
ಬೆಂಗಳೂರು: ನಗರದಲ್ಲಿರುವ ಅಲ್ಯುಮಿನಿಯಂ ವಸ್ತುಗಳ ಕಾರ್ಖಾನೆ ಹಾಗೂ ಚೀನಾದ ಕಂಪನಿಯೊಂದರ ನಡುವಿನ ವ್ಯವಹಾರಿಕ ಇ ಮೇಲ್ ಅಕೌಂಟ್ ಹ್ಯಾಕ್ ಮಾಡಿದ ಆನ್‍ಲೈನ್ ಹ್ಯಾಕರ್ಸ್‍ಗಳು ಬರೋಬ್ಬರಿ ರು.88 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಚೀನಾದ ಕಂಪನಿಗೆಂದು ಕಳುಹಿಸಿದ್ದ ಹಣ, ಯುನೈಟೆಡ್ ಕಿಂಗ್ ಡಮ್ ನ ಅಕೌಂಟ್ ವರ್ಗಾವಣೆ ಮಾಹಿತಿ ಇದ್ದು, ಇಂಟರ್ ಪೋಲ್ ನೆರವು ಪಡೆಯಲು ಅಧಿರಾರಿಗಳು ನಿರ್ಧರಿಸಿದ್ದಾರೆ.
ವಂಚನೆಯಾಗಿದ್ದು ಹೇಗೆ?:
ದಾಬಸ್‍ಪೇಟೆ ಸಮೀಪದ ಎಡೆಹಳ್ಳಿಯಲ್ಲಿ ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್ ಹೆಸರಿನ ಕಾರ್ಖಾನೆ ನಡೆಸುತ್ತಿರುವ ಉದ್ಯಮಿ ಹಯಾತ್ ಖಾನ್ ತಮ್ಮ ಕಾರ್ಖಾನೆಗಾಗಿ ಯಂತ್ರಗಳನ್ನು ಚೀನಾ ದಿಂದ ಆಮದು ಮಾಡಿಕೊಳ್ಳುತ್ತಾರೆ. ಚೀನಾದ ಕಂಪನಿಯೊಂದಿಗೆ ಕಳೆದ 5 ವರ್ಷಗಳಿಂದ ಈ ವ್ಯವಹಾರ ನಡೆಸುತ್ತಿದ್ದಾರೆ. ಇವರ ಬಹುತೇಕ ವ್ಯವಹಾರವೆಲ್ಲಾ ಆನ್‍ಲೈನ್ ಮೂಲಕವೇ ನಡೆಯುತ್ತಿತ್ತು.
ಇದೇ ವರ್ಷದ ಸೆಪ್ಟೆಂಬರ್‍ನಲ್ಲಿ ಯಂತ್ರ ತರಿಸಿಕೊಳ್ಳಲು ನಿರ್ಧರಿಸಿದ್ದ ಹಯಾತ್ ಅವರು ಯಾವ ಯಂತ್ರ ಬೇಕು ಎನ್ನುವುದರ ಬಗ್ಗೆ ಇ ಮೇಲ್ ಮೂಲಕ ಆರ್ಡರ್ ಮಾಡಿದ್ದರು. ಸಾಮಾನ್ಯವಾಗಿ ಯಾವುದೇ ಯಂತ್ರಗಳನ್ನು ಆರ್ಡರ್ ಮಾಡಿದಾಗ, ಚೀನಾ ಸಂಸ್ಥೆ ಮುಂಗಡವಾಗಿ ಕನಿಷ್ಠ ಶೇ.10 ರಿಂದ 20ರಷ್ಟು ಹಣವನ್ನು ಪಡೆದುಕೊಳ್ಳುತ್ತದೆ. ಮುಂಗಡ ಹಣ ತಲುಪಿದ ನಂತರ ಯಂತ್ರವನ್ನು ಭಾರತಕ್ಕೆ ಕಳುಹಿಸುತ್ತಿತ್ತು. ಬಳಿಕ ಬಾಕಿ ಹಣವನ್ನು ಹಯಾತ್ ಅವರು ಆ ಸಂಸ್ಥೆಯ ಅಕೌಂಟ್‍ಗೆ ಹಾಕುತ್ತಿದ್ದರು. ಸೆಪ್ಟೆಂಬರ್‍ನಲ್ಲಿ ಎಂದಿನಂತೆ ಹಯಾತ್ ಅವರ ವ್ಯವಹಾರಿಕ ಇ ಮೇಲ್‍ಗೆ ಚೀನಾ ಸಂಸ್ಥೆಯ ಇ ಮೇಲ್ ಬಂದಿತ್ತು. ಅದರಲ್ಲಿ ತಾವು ಹಣ ಸಂದಾಯ ಮಾಡಬೇಕಿರುವ ಬ್ಯಾಂಕ್ ಅಕೌಂಟ್ ಸಂಖ್ಯೆ ಬದಲಾಗಿದೆ ಎಂದು ಹೇಳಿ ಆ ಬ್ಯಾಂಕ್ ಅಕೌಂಟ್ ಸಂಖ್ಯೆಯನ್ನು ಅದರಲ್ಲಿ ನೀಡಲಾಗಿತ್ತು.
