
ಬೆಂಗಳೂರು: ಹಿರಿಯ ಸಾಹಿತಿ, ದಾಸ ಸಾಹಿತ್ಯ ವಿದ್ವಾಂಸರಾದ ಡಾ. ಸ್ವಾಮಿರಾವ್ ಕುಲಕರ್ಣಿ ಅವರಿಗೆ ಕರ್ನಾಟಕ ರಾಜ್ಯ ನೀಡುವ ರಾಜ್ಯ ಮಟ್ಟದ ಕನಕಶ್ರೀ ಪ್ರಶಸ್ತಿ ದೊರಕಿದೆ.
ಕನಕದಾಸ ಜಯಂತಿ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಸಭಾಗೃಹದಲ್ಲಿ ನ.28ರಂದು ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ರು. 5 ಲಕ್ಷ ನಗದು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಸ್ವಾಮಿರಾವ್ ಕುಲಕರ್ಣಿ 35 ವರ್ಷ ಕಾಲ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಕ್ಷೇತ್ರ ಕಾರ್ಯದ ಮುಖಾಂತರ ಈ ಭಾಗದ ದಾಸರ ಬದುಕು ಹಾಗೂ ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಇಸ್ಲಾಂ ಧರ್ಮದ ಬಡೇ ಸಾಬ್ ಶ್ರೀರಾಮದಾಸರು ದಾಸ ಸಾಹಿತ್ಯಕ್ಕೆ ನೀಡಿರುವ ಸಾವಿರಾರು ಕೀರ್ತನೆಗಳು ಸಂಗ್ರಹಿಸಿ ಅವರ ಕುರಿತು ಡಾ. ಚನ್ನಣ್ಣ ವಾಲೀಕಾರ್ ಮಾರ್ಗದರ್ಶನದಲ್ಲಿ 1995ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಹರಿದಾಸ ಸಾಹಿತ್ಯ ವಿಚಾರ ವಾಹಿನಿ ಸಂಸ್ಥಾಪಕ ಅಧ್ಯಕ್ಷರಾಗಿ 15ವರ್ಷಗಳಿಂದ ಹರಿದಾಸ ವೈಭವ ಎಂಬ ಕಾರ್ಯಕ್ರಮದ ಮೂಲಕ ದಾಸರ ಸಾಮಾಜಿಕ, ವೈಚಾರಿಕ ಚಿಂತನೆಗಳನ್ನು ಜನಮನಕ್ಕೆ ಮುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ದಾಸ ಸಾಹಿತ್ಯದ ವಿವಿಧ ವಿಷಯ ಕುರಿತು ಈವರೆಗೆ ಸ್ವಾಮಿರಾವ್ ಅವರ 12 ಪುಸ್ತಕಗಳು ಪ್ರಕಟವಾಗಿವೆ.
Advertisement