ಪದಚ್ಯುತಿಗೆ ಅಧಿಕೃತ ಅಡಿ

ಶಾಸಕರು ಹಾಗೂ ಸಾರ್ವಜನಿಕರ ಪ್ರಬಲ ವಿರೋಧದ ನಡುವೆಯೂ ಉಪ ಲೋಕಾಯುಕ್ತ ಸುಭಾಷ್ ಅಡಿ ಪದಚ್ಯುತಿ ಪ್ರಕ್ರಿಯೆಗೆ ಶುಕ್ರವಾರ ಅಧಿಕೃತ ಚಾಲನೆ ದೊರೆತಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ವಿಧಾನಸಭೆ: ಶಾಸಕರು ಹಾಗೂ ಸಾರ್ವಜನಿಕರ ಪ್ರಬಲ ವಿರೋಧದ ನಡುವೆಯೂ ಉಪ ಲೋಕಾಯುಕ್ತ ಸುಭಾಷ್ ಅಡಿ ಪದಚ್ಯುತಿ ಪ್ರಕ್ರಿಯೆಗೆ ಶುಕ್ರವಾರ ಅಧಿಕೃತ ಚಾಲನೆ ದೊರೆತಿದೆ.

ಸದನದಲ್ಲಿ ಕಾಂಗ್ರೆಸ್ ಮಂಡಿಸಿದ ಪದಚ್ಯುತಿ ಗೊತ್ತುವಳಿ ಪ್ರಸ್ತಾಪವನ್ನು ಶುಕ್ರವಾರ ಸ್ವೀಕರಿಸಲಾಗಿದ್ದು, ಇದರೊಂದಿಗೆ ಲೋಕಾಯುಕ್ತ ಭಾಸ್ಕರ್ ರಾವ್ ಜತೆ ಉಪ ಲೋಕಾಯುಕ್ತರನ್ನೂ ಪದಚ್ಯುತಿಗೊಳಿಸುವ ಪ್ರಯತ್ನದಲ್ಲಿ ಸರ್ಕಾರ ಭಾಗಶಃ ಯಶಸ್ಸು ಕಂಡಂತಾಗಿದೆ. ಅಂದರೆ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಪದಚ್ಯುತಿ ವಿಚಾರ ಸದ್ಯ ಯಾವ ಹಂತ ತಲುಪಿದೆಯೋ ಅದೇ ಹಂತಕ್ಕೆ ಉಪಲೋಕಾಯುಕ್ತರ ಪದಚ್ಯುತಿ ವಿಚಾರವೂ ಬಂದಿದೆ. ಆದರೆ, ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಮೇಲಿರುವ ಆರೋಪಗಳಿಗೂ ಉಪ ಲೋಕಾಯುಕ್ತ ನ್ಯಾ.ಅಡಿ ವಿರುದ್ಧದ ಆರೋಪಗಳಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಇದರಿಂದ ಕಾಂಗ್ರೆಸ್ ವಿರೋಧ ಎದುರಿಸುವಂತಾಗಿದೆ.

ಬಿಜೆಪಿ ಕಡು ವಿರೋಧ: ನ್ಯಾ. ಸುಭಾಷ್ ಅಡಿ ಪದಚ್ಯುತಿಗೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸದನದಲ್ಲಿ 3 ದಿನಗಳಿಂದ ಹೋರಾಟ ನಡೆಸುತ್ತಲೇ ಇದೆ. ಆದರೆ ಜೆಡಿಎಸ್ ತಟಸ್ಥವಾಗಿದೆ. ಇದೇ ರೀತಿ ಸದನದ ಹೊರಗೆ ಕೂಡ ಬಿಜೆಪಿ ಹೋರಾಟ ಮುಂದುವರಿಸಿದೆ. ಜತೆಗೆ ಕಾಂಗ್ರೆಸ್ ನಡೆಗೆ ವಕೀಲರ ಪರಿಷತ್ ಹಾಗೂ ಹಿರಿಯ ನ್ಯಾಯವಾದಿಗಳು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ವೀರಶೈವ ವೇದಿಕೆ ಸೇರಿದಂತೆ ಕೆಲ ಸಂಘಟನೆಗಳೂ ಪದಚ್ಯುತಿ ಪ್ರಯತ್ನವನ್ನು ಖಂಡಿಸಿವೆ. ಇನ್ನೂ ವಿಚಿತ್ರವೆಂದರೆ, ಸುಭಾಷ್ ಅಡಿ ಪದಚ್ಯುತಿಗೆ ಕಾಂಗ್ರೆಸ್‍ನಲ್ಲೇ
ವಿರೋಧ ವ್ಯಕ್ತವಾಗಿದೆ.