ಹೀಗಾಗಿ, ಹಯಾತ್ ಅವರು ಮೊದಲಿನ ಬ್ಯಾಂಕ್ ಅಕೌಂಟ್ ಸಂಖ್ಯೆ ಬದಲು ಇ ಮೇಲ್‍ನಲ್ಲಿ ಬಂದಿದ್ದ ಹೊಸ ಬ್ಯಾಂಕ್ ಅಕೌಂಟ್ ಸಂಖ್ಯೆಗೆ ಕೆಜಿ ರಸ್ತೆಯಲ್ಲಿರುವ ಐಡಿಬಿಐ ವಿಶೇಷ ಶಾಖೆಯ ಅಕೌಂಟ್ ಹಾಗೂ ಸ್ಟ್ಯಾಂಡರ್ಡ್ ಚಾರ್ಟರ್ಡ್ ಅಕೌಂಟ್‍ನಿಂದ ರಿಯಲ್ ಟೈಮ್ ಗ್ರಾಸ್ ಸೆಟ್ಲ್‍ಮೆಂಟ್(ಆರ್‍ಟಿಜಿಎಸ್) ವ್ಯವಸ್ಥೆ ಮೂಲಕ ಸೆ.11ರಿಂದ ಸೆ.30ರ ವರೆಗೆ ವಿವಿಧ ಕಂತುಗಳಲ್ಲಿ ರು.88 ಲಕ್ಷ ಹಣ ಪಾವತಿಸಿದ್ದರು. ಮುಂಗಡ ಹಣ ಪಾವತಿ ಮಾಡಿದರೂ, ಯಂತ್ರ ತಲುಪದ ಕಾರಣ ಹಯಾತ್ ಅವರು ಚೀನಾ ಸಂಸ್ಥೆಗೆ ಇ ಮೇಲ್ ಕಳುಹಿಸಿ ತಮ್ಮ ಆರ್ಡರ್‍ಗೆ ಸಂಬಂಧಿಸಿದಂತೆ ಹಣ ಪಾವತಿ ಮಾಡಲಾಗಿದ್ದು ಯಂತ್ರ ಬಂದಿಲ್ಲ ಎಂದು ಹೇಳಿದ್ದಾರೆ. ಆದರೆ, ಇ ಮೇಲ್‍ನಿಂದ ಯಾವುದೇ ಉತ್ತರ ಬರಲಿಲ್ಲ.
ಹೀಗಾಗಿ, ಹಯಾತ್ ನೇರವಾಗಿ ಫೋನ್ ಮೂಲಕ ಸಂಪರ್ಕಿಸಿದಾಗ, ಚೀನಾದ ಸಂಸ್ಥೆ ತಮ್ಮ ಅಕೌಂಟ್‍ಗೆ ಯಾವುದೇ ಹಣ ಬಂದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ತಾವು ಹೊಸದಾಗಿ ಯಾವುದೇ ಬ್ಯಾಂಕ್ ಅಕೌಂಟ್ ಸಂಖ್ಯೆ ಬದಲಿಸಿಲ್ಲ. ಜೊತೆಗೆ ಈ ಮೇಲ್ ಕೂಡ ಮಾಡಿಲ್ಲ ಎಂದು ಹೇಳಿದ್ದಾರೆ. ಆಗಲೇ ಹಯಾತ್ ಅವರು ಏನೋ ಯಡವಟ್ಟಾಗಿದೆಯೆಂದು ಅರಿತು, ನೇರವಾಗಿ ಬ್ಯಾಂಕಿಗೆ ತೆರಳಿ ತಾವು ಹಣ ಹಾಕಿರುವ ಅಕೌಂಟ್ ಬಗ್ಗೆ ಮಾಹಿತಿ ಕೋರಿದಾಗ ಅದು ಯುಕೆ ಬ್ಯಾಂಕ್ ಅಕೌಂಟ್ ಎನ್ನುವುದು ಗೊತ್ತಾಗಿದೆ. ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ಹಯಾತ್ ನ.5ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಇಂಟರ್ ಪೋಲ್ ನೆರವು
ಈ ಪ್ರಕರಣದಲ್ಲಿ ಹ್ಯಾಕರ್ಸ್‍ಗಳು ಚೀನಾ ಹಾಗೂ ಜಿಂದಾಲ್ ಸಂಸ್ಥೆಯ ಇ ಮೇಲ್ ಗಳನ್ನು ಹ್ಯಾಕ್ ಮಾಡಿದ್ದಾರೆ. ನಂತರ ಚೀನಾ ಸಂಸ್ಥೆಯ ಇ ಮೇಲ್ ಐಡಿ ಹೆಸರಿನಲ್ಲಿ ಮೇಲ್ ಮಾಡಿ ಅಕೌಂಟ್ ಬದಲಾವಣೆ ಸಂಖ್ಯೆಯನ್ನು ನೀಡಿರುವ ಸಾಧ್ಯತೆ ಇದೆ. ಅಥವಾ ಚೀನಾ ಸಂಸ್ಥೆಯೇ ಜಿಂದಾಲ್ ಸಂಸ್ಥೆಗೆ ವಂಚಿಸಿರಲೂಬಹುದು.
ಅಂತಾರಾಷ್ಟ್ರೀಯ ವ್ಯವಹಾರ ವಿಷಯವಾಗಿರುವ ಕಾರಣ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಂಟರ್‍ಪೋಲ್ ನೆರವು ಕೋರಿ ಪತ್ರ ಬರೆಯಲಿದ್ದೇವೆ. ಇದೇ ವೇಳೆ ರು.88 ಲಕ್ಷ ಹಣ ಸಂದಾಯವಾಗಿರುವ ಯುಕೆಯ ಬ್ಯಾಂಕ್ ಯಾವುದು, ಯಾವ ಭಾಗದಲ್ಲಿದೆ ಎನ್ನುವ ಬಗ್ಗೆ ಮಾಹಿತಿ ಕೋರಿ ಐಡಿಬಿಐ ಬ್ಯಾಂಕ್‍ಗೆ ಪತ್ರ ಬರೆಯಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
Advertisement