ತಮ್ಮ ಹಕ್ಕು ಕಸಿದುಕೊಂಡಿದೆ: ಲೈಂಗಿಕ ಅಲ್ಪಸಂಖ್ಯಾತರ ಆರೋಪ

ಭಾರತೀಯ ದಂಡಸಂಹಿತೆ ಕಲಂ 377ಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಮಾನ್ಯತೆ ತೆಗೆದುಹಾಕುವಂತೆ ಆಗ್ರಹಿಸಿ ಲೈಂಗಿಕ...
ಪ್ರತಿಭಟನೆಯಲ್ಲಿ ತೊಡಗಿದ್ದ ಲೈಂಗಿಕ ಅಲ್ಪಸಂಖ್ಯಾತರು ತಮ್ಮ ವಿವಿಧ ವೇಷಭೂಷಣಗಳ ಮೂಲಕ ಗಮನ ಸೆಳೆದರು.
ಪ್ರತಿಭಟನೆಯಲ್ಲಿ ತೊಡಗಿದ್ದ ಲೈಂಗಿಕ ಅಲ್ಪಸಂಖ್ಯಾತರು ತಮ್ಮ ವಿವಿಧ ವೇಷಭೂಷಣಗಳ ಮೂಲಕ ಗಮನ ಸೆಳೆದರು.

ಬೆಂಗಳೂರು: ಭಾರತೀಯ ದಂಡಸಂಹಿತೆ ಕಲಂ 377ಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಮಾನ್ಯತೆ ತೆಗೆದುಹಾಕುವಂತೆ ಆಗ್ರಹಿಸಿ ಲೈಂಗಿಕ ಅಲ್ಪಸಂಖ್ಯಾತರ ಮತ್ತು ಲೈಂಗಿಕ ಕಾರ್ಮಿಕರ ಹಕ್ಕುಗಳ ಆಂದೋಲನಾ ಸಂಘಟನೆಗಳ ಸದಸ್ಯರು ಭಾನುವಾರ ನಗರದಲ್ಲಿ  ಪ್ರತಿಭಟನೆ ನಡೆಸಿದರು.

ಸುಪ್ರೀಂ ಕೋರ್ಟ್ ಸೆಕ್ಷನ್ 377ಕ್ಕೆ ಮಾನ್ಯತೆ ನೀಡುವ ಮೂಲಕ ವಯಸ್ಕರ ನಡುವೆ ಒಪ್ಪಂದದ ಮೇರೆಗೆ ಆಗುವ ಲೈಂಗಿಕ ಕ್ರಿಯೆಯನ್ನು ಅಪರಾಧ ಎಂದು ಘೋಷಿಸಿದೆ. ಭಾರತದಲ್ಲಿ ಇದು ಸ್ವಾಭಾವಿಕ ಹಾಗೂ ಸಹಜವಲ್ಲ ಎಂದು ಹೇಳಲಾಗಿದೆ. ಇದರಿಂದ ತಮ್ಮ ಮೂಲಭೂತ  ಹಕ್ಕುಗಳಿಗೆ ಧಕ್ಕೆಯಾಗಿದ್ದು, ಸರ್ಕಾರ ತಮ್ಮ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಲೈಂಗಿಕ ಅಲ್ಪಸಂಖ್ಯಾತರಾದ ಅಕಾಯ್ ಪದ್ಮಶಾಲಿ  ಮಾತನಾಡಿ, ಸರ್ಕಾರ ಇಂತಹ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಲೈಂಗಿಕ  ಅಲ್ಪಸಂಖ್ಯಾತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ಅವರು ಕಷ್ಟಕರ ಜೀವನ ನಡೆಸುವಂತೆ  ಮಾಡಿದೆ. ಮತ್ತೊಂದೆಡೆ ಈ ಹಿಂದಿನ ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಪೊಲೀಸ್  ಕಣ್ಗಾವಲು ಇಡುವಂತೆ  ಕಲಂ 36ಎ ಜಾರಿಗೆ ತಂದಿತ್ತು. ಈ ಮೂಲಕವೂ ತಮಗೆ ಸಾಕಷ್ಟು  ತೊಂದರೆ ನೀಡಲಾಗುತ್ತಿದೆ. ಅದನ್ನು ಸಹ ವಾಪಸ್ ಪಡೆಯಬೇಕು. ಈ ಕಾಯ್ದೆಯಿಂದ ತಮ್ಮ  ಮೇಲೆ ಸುಳ್ಳು ದೂರು ದಾಖಲಿಸಲಾಗುತ್ತಿದೆ. ಹಾಗಾಗಿ ಈ ಕಾಯ್ದೆಯನ್ನೂ ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ವೊಚ್ಚ ನ್ಯಾಯಾಲಯದ  ದೇಶವನ್ನು ಸಮರ್ಪಕವಾಗಿ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು. ಮನೆ ಕೆಲಸದ  ಸ್ಥಳಗಳಲ್ಲಿ, ರಸ್ತೆಗಳಲ್ಲಿ ಮತ್ತು ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಆಗುತ್ತಿರುವ ತಾರತಮ್ಯ ನಿಲ್ಲಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಲಿಂಗತ್ವ ಅಲ್ಪಸಂಖ್ಯಾತರ  ಹಕ್ಕುಗಳ ಮಸೂದೆ ಕುರಿತು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಮಾವೇಶವನ್ನು ಆಯೋಜಿಸಿ, ಶೀಘ್ರದಲ್ಲಿ ಅನುಷ್ಠಾನ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಭಾನುವಾರ ನಗರದ ಮೆಜೆಸ್ಟಿಕ್ ಸಮೀಪದ ತುಳಸಿ ತೋಟದಿಂದ ಮೆರವಣಿಗೆ ಹೊರಟ  ಲೈಂಗಿಕ ಅಲ್ಪಸಂಖ್ಯಾತರು ಫ್ರೀಡಂ ಪಾರ್ಕ್ ತಲುಪಿ ಹಡ್ಸನ್ ವೃತ್ತದ ಮುಖಾಂತರ ಮೆರವಣಿಗೆ ಸಾಗುವ  ಮೂಲಕ ಪುರಭವನ ತಲುಪಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com