
ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ನ್ಯಾ.ಭಾಸ್ಕರ್ ರಾವ್ ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ನ್ಯಾ.ಎಂ.ಎಫ್.ಸಲ್ಡಾನ ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ದುರುಪಯೋಗಕ್ಕೆ ಕಡಿವಾಣ ಹಾಗೂ ಭ್ರಷ್ಟಾಚಾರವನ್ನು ಕೆಳಮಟ್ಟದಿಂದಲೇ ತಡೆಯುವುದು ಲೋಕಾಯುಕ್ತ ಸಂಸ್ಥೆಯ ಮುಖ್ಯ ಉದ್ದೇಶ. ಆದರೆ ಇತ್ತೀಚೆಗೆ ಭ್ರಷ್ಟಾಚಾರ ಆರೋಪದಿಂದ ಲೋಕಾಯುಕ್ತ ಸಂಸ್ಥೆಯು ಜನರ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದೆ. ಅಲ್ಲದೆ ಮುಂದೆ ಪ್ರಾಮಾಣಿಕ ವ್ಯಕ್ತಿಗಳೇ ಆ ಸ್ಥಾನದಲ್ಲಿದ್ದರೂ, ವಿಶ್ವಾಸ ಬರುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ನಂಬಿಕೆ ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಲೋಕಾಯುಕ್ತ ನ್ಯಾ.ಶಿವರಾಜ ಪಾಟೀಲ್ ಅವರ ವಿರುದ್ಧ ಆರೋಪ ಕೇಳಿಬಂದಾಗ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಆರೋಪ ಸುಳ್ಳಾಗಿದ್ದರೂ ರಾಜಿನಾಮೆ ನೀಡಿದ್ದರು. ಈ ವೇಳೆ ಲೋಕಾಯುಕ್ತ ಸಂಸ್ಥೆ ಅತ್ಯಂತ ಪವಿತ್ರವಾದದ್ದು, ಹಾಗಾಗಿ ಆರೋಪ ಕೇಳಿ ಬಂದಾಗ ಅಧಿಕಾರದಲ್ಲಿ ಉಳಿಯುವುದು ಸೂಕ್ತವಲ್ಲ ಎಂದು ನ್ಯಾ.ಶಿವರಾಜ ಪಾಟೀಲ್ ಅವರು ಹೇಳಿದ್ದರು. ಆದರೆ ಈಗಿನ ಲೋಕಾಯುಕ್ತರು ಆರೋಪ ಕೇಳಿ ಬಂದರೂ ಸ್ಥಾನದಲ್ಲಿ ಉಳಿದು ಸಂಸ್ಥೆಯನ್ನೇ ನಾಶ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಿನಾಮೆ ನೀಡದೆ ನಿರಾಕರಿಸುತ್ತಿರುವ ಅವರು ಲೋಕಾಯುಕ್ತ ಹುದ್ದೆಗೆ ಅವಮಾನ ಮಾಡುತ್ತಿದ್ದಾರೆ. ಅಲ್ಲದೆ, ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಹಾಗಾಗಿ ಆರೋಪಕ್ಕೆ ಗುರಿಯಾಗಿರುವ ಭಾಸ್ಕರ್ ರಾವ್ ಅವರನ್ನು ರಾಜ್ಯಪಾಲರು ಕೂಡಲೇ ವಜಾಗೊಳಿಸಬೇಕು. ಇಲ್ಲವಾದಲ್ಲಿ ಭ್ರಷ್ಟಾಚಾರವೆಂಬುದು ಕ್ಯಾನ್ಸರ್ ರೋಗದಂತೆ ಎಲ್ಲೆಡೆ ವ್ಯಾಪಿಸಲಿದೆ ಎಂದರು.
Advertisement