ ಕಾರಣ ಪಟಾಕಿ ಆರ್ಭಟ ಹೆಚ್ಚಿತ್ತು.  
ಪರಿಣಾಮ, ಅವಘಡಗಳ ಪ್ರಮಾಣವೂ ಏರಿದೆ. ಬುಧವಾರ ರಾತ್ರಿ ನಗರದ ವಿವಿಧೆಡೆ ಸಂಭವಿಸಿದ ಪಟಾಕಿ ದುರಂತದಲ್ಲಿ 80ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಅವರಲ್ಲಿ ಮೂವರು ಮಕ್ಕಳು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ವೈದ್ಯರು ಇನ್ನೂ ಖಚಿತಪಡಿಸಿಲ್ಲ. 
ಬಸವನಗುಡಿ ನಿವಾಸಿ ಸೈಯದ್ ಜಮೀರ್ (50), ಚಾಮರಾಜಪೇಟೆ ನಿವಾಸಿ ರಾಕೇಶ್ (29), ಚಿತ್ತೂರಿನ ಆನಂದ್ (14), ಶ್ರೀನಗರದ ಭುವನಾ (7), ನಾರಾಯಣಪುರದ ನಿವಾಸಿ ದಿನೇಶ್ (14), ಎಂ.ಜಿ. ರಸ್ತೆಯ ನಿವಾಸಿ ಲಕ್ಷ್ಮೀ(7), ಟಿಂಬರ್ ಲೇಔಟ್‍ನ ತರುಣ್ (12), ಗೌರಿಪಾಳ್ಯದ ನಿವಾಸಿ ತಬರೇಶ್ (7), ಕೋಲಾರದ ನಿವಾಸಿ ಮೋಹಿತ್ (10), ಚಿಕ್ಕಲ್ಲಸಂದ್ರದ ನಿವಾಸಿ ಬಾಲಾಜಿ (6), ಮಾರತ್ತಹಳ್ಳಿ ನಿವಾಸಿ ದಿನೇಶ್ (14) ಮತ್ತಿತರರು ಗಾಯಗೊಂಡಿದ್ದು, ನಗರದ ವಿವಿಧ ಕಣ್ಣಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಸಾಕಷ್ಟು ಮಂದಿ ಹೂಕುಂಡ ಸಿಡಿಸುವಾಗ, ಬಿಜಲಿ ಪಟಾಕಿಯಿಂದ, ರಾಕೆಟ್ ಹಾರಿಸುವಾಗ ಕಿಡಿ ಸೋಕಿ ಗಾಯಗೊಂಡಿದ್ದರೆ, ಇನ್ನೂ ಕೆಲವೆಡೆ ನೋಡುಗರಿಗೆ, ದಾರಿಹೋಕರಿಗೆ ಪಟಾಕಿ ಕಿಡಿ ತಾಗಿ ತೊಂದರೆಯಾಗಿದೆ. ಸಣ್ಣಪುಟ್ಟ ಗಾಯಗಳಾಗಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಗಿದ್ದು, ಗಂಭೀರ ಸ್ಥಿತಿ ಇರುವವರನ್ನು ದಾಖಲಿಸಿಕೊಂಡಿದ್ದಾರೆ. 
ಗಂಭೀರ ಗಾಯ ಬುಧವಾರ ರಾತ್ರಿ ಮನೆಯಲ್ಲಿ ಕುಳಿತಿದ್ದಾಗ ರಾಕೆಟ್ ಕಣ್ಣಿನತ್ತ ನುಗ್ಗಿದ ಪರಿಣಾಮ ಶ್ರೀನಗರದ ಭುವನಾಳ (8) ಬಲಗಣ್ಣು ಹಾನಿಯಾಗಿದೆ. ಕೋಲಾರದ ಮಡೇರಹಳ್ಳಿ ನಿವಾಸಿ 9 ವರ್ಷದ ಮೋಹಿತ್ ಸಂಜೆ ಸ್ನೇಹಿತರ ಜತೆ ಆಡುತ್ತಿದ್ದ ವೇಳೆ ಪಟಾಕಿ ಕಿಡಿ ತಗುಲಿ ಎಡಗಣ್ಣಿಗೆ ಗಂಭೀರ ಗಾಯವಾಗಿದೆ. 
ಚಿತ್ತೂರಿನ ಆನಂದ್(14)ನ ಎಡಗಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮೂವರು ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಎಂಜಿ ರಸ್ತೆಯ ನಿವಾಸಿ 7 ವರ್ಷದ ಲಕ್ಷ್ಮಿಗೆ ಪಟಾಕಿ ತಾಗಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾಳೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com