ಕವಿಮನೆಗೆ ಕನ್ನವಿಕ್ಕಿದ ಮೂವರ ಬಂಧನ

ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ಕವಿಮನೆಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ...
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ಕವಿಮನೆಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ತುರ್ಚಘಟ್ಟದ ರೇವಣ ಸಿದ್ದಪ್ಪ ಅಲಿಯಾಸ್ ಕಾಯಕದ ರೇವಣ್ಣ(56), ಆತನಿಗೆ ನೆರವು ನೀಡಿದ್ದ ಅಂಜನಪ್ಪ(45), ಕಳುವಾಗಿದ್ದ ಪದಕಗಳನ್ನು ಖರೀದಿಸಿದ್ದ ಪ್ರಕಾಶ(48) ಎಂಬುವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಪದಕ ಅಳವಡಿಸಲು ಬಳಸುತ್ತಿದ್ದ ಪಟ್ಟಿಯನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಆದರೆ, ಪದ್ಮವಿಭೂಷಮ ಪದಕ ಸಿಕ್ಕಿಲ್ಲ. ಅದು ಕಳೆದುಹೋಗಿದೆ ಎಂದು ರೇವಣ ಸಿದ್ದಪ್ಪ ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ. ರೇವಣ್ಣ ಈ ಹಿಂದೆಯೂ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಶಿವಮೊಗ್ಗ, ದಾವಣಗೆರೆ, ದಾವಣಗೆರೆ ಗ್ರಾಮಾಂತರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಒಟ್ಟು 13 ಕಳ್ಳತನ ಪ್ರಕರಣಗಳಿವೆ.
ಕವಿಮನೆಯಲ್ಲಿ ಕಳ್ಳತನ ಡುವಾಗ ಸಿಸಿಟಿವಿಯಲ್ಲಿ ದಾಖಲಾಗಿದ್ದ ಮುಖಚರ್ಯೆ ಆಧಾರದ ಮೇಲೆ ದಾವಣಗೆರೆ ಆಂತರಿಕ ಭದ್ರತಾ ಸಿಬ್ಬಂದಿ ಕಾಯಕದ ರೇವಣ್ಣಗುರುವಾರ ರಾತ್ರಿ ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಸತ್ಯ ಬಯಲಾಗಿದೆ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ನಂಜುಂಡಸ್ವಾಮಿ ತಿಳಿಸಿದ್ದಾರೆ.
ರೇವಣ್ಣ ವಿರುದ್ಧ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ಹೊಳೆ ಹೊನ್ನೂರು, ಕುಂಸಿ, ದಾವಣಗೆರೆ ಜಿಲ್ಲೆಯ ಬಡಾವಣೆ ಠಾಣೆ, ದಾವಣಗೆರೆ ಗ್ರಾಮಾಂತರ, ಬಂದೂರು ಕ್ಯಾಂಪ್ ಠಾಣೆ, ವಿದ್ಯಾನಗರ, ನ್ಯಾಮತಿ ಠಾಣೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿದ್ದು, ಐದು ಪ್ರಕರಣಗಳಲ್ಲಿ ಸಜೆಯಾಗಿದೆ. ಒಂದು ಪ್ರಕರಣದಲ್ಲಿ ಖುಲಾಸೆಯಾಗಿದೆ. ಇವುಗಳಲ್ಲಿ 11 ಪ್ರಕರಣ ದೇವಸ್ಥಾನದಲ್ಲಿ ಕಳವು ನಡೆದ ಪ್ರಕರಣಗಳಾಗಿದ್ದರೆ ಒಂದು ಗ್ರಾಪಂ ಕಚೇರಿಯಲ್ಲಿ ಕಳ್ಳತನ, ಮತ್ತೊಂದು ಪ್ರಾಥಮಿಕ ಶಾಲೆಯಲ್ಲಿ ನಡೆದ ಕಳ್ಳತನದ ಪ್ರಕರಣ. ಪೂರ್ವಲಯ ಪೊಲೀಸ್ ಮಹಾನಿರೀಕ್ಷಕ ಡಾ.ನಂಜುಂಡಸ್ವಾಮಿ ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದರು. 
ಅಂಜನಪ್ಪ ಮೂಲತಃ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಾತ. ಹಲವು ವರ್ಷದಿಂದ ಕವಿಮನೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದಾನೆ. ಹಾಲಿ ಕುಪ್ಪಳಿ ಸಮೀಪದ ಗಡಿಕಲ್ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಪೊಲೀಸರು ತನಿಖೆಗೆಂದು ಕವಿಮನೆಗೆ ಆಗಮಿಸಿದ್ದಾಗ ಈತ ಸ್ಥಳದಲ್ಲೇ ಇದ್ದ. ಶಿವಮೊಗ್ಗ ತಾಲೂಕು ಮಂಡರಹಳ್ಳಿಯ ಪ್ರಕಾಶ ಕಳವು ಮಾಡಿದ್ದ ಪದಕಗಳನ್ನು ರು.10,000 ನೀಡಿ ಖರೀದಿಸಿದ್ದ.
ಮ್ಯೂಸಿಯಂನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಕಂಡು ಬಂದ ಚಹರೆ ಆಧಾರದ ಮೇಲೆ ದಾವಣಗೆರೆಯ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಸಿಬ್ಬಂದಿ ಅವರು ಕಾಯಕದ ರೇವಣ್ಣನಿಂದಲೇ ಆಗಿರುವ ಕೃತ್ಯವೆಂದು ಪತ್ತೆ ಮಾಡಿದರು. ಕೂಡಲೇ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದೊರೆತ ಮಾಹಿತಿಯಂತೆ ಅಂಜನಪ್ಪ ಹಾಗೂ ಪ್ರಕಶಾನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ. ಪದ್ಮವಿಭೂಷಣ ಪ್ರಶಸ್ತಿ ಪದಕಗಳನ್ನು ಹುಡುಕುತ್ತಿದ್ದೇವೆ. ಬೇಗನೇ ಸಿಗುವ ವಿಶ್ವಾಸವಿದೆ ಎಂದು ಐಜಿ ಡಾ.ನಂಜುಂಡಸ್ವಾಮಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com