
ತುಮಕೂರು: ಮಲಹೊರುವ ಪದ್ಧತಿಯನ್ನು ಸರ್ಕಾರ ನಿಷೇಧಿಸಿದ್ದರೂ ಪಾಯಿಖಾನೆ ಗುಂಡಿಗಿಳಿದಿದ್ದ ಇಬ್ಬರು ಪೌರಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಧಾರುಣ ಘಟನೆ ತುಮಕೂರಿನಲ್ಲಿ ಶನಿವಾರ ನಡೆದಿದೆ.
ಸರಸ್ವತಿಪುರಂನ ಗುತ್ತಿಗೆದಾರ ಕೆಂಪನರಸಯ್ಯ ಎಂಬುವರ ಮನೆಯ ಪಾಯಿಖಾನೆ ಸ್ವಚ್ಛಗೊಳಿಸಲು ಕುರಿಪಾಳ್ಯದ ನಿವಾಸಿಗಳಾದ ಮೂರ್ತಿ (34), ಚಿಕ್ಕಣ್ಣ (37) ಮಲದ ಗುಂಡಿಗೆ ಇಳಿದಿದ್ದಾರೆ. ಪಾಯಿಖಾನೆ ಗುಂಡಿಗೆ ಇಳಿದು 10 ನಿಮಿಷ ಕೂಡ ಕಳೆದಿರಲಿಲ್ಲ. ಇಬ್ಬರೂ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ. ತುಮಕೂರಿನ ಸರಸ್ವತಿಪುರಂನ ದೇವರಾಜು ಅರಸು ರಸ್ತೆಯ 6ನೇ ಕ್ರಾಸ್‍ನಲ್ಲಿರುವ ಕೆಂಪನರಸಯ್ಯ ಎಂಬ ಸಿವಿಲ್ ಕಂಟ್ರಾಕ್ಟರ್ ತಮ್ಮ ಮನೆಯ ಕಾಂಪೌಂಡ್‍ನಲ್ಲಿ 15 ಅಡಿ ಆಳದಲ್ಲಿ ಪಾಯಿಖಾನೆ ಗುಂಡಿ ಮಾಡಿದ್ದರು. ಈ ಶೌಚಗುಂಡಿ ತುಂಬಿದ್ದರಿಂದ ಅದನ್ನು ಸ್ವಚ್ಛಗೊಳಿಸಲು ಪೌರಕಾರ್ಮಿಕರನ್ನು ಕರೆತಂದಿದ್ದರು.
ಘಟನೆ ನಡೆದ ಕೂಡಲೇ ಮನೆ ಮಾಲೀಕ ಕೆಂಪನರಸಯ್ಯ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ಸಿಐಟಿಯು ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಮೃತ ಕುಟುಂಬದವರಿಗೆ ಪರಿಹಾರ ಘೋಷಣೆ ಮಾಡುವ ತನಕ ಶವ ಎತ್ತುವುದಿಲ್ಲವೆಂದು ಮನೆ ಮುಂದೆ ಧರಣಿ ಕುಳಿತರು. ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ¸ಸ್ಥಳಕ್ಕೆ ಆಗಮಿಸಿದ ತಿಲಕ್ ಪಾರ್ಕ್ ಪೊಲೀಸರು ಪರಿಸ್ಥಿತಿ ಶಮನಗೊಳಿಸಲು ಯತ್ನಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಬರುವ ತನಕ ಶವ ಎತ್ತುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆಗ ಜಿಲ್ಲಾಧಿಕಾರಿ ಮೋಹನ್‍ರಾಜ್, ಎಸ್ಪಿ ಕಾರ್ತಿಕ ರೆಡ್ಡಿ, ಮೇಯರ್ ಲಲಿತಾ ರವೀಶ್, ಪಾಲಿಕೆ ಆಯುಕ್ತ ಅಷಾದ್ ಆರ್. ಶರೀಫ್ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.
ಆದರೆ ರು.10 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದರು. ಕಡೆಗೆ ಜಿಲ್ಲಾಧಿಕಾರಿ ಮೋಹನ್ ರಾಜ್ ರು.5 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಕಾರರು ರು.10 ಲಕ್ಷ ಪರಿಹಾರ ಘೋಷಿಸದೇ ಇದ್ದರೆ ಶವ ಎತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ಜಿಲ್ಲಾಧಿಕಾರಿ ಮೋಹನ್ ರಾಜ್ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಮೃತರ ಕುಟುಂಬಕ್ಕೆ ತಲಾ ರು.10 ಲಕ್ಷ ಪರಿಹಾರ ಹಾಗೂ ಮನೆ ನಿರ್ಮಿಸಿ ಕೊಡುವುದು ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಶವ ಎತ್ತಿದರು. ಘಟನೆ ಹಿನ್ನೆಲೆಯಲ್ಲಿ ಮನೆ ಮಾಲಿಕ ಕೆಂಪನರಸಯ್ಯನ್ನು ಬಂಧಿಸಲಾಗಿದೆ.
ಮಲಹೊರುವ ಪದ್ಧತಿ ನಿಷೇಧವಿದ್ದರೂ ಈ ಕಾರ್ಯಕ್ಕೆ ಮನೆ ಮಾಲಿಕ ಪೌರಕಾರ್ಮಿಕರನ್ನು ಬಳಸಿಕೊಂಡಿದ್ದು ತಪ್ಪು. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮೃತ ಕುಟುಂಬದವರಿಗೆ ತಲಾ 10 ಲಕ್ಷ ರು. ಪರಿಹಾರ ನೀಡಲಾಗುವುದು.
-ಮೋಹನ್‍ರಾಜ್ ಜಿಲ್ಲಾಧಿಕಾರಿ
Advertisement