
ಬೆಂಗಳೂರು: ನಗರದ ದಯಾನಂದ ಸಾಗರ್ ಕಾಲೇಜಿನ ವಿದ್ಯಾರ್ಥಿ ಪ್ತೀಕ್ ಕುಮಾರ್ ಠಾಕೂರ್ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಹೈ ಕೋರ್ಟ್ ನಿರಾಕರಿಸಿದೆ.
ವಿದ್ಯಾರ್ಥಿ ಪ್ರತೀಕ್ ಕುಮಾರ್ ಠಾಕೂರ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಮೃತನ ತಂದೆ ಮನೋಜ್ ಕುಮಾರ್ ಠಾಕೂರ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾ.ರತ್ನಕಲಾ ಅವರ ಏಕಸದಸ್ಯ ಪೀಠ, ಗುರುವಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿ ಅರ್ಜಿ ಇತ್ಯರ್ಥಪಡಿಸಿತು.
ಸಿಐಡಿ ಮತ್ತು ಸಿಸಿಬಿ ತನಿಖಾ ಸಂಸ್ಥೆಗಳು ಈಗಾಗಲೇ ಪ್ರಕರಣದ ತನಿಖೆ ನಡೆಸಿ ಪ್ರತೀಕ್ ಕುಮಾರ್ ಸಾವು ಆಕಸ್ಮಿಕ ಅಥವಾ ಆತ್ಮಹತ್ಯೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿವೆ. ಜತೆಗೆ, ಸಿಬಿಐ ಸಹ ತನ್ನ ಮೇಲೆ ಹೆಚ್ಚಿನ ಕಾರ್ಯದೊತ್ತಡವಿದೆ. ಅನೇಕ ಪ್ರಕರಣಗಳು ತನಿಖೆಗೆ ಬಾಕಿ ಇದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಲಾಗದು ಎಂದು ಅಭಿಪ್ರಾಯಪಟ್ಟಿದೆ ಎಂದು ನ್ಯಾಯಪೀಠ ಅರ್ಜಿ ತಿರಸ್ಕರಿಸಿತು.
ಪ್ರಕರಣವೇನು?: ಜಾರ್ಖಂಡ್ ಮೂಲದ ಮನೋಜ್ ಕುಮಾರ್ ಠಾಕೂರ್ ಪುತ್ರ ಮೃತ ಪ್ರತೀಕ್ ಕುಮಾರ್ ಠಾಕೂರ್ ದಯಾನಂದ ಸಾಗರ್ ತಾಂತ್ರಿಕ ದ್ವಿತೀಯ ವರ್ಷದ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ. 2009ರ ಆ.13ರ ಬೆಳಗ್ಗೆ 11.40ಕ್ಕೆ ಕಾಲೇಜಿನ ಏಳನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದ. ಮೊದಲು ತನಿಖೆ ನಡೆಸಿದ್ದ ಕುಮಾರಸ್ವಾಮಿ ಲೇಔಟ್ ಮತ್ತು ಸಿಐಡಿ ಪೊಲೀಸರು ಇದನ್ನು ಆಕಸ್ಮಿಕ ಅಥವಾ ಆತ್ಮಹತ್ಯೆ ಸಾವು ಎಂದು ವರದಿ ನೀಡಿದ್ದರು.
Advertisement