ಮಾಜಿ ಕಾರ್ಪೊರೇಟರ್ ಪತಿ ಹತ್ಯೆ: ನಾಲ್ವರು ಆರೋಪಿಗಳ ಸೆರೆ

ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಆರ್ಥಿಕ ವ್ಯವಹಾರಗಳ ರಕ್ಷಣೆಗಾಗಿ ರೌಡಿಗಳನ್ನು ಪೋಷಿಸಿ ಬೆಳೆಸಿದ್ದ ಬಿಬಿಎಂಪಿ ಮಾಜಿ ಸದಸ್ಯೆ ರಾಜೇಶ್ವರಿಯವರ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಆರ್ಥಿಕ ವ್ಯವಹಾರಗಳ ರಕ್ಷಣೆಗಾಗಿ  ರೌಡಿಗಳನ್ನು ಪೋಷಿಸಿ ಬೆಳೆಸಿದ್ದ ಬಿಬಿಎಂಪಿ ಮಾಜಿ ಸದಸ್ಯೆ ರಾಜೇಶ್ವರಿಯವರ ಪತಿ ಉಮೇಶ್
ಬೆಳಗೋಡು, ತಾನು ಬೆಳೆಸಿದ್ದ `ಶಿಷ್ಯ'ರಿಂದಲೇ ಹತ್ಯೆಯಾಗಿದ್ದರೆ ಎನ್ನುವ ಅಂಶ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ನಾಯಂಡಹಳ್ಳಿ ವಾರ್ಡ್‍ನ ಬಿಜೆಪಿ ಮಾಜಿ ಸದಸ್ಯೆ ರಾಜೇಶ್ವರಿ ಬೆಳಗೋಡು ಪತಿ ಉಮೇಶ್ ಹತ್ಯೆ  ಪ್ರಕರಣ ಸಂಬಂಧ ಪಶ್ಚಿಮ ವಿಭಾಗ ಪೊಲೀಸರು ಕುಖ್ಯಾತ ರೌಡಿ ಅರುಣ್ ಹಾಗೂ  ಆತನ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ.
 
`ತನ್ನಿಂದ ಸಾಕಷ್ಟು ಅನುಕೂಲ ಪಡೆದ ಉಮೇಶ್, ನಾವು ಸಂಕಷ್ಟದಲ್ಲಿದ್ದಾಗ ಕೈ ಹಿಡಿಯಲಿಲ್ಲ. ಅದಕ್ಕಾಗಿ ಪ್ರತೀಕಾರ ತೀರಿಸಿಕೊಂಡಿದ್ದಾಗಿ' ಬಂಧಿತ ಪ್ರಮುಖ ಆರೋಪಿ ಅರುಣ್, ವಿಚಾರಣೆ  ವೇಳೆ ಹೇಳಿಕೆ ನೀಡಿದ್ದಾನೆಂದು  ಮೂಲಗಳಿಂದ ತಿಳಿದು ಬಂದಿದೆ.

ಜೈಲು ಸೇರಿದಾಗ ನೆರವಾಗಲಿಲ್ಲ: ಕೊಲೆ ಯಾದ ಉಮೇಶ್ ಹಾಗೂ ಆರೋಪಿ ಅರುಣ್  ಹಲವು ತಿಂಗಳುಗಳಿಂದ ಪರಿಚಿತರು. ಪಾಲುದಾರಿಕೆಯಲ್ಲಿ ಇಬ್ಬರು ರಿಯಲ್ ಎಸ್ಟೇಟ್  ವ್ಯವಹಾರ ನಡೆಸಿದ್ದಾರೆ. ರೌಡಿ ಶೀಟರ್ ಅರುಣ್‍ನನ್ನು ಬಳಸಿಕೊಂಡು ಉಮೇಶ್,  ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು  ಮಾಹಿತಿ ನೀಡಿದ್ದಾರೆ.

