
ಬೆಂಗಳೂರು: ಭಾರಿ ಅವ್ಯವಹಾರ ನಡೆದಿದೆ ಎಂದು ಜೆಡಿಎಸ್ ಮುಖಂಡರ ತೀವ್ರ ಟೀಕೆಗೆ ಗುರಿಯಾಗಿದ್ದ ರಾಜ್ಯ ಸರ್ಕಾರದ ಸೋಲಾರ್ ವಿದ್ಯುತ್ ಯೋಜನೆಯ ಅನುಷ್ಠಾನ ಮಾದರಿಗೆ ಈಗ ಕೇಂದ್ರ ಸರ್ಕಾರವೇ ಸರ್ಟಿಫಿಕೇಟ್ ನೀಡಿದೆ.
ಸೋಲಾರ್ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡುವುದಕ್ಕೆ ಕರ್ನಾಟಕ ಅನುಷ್ಠಾನ ಮಾಡುತ್ತಿರುವ ಮಾದರಿಯೇ ಸೂಕ್ತ ಎಂದು ಕೇಂದ್ರ ಇಂಧನ ಇಲಾಖೆ ಎರಡನೇ ಬಾರಿಗೆ ಪ್ರಶಂಸೆ ವ್ಯಕ್ತಪಡಿಸಿದೆ.
ಈ ಯೋಜನೆಯ ಇತರೆ ಫಲಾನುಭವಿ ರಾಜ್ಯಗಳು ಕರ್ನಾಟಕಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಬೇಕೆಂಬ ಟಿಪ್ಪಣಿಯನ್ನು ಕಳುಹಿಸಿಕೊಡಲಾಗಿದೆ. ಜೊತೆಗೆ, ಕೇಂದ್ರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ನೀಡಿ ಸೋಲಾರ್ ಯೋಜನೆಯ ಅನುಷ್ಠಾನ ವಿಧಾನದ ಬಗ್ಗೆ ಅಧ್ಯಯನ ನಡೆಸಿದೆ.
ಕುತೂಹಲಕಾರಿ ಸಂಗತಿ ಎಂದರೆ, ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ವಿಧಾನವೂ ಈ ಅಧ್ಯಯನದಲ್ಲಿ ಸೇರಿಸಲಾಗಿದೆ.
ಆನ್‍ಲೈನ್ ಅರ್ಜಿ ವಿತರಣೆ: ಆನ್‍ಲೈನ್ ಅರ್ಜಿ ವಿತರಣೆ ವಿಧಾನ ಹಾಗೂ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಭೂಮಾಲೀಕರು, ವಿಶ್ವವಿದ್ಯಾಲಯಗಳು, ಚಾರಿಟೇಬಲ್ ಸಂಸ್ಥೆಗಳು ಹಾಗೂ ಖಾಸಗಿ ಪಾಲುದಾರಿಕೆಗೆ ತೆಗೆದುಕೊಂಡ ನಿರ್ಧಾರ ಸಮರ್ಪಕವಾಗಿದೆ' ಎಂದು ಕೇಂದ್ರ ಇಂಧನ ಇಲಾಖೆ ಅಧಿಕಾರಿಗಳು ರಾಜ್ಯಕ್ಕೆ ಕಳುಹಿಸಿರುವ ಶ್ಲಾಘನಾ ಪತ್ರದಲ್ಲಿ ಮತ್ತು ಇತರೆ ರಾಜ್ಯಗಳಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಹೇಳಿದ್ದಾರೆ.
Advertisement