ಶಾಸಕಾಂಗ ಪಕ್ಷ ಸಭೆಯಲ್ಲೇ ಅನೇಕರು ವಿರೋಧಿಸಿದ್ದಾರೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದ ಕೆಲವು ಮುಖಂಡರು 78 ಶಾಸಕರ ಸಹಿ ಪಡೆದು ವಿಧಾನಸಭೆಯಲ್ಲಿ ಪ್ರಸ್ತಾವವನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದ್ದರು. ಆ ಪ್ರಸ್ತಾವಕ್ಕೆ ಸದನದ ಒಪ್ಪಿಗೆ ದೊರೆತಿರುವುದರಿಂದ ಪದಚ್ಯುತಿ ಪ್ರಕರಣ ಈಗ ಪ್ರಮುಖ ಘಟ್ಟಕ್ಕೆ ಬಂದು ನಿಂತಿದೆ.

ಸದನದಲ್ಲಿ ನಡೆದಿದ್ದೇನು?: ವಿಧಾನಸಭೆಯಲ್ಲಿ ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ
ಲಂಚ ಪ್ರಕರಣದ ಸಂಬಂಧ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಸದಸ್ಯರು ಶುಕ್ರವಾರವೂ ಸದನದ ಮುಂದಿನ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದ್ದರು. ಆಗ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿಧೇಯಕಗಳನ್ನು ಮಂಡಿಸಲು ಅವಕಾಶ ನೀಡಿದರು. ಅದು ಪೂರ್ಣವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಲೋಕಾಯುಕ್ತ ತಿದ್ದುಪಡಿ ಕಾಯ್ದೆ ಪ್ರಕಾರ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಅಡಿ ಪದಚ್ಯುತಿ ಗೊತ್ತುವಳಿ ಮಂಡಿಸಿದರು.

ತನ್ವೀರ್ ಸೇಠ್ ಮಂಡಿಸಿದ ಪ್ರಸ್ತಾವವನ್ನು ಸ್ವೀಕರಿಸಲಾಗಿದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಪ್ರಕಟಿಸಿದರು.ಆಂಜನೇಯರಿಂದ ಅಡಿಯತ್ತ: ಆಗ ಸಿಟ್ಟಿಗೆದ್ದ ಬಿಜೆಪಿ  ಸದಸ್ಯರು, ಆಂಜನೇಯ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆಯನ್ನು ಉಪ ಲೋಕಾಯುಕ್ತ ಪದಚ್ಯುತಿ ಕಡೆಗೆ ತಿರುಗಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ನ್ಯಾ. ಸುಭಾಷ್ ಅಡಿ ವಿರುದ್ಧದ ಈ ಗೊತ್ತುವಳಿಯನ್ನು ತಿರಸ್ಕರಿಸಬೇಕು.

ಯಾವುದೇ ಆರೋಪಗಳಿಲ್ಲದ ಅವರನ್ನು ದುರುದ್ದೇಶದಿಂದ ಪದಚ್ಯುತಿಗೊಳಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ದೂರಿದರು. ಗೊತ್ತುವಳಿಯನ್ನು ಸ್ವೀಕರಿಸುವ ಮುನ್ನ ನ್ಯಾ. ಸುಭಾಷ್ ಅಡಿ ವಿರುದ್ಧ ಇರುವ ಆರೋಪಗಳನ್ನು ಸದನದಲ್ಲಿ ಪ್ರಸ್ತಾಪಿಸಬೇಕು. ಅದಕ್ಕೆ ಲಭ್ಯವಾಗಿರುವ ದಾಖಲೆಗಳನ್ನು ಬಹಿರಂಗಗೊಳಿಸಬೇಕು. ಹಾಗೊಂದು ವೇಳೆ, ಗೊತ್ತುವಳಿಯನ್ನು ಸ್ವೀಕರಿಸಬೇಕಾದರೆ ವಿಚಾರವನ್ನು ಮತಕ್ಕೆ ಹಾಕಬೇಕು. ಹೆಚ್ಚು ಮತ ಲಭ್ಯವಾದರೆ ಸ್ವೀಕರಿಸಲಿ. ಇಲ್ಲವಾದರೆ ಬೇಡ ಎಂದು ವಾದಿಸಿದರು. ಇದಕ್ಕೆ ಸ್ಪೀಕರ್ ಸಮ್ಮತಿಸಲಿಲ್ಲ. ಆಗ ಜಗದೀಶ್ ಶೆಟ್ಟರ್, ಇದು ಸಂಪೂರ್ಣ ನಿಯಮಬಾಹಿರ ಕ್ರಮ. ಆರೋಪಗಳ ಮಾಹಿತಿ ಬಹಿರಂಗ ಮಾಡದೆ, ಗೊತ್ತುವಳಿಯನ್ನು ಮತಕ್ಕೆ ಹಾಕದೆ ಸ್ವೀಕರಿಸುವುದು ಅಸಂಸದೀಯ ಕ್ರಮ ಎಂದು ಖಂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com