
ಬೆಂಗಳೂರು: ನಾಲ್ಕು ವರ್ಷದ ಮಗುವಿನ ಮೇಲೆ ಶಾಲೆಯಲ್ಲಿ ಅತ್ಯಾಚಾರ ನಡೆದಿರುವ ಘಟನೆಯನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಖಂಡಿಸಿದ್ದಾರೆ. ಇಂಥ ಘಟನೆಗಳಿಂದ ಬೆಂಗಳೂರಿನ ಮಕ್ಕಳ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿಲ್ಲ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಶಾಲೆಗಳಲ್ಲಿ ಇಂಥ ಘಟನೆಗಳು ಮರುಕಳಿಸ ಬಾರದು ಎಂದು ಗೃಹ ಸಚಿವರು, ಮುಖ್ಯಮಂತ್ರಿಗಳಿಗೆ ಪದೇ ಪದೆ ಪತ್ರ ಬರೆದು ಸೂಕ್ತ ರಕ್ಷಣಾ ಕ್ರಮ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕೆಂದು ಒತ್ತಾಯಿಸಿದ್ದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಲೆಗಳಲ್ಲಿ ಉತ್ತಮ ಮಟ್ಟದ ಭದ್ರತಾ ವ್ಯವಸ್ಥೆ ಅಲ್ಲಿ ಮಕ್ಕಳಿಗೆ ಒದಗಿಸಲಾಗಿರುವ ಮೂಲ ವ್ಯವಸ್ಥೆಯ ಬಗ್ಗೆ ಆಗಾಗ ಪರಿಶೀಲನೆ ನಡೆಯಬೇಕು. ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕೆಂದು ಒತ್ತಾಯಿಸಿದ್ದೆ. ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಅವರು ತಿಳಿಸಿದ್ದಾರೆ. ಘಟನೆ ನಡೆದಿರುವ ಶಾಲೆಯ ಆಡಳಿತ ಮಂಡಳಿ ಕೂಡ ಕೆಲಸಕ್ಕೆ ತೆಗೆದುಕೊಂಡಿರುವ ಸಿಬ್ಬಂದಿಯ ಪೂರ್ವಾಪರ ವಿಚಾರವನ್ನು ಖಚಿತಪಡಿಸಿಲ್ಲ. ಶಾಲೆಗಳಲ್ಲಿ ವ್ಯವಸ್ಥೆ ಉತ್ತಮಪಡಿಸುವ ಬಗ್ಗೆ ತಾವು ನೀಡಿದ್ದ ಸಲಹೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆಯೇ ಎಂದು ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಹಿಂದಿನ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಯಾವುದೇ ಶಿಕ್ಷೆಯಾಗಿಲ್ಲ. ಜುಲೈನಲ್ಲಿ ನಡೆದಿದ್ದ ಘಟನೆ ಬಗ್ಗೆ ಕೋರ್ಟ್‍ನಲ್ಲಿ ಇನ್ನಷ್ಟೇ ವಿಚಾರಣೆ ಆರಂಭವಾಗಬೇಕಿದೆ. ಹೀಗಾಗಿ, ರಾಜ್ಯ ಸರ್ಕಾರ ಕೂಡಲೇ ವಿಚಾರಣೆ ಆರಂಭವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮಕ್ಕಳ ವಿರುದ್ಧದ ಅತ್ಯಾಚಾರದಂಥ ಹೇಯ ಕೃತ್ಯಗಳು ಮುಂದುವರಿಯುತ್ತಿರುವುದು ಉತ್ತಮವಲ್ಲ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
Advertisement