
ವಿಧಾನಸಭೆ: ರಾಜ್ಯದಲ್ಲಿ ಹೆಚ್ಚುತ್ತಿರುವ ಮರಳು ಸಮಸ್ಯೆ ಪರಿಹರಿಸಲು ಸರ್ಕಾರವೇ ಮರಳು ಮಾರಾಟ ಮಾಡಲು ಡಿಪೋಗಳನ್ನು ಸ್ಥಾಪಿಸಬೇಕು ಎಂದು ಅಕ್ರಮ ಮರಳುಗಾರಿಕೆ ಕುರಿತ ವಿಧಾನಸಭೆ ಅಧ್ಯಯನ ತಂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ಮರಳುಗಾರಿಕೆ ಮತ್ತು ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಅಧ್ಯಯನ ನಡೆಸಲು ಸ್ವೀಕರ್ ಕಾಗೋಡು ತಿಮ್ಮಪ್ಪ ಫೆ. 5ರಂದು ವಿಧಾನಸಭಾ ಸದಸ್ಯರ ಅಧ್ಯಯನ ತಂಡ ರಚಿಸಿದ್ದರು. ತಂಡದ ಅಧ್ಯಕ್ಷ ಹಾಗೂ ತುಮಕೂರು ಶಾಸಕ ಡಾ.ರಫಿಕ್ ಅಹಮ್ಮದ್ ಎಸ್. ಮಧ್ಯಂತರ ವರದಿಯನ್ನು ಸದನದಲ್ಲಿ ಮಂಡಿಸಿದರು.
ಸುಮಾರು 19 ಶಿಫಾರಸುಗಳನ್ನು ನೀಡಿರುವ ಅಧ್ಯಯನ ತಂಡ, ಅಕ್ರಮ ಮರಳು ಗಣಿಗಾರಿಕೆ ವಿಚಾರವನ್ನು ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು. ಒಂದು ವೇಳೆ, ಇವರಲ್ಲಿ ಯಾರಾದರೂ ಪೊಲೀಸರಿಗೆ ದೂರು ನೀಡಿದರೆ ಮಾತ್ರ ಪೊಲೀಸರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪೊಲೀಸರು ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದೆ.
ಮರಳು ಬೇಡಿಕೆ ಪೂರೈಸಲು ಸರ್ಕಾರವೇ ಗಣಿಗಾರಿಕೆ ಪ್ರದೇಶದಿಂದ ಮರಳು ತಂದು ಸಾರ್ವಜನಿಕರಿಗೆ ನೀಡಬೇಕು. ಇದಕ್ಕಾಗಿ ಮರಳು ಡಿಪೋಗಳನ್ನು ಆರಂಭಿಸಿ ಸಣ್ಣ ಬಳಕೆದಾರರಿಗೆ ಸುಲಭವಾಗಿ ಸಿಗುವಂತೆ ಮಾಡಬೇಕು. ಇದನ್ನು ಮೊದಲು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿ ನಂತರ ವಿಸ್ತರಿಸಬೇಕು. ಈ ಹೊಣೆಯನ್ನು ಮೈಸೂರು ಮಿನರಲ್ಸ್ ಸಂಸ್ಥೆಗೆ ವಹಿಸಬೇಕು ಎಂದು ಸಲಹೆ ನೀಡಿದೆ. ಮರಳು ಬೇಡಿಕೆ ಹೆಚ್ಚುತ್ತಿರುವುದರಿಂದ ಎಂ.ಸ್ಯಾಂಡ್ ಘಟಕಗಳ ಸ್ಥಾಪನೆಗೆ ಅನುಮತಿ ನೀಡುವ ನೀತಿಯನ್ನು ಸರಳಗೊಳಿಸಬೇಕು. ಅದಕ್ಕಾಗಿ ಸಬ್ಸಿಡಿ, ವಿನಾಯಿತಿ ಮತ್ತು ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಂಡ ವರದಿಯಲ್ಲಿ ತಿಳಿಸಲಾಗಿದೆ.
Advertisement