ಅಪರಾಧ ಪ್ರಕರಣವೊಂದರಲ್ಲಿ ಅರುಣ್ ಬಂಧಿತನಾಗಿ ಜೈಲು ಸೇರಿದ್ದ. ಜತೆಯಲ್ಲೇ ವ್ಯವಹಾರ  ನಡೆಸುತ್ತಿದ್ದರು. ಜೈಲಿನಲ್ಲಿದ್ದ ಸಂದರ್ಭದಲ್ಲಿ ಅರುಣ್ ಬಿಡುಗಡೆಗೆ ಉಮೇಶ್ ನೆರವು ನೀಡಿರಲಿಲ್ಲ.  ಇದರಿಂದ ಉಮೇಶ್ ಮೇಲೆ ಅರುಣನಿಗೆ ಅಸಮಾಧಾನವಿತ್ತು. ಅದೆಲ್ಲಕ್ಕೂ  ಮಿಗಿಲಾಗಿ ಉಮೇಶ್‍ಗೆ ಸಂಬಂಧಿಸಿದ ಪ್ರಕರಣದಲ್ಲೇ ಅರುಣ್ ಜೈಲು ಸೇರಬೇಕಾಗಿದ್ದ ಕಾರಣ ಅರುಣ್ ಕೋಪ ಇನ್ನೂ ತೀವ್ರವಾಗಿತ್ತು. ಕೊನೆಗೆ ಜಾಮೀನು ಪಡೆದು ಹೊರಬಂದ ಅರುಣ್,  ಹತ್ಯೆಗೆ ಸಂಚು ರೂಪಿಸಿದ್ದು ಅದಕ್ಕಾಗಿ ಸಹಚರರ ಮೂಲಕ ಉಮೇಶ್ ಚಲನವಲದ ಬಗ್ಗೆ  ಮಾಹಿತಿ ಸಂಗ್ರಹಿಸಿದ.

ಅಂತಿಮವಾಗಿ ನ.19ರಂದು ರಾತ್ರಿ ಪತ್ನಿ ಹುಟ್ಟುಹಬ್ಬದ ಆಚರಣೆಗೆ ಔತಣ ಕೂಟಕ್ಕೆ ತೆರಳುತ್ತಿದ್ದ ಉಮೇಶ್‍ನನ್ನು ಅಡ್ಡಗಟ್ಟಿದ ಹಂತಕರು ಅಟ್ಟಾಡಿಸಿ ಕೊಲೆ ಮಾಡಿದ್ದರು ಎಂದು ಅಧಿಕಾರಿಗಳು  ಹೇಳಿದ್ದಾರೆ.

ಅರುಣ್ ವಿರುದ್ಧ ಹಲವು ಪ್ರಕರಣಗಳು:
ಬಂಧಿತ ಅರುಣ್ ಹಲವು ವರ್ಷಗಳಿಂದ ಅಪರಾಧ  ಚಟುವಟಿಕೆಯಲ್ಲಿ ತೊಡಗಿದ್ದ. ಈತನ ವಿರುದ್ಧ ರಾಜರಾಜೇಶ್ವರಿ ನಗರ, ಬಸವೇಶ್ವರ ನಗರ,  ಚಂದ್ರಾಲೇಔಟ್, ವಿಜಯನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ನಗರದ ಇತರೆ ಠಾಣೆಗಳಲ್ಲಿ  ಕೊಲೆ, ಕೊಲೆ ಯತ್ನ, ದರೋಡೆ, ಪ್ರಾಣ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು  ದಾಖಲಾಗಿವೆ. ಹೀಗಾಗಿ, ಅರುಣ್ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ರೌಡಿ  ಪಟ್ಟಿ ತೆರೆಯಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಸುಳಿವು ನೀಡಿದ ವ್ಯವಹಾರ
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ, ವೈಷಮ್ಯದಿಂದಲೇ ಕೃತ್ಯ  ನಡೆದಿರುವ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಉಮೇಶ್ ಜತೆ ವ್ಯವಹಾರ ನಡೆಸುತ್ತಿದ್ದ  ವ್ಯಕ್ತಿಗಳ ಬಗ್ಗೆ ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹಿಸಿದಾಗ ಅರುಣ್ ಮೇಲೆ ಅನುಮಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ತಂಡ ಫೋನ್ ಕರೆಗಳು ಸೇರಿದಂತೆ ವಿವಿಧ  ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ಯ ನಶೆಯಲ್ಲಿ ಕಾರುಗಳಿಗೆ ಕಲ್ಲಿನೇಟು
ಮದ್ಯದ ನಶೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಜಖಂಗೊಳಿಸಿ ಪರಾರಿಯಾಗು ತ್ತಿದ್ದ ವಿದ್ಯಾರ್ಥಿಗಳನ್ನು ಹಿಡಿದು ಥಳಿಸಿದ ಸಾರ್ವಜನಿಕರು, ನಂತರ  ಅವರನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.

ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ, ರಾಜು, ಸಚಿನ್,   ವಿನಯ್, ಭರತ್, ಜಯಂತ್ ಹಾಗೂ ಸಂಜಯ್ ಬಂಧಿತರು. ಎಲ್ಲರೂ ಚಾಮರಾಜಪೇಟೆ ಹಾಗೂ  .ದಾಸರಹಳ್ಳಿ ವಾಸಿಗಳು ಎಂದು ಪೊಲೀಸರು ಹೇಳಿದ್ದಾರೆ.

ಶನಿವಾರ ತಡರಾತ್ರಿ ಮದ್ಯದ ನಶೆಯಲ್ಲಿ ಮೂರು ಬೈಕ್‍ನಲ್ಲಿ ಆಗಮಿಸಿದ್ದ 7 ಕಿಡಿಗೇಡಿಗಳು ವಿಜಯನಗರದ ಎಂಸಿ ಲೇಔಟ್ ಹಾಗೂ ಗೋವಿಂದರಾಜ ನಗರದಲ್ಲಿ ಮನೆಗಳ ಮುಂದೆ  ನಿಲ್ಲಿಸಿದ್ದ  7 ಕಾರುಗಳ ಮೇಲೆ ಕಲ್ಲುಗಳನ್ನು ತೂರಾಟ ನಡೆಸಿ  ಜಖಂಗೊಳಿಸಲು  ಆರಂಭಿಸಿದರು.  ಸದ್ದು ಕೇಳಿ ಸ್ಥಳೀಯರು ಎಚ್ಚರಗೊಂಡಾಗ ಕಿಡಿಗೇಡಿಗಳು ಗಾಜು ಒಡೆದು ಸ್ಥಳದಿಂದ ಪರಾರಿಯಾಗುತ್ತಿದ್ದರು. ಈ ವೇಳೆ ಧೈರ್ಯ ಮಾಡಿದ ಸ್ಥಳೀಯರು ಬೈಕ್ ನಲ್ಲಿದ್ದ ನಾಲ್ವರನ್ನು ಹಿಡಿದು ಥಳಿಸಿ ವಿಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಿಡಿಗೇಡಿಗಳ  ಹಿಡಿದುಕೊಳ್ಳುವ ಯತ್ನದಲ್ಲಿ ಗೋವಿಂದರಾಜನಗರ ನಿವಾಸಿ ಕ್ಯಾಬ್ ಚಾಲಕ ಸುನೀಲ್  ಮಾರ್  ಎಂಬುವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸುನೀಲ್ ಅವರ ಇಂಡಿಕಾ ಕಾರು ಜಖಂಗೊಂಡಿದೆ. ಬಂಧಿತರು ನೀಡಿದ ಮಾಹಿತಿ ಆಧಾರಿಸಿ ಉಳಿದ ಮೂವರನ್ನು ಬಂಧಿಸಲಾಗಿದೆ.  ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com