ಬಾಷ್ ತಾಂತ್ರಿಕ ತರಬೇತಿ ಕೇಂದ್ರದಲ್ಲಿ ಮೋದಿ

ಜರ್ಮನಿ ಮೂಲದ ಪ್ರಮುಖ ಆಟೋಮ್ಯಾಟಿವ್ ಸಂಸ್ಥೆ ಬಾಷ್‍ನ ತಾಂತ್ರಿಕ ತರಬೇತಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ....
ಪ್ರಧಾನಿ ನರೇಂದ್ರಮೋದಿ ಮತ್ತು ಏಂಜೆಲಾ ಮಾರ್ಕೆಲ್
ಪ್ರಧಾನಿ ನರೇಂದ್ರಮೋದಿ ಮತ್ತು ಏಂಜೆಲಾ ಮಾರ್ಕೆಲ್

ಬೆಂಗಳೂರು: ಜರ್ಮನಿ ಮೂಲದ ಪ್ರಮುಖ ಆಟೋಮ್ಯಾಟಿವ್ ಸಂಸ್ಥೆ ಬಾಷ್‍ನ ತಾಂತ್ರಿಕ ತರಬೇತಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ಮಂಗಳವಾರ ಮೆಕ್ ಇನ್ ಇಂಡಿಯಾ ಸಂಚಾರ ನಡೆಸಿದರು.

ಆಡುಗೋಡಿಯಲ್ಲಿರುವ ತೀರಾ ಹಳೆಯದಾಗಿರುವ ಬಾಷ್‍ನಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ನೂತನ ಆವಿಷ್ಕಾರಗಳ ಅಭಿವೃದ್ಧಿಯನ್ನು ಮೋದಿ ಕೌತುಕದಿಂದ ವೀಕ್ಷಿಸಿದರು. ಮೇಕ್ ಇನ್ ಇಂಡಿಯಾ ದಿರಿಸಿನಲ್ಲಿ ಎಲ್ಲಾ ಯಂತ್ರೋಪಕರಣಗಳನ್ನೂ ಪರಿಶೀಲಿಸಿದರು. ಆದರೆ ಎಲ್ಲಿಯೂ ಮಾತನಾಡಲಿಲ್ಲ. ಇದೇ ವೇಳೆ ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಅವರು ಬಾಷ್‍ನಲ್ಲಿ ನಡೆಯುತ್ತಿರುವ ಜರ್ಮನ್ ತಂತ್ರಜ್ಞಾನ ಬಳಕೆ ಮತ್ತು ಅಭಿವೃದ್ಧಿಯನ್ನು ಪರಿಶೀಲಿಸಿದರು.

 ಕೇವಲ ಅರ್ಧ ತಾಸಿನ ಈ ಕಾರ್ಯಕ್ರಮದಲ್ಲಿ ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತ್ರ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿಯಲಿಲ್ಲ.
ಬಾಷ್ ತರಬೇತಿ ಕೇಂದ್ರದಲ್ಲಿ ಸಂಚರಿಸಿದ ಪ್ರಧಾನಿ ಮೋದಿ ಎಲ್ಲಿಯೂ ತುಟಿ ಬಿಚ್ಚುವ ಪ್ರಯತ್ನ ಮಾಡಲಿಲ್ಲ. ಆದರೆ ಜರ್ಮನಿ ಚಾನ್ಸಲರ್ ಏಂಜಲಾ ಸುಮ್ಮನಿರಲಿಲ್ಲ. ತರಬೇತಿದಾರರೊಂದಿಗೆ ಸಂವಾದ ನಡೆಸಿದರು. ಜರ್ಮನಿಯ ಈ ಸಂಸ್ಥೆ ಹೇಗೆಲ್ಲಾ ಸಹಕಾರಿಯಾಗಿದೆ ಎಂದು ವಿಚಾರಿಸಿದರು. ಮೊದಲಿಗೆ ಬಾಷ್‍ನ ಪ್ರಧಾನ ಕಚೇರಿಗೆ ಭೇಟಿ ನೀಡಿದ ಚಾನ್ಸಲರ್ ಏಂಜೆಲಾ ಮತ್ತು ಪ್ರಧಾನಿ ಮೋದಿ ತಂಡ ಅಲ್ಲಿ ನಡೆದ ಸಂಸ್ಥೆಯ ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಂಡರು. ನಂತರ ಜರ್ಮನ್ ಉನ್ನತಾಧಿಕಾರಿಗಳ ನಿಯೋಗದೊಂದಿಗೆ ಬಾಷ್ ಸಂಸ್ಥೆಯ ತರಬೇತಿ ಸಂಸ್ಥೆಗೆ ತೆರಳಿದರು. ಬಾಷ್ ಸಂಸ್ಥೆ ನಡೆಸುತ್ತಿರುವ ತರಬೇತಿಯ ವೈಖರಿ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ಪಡೆದರು. ನಂತರ ಸಂಸ್ಥೆ ನಡೆಸುತ್ತಿರುವ ಶೈಕ್ಷಣಿಕ ಚಟುವಟಿಕೆಗಳು ಮತ್ತು ತರಬೇತಿ ಕೋರ್ಸ್‍ಗಳ ಬಗ್ಗೆ ಚರ್ಚಿಸಿದರು.

ತರಬೇತಿ ಕೇಂದ್ರದ ಒಳಭಾಗಕ್ಕೆ ಪ್ರವೇಶಿಸುತ್ತಿದ್ದಂತೆ ಇಬ್ಬರೂ ಪ್ರಧಾನಿಗಳಿಗೂ ಬಾಷ್ ಸಂಸ್ಥೆಯ ಇತಿಹಾಸ ಮತ್ತು ತರಬೇತಿ ಕೇಂದ್ರದ ಚಟುವಟಿಕೆಗಳನ್ನು ವಿವರಿಸಲಾಯಿತು. ನಂತರ ಸದ್ಯ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ರೋಬೋಟಿಕ್ ತಂತ್ರಜ್ಞಾನ
ಕುರಿತ ಉಪಕರಣಗಳ ಅಭಿವೃದ್ಧಿ ಯೋಜನೆಯಲ್ಲಿ ನಿರತರಾಗಿದ್ದ ಪ್ರಶಿಕ್ಷಣಾರ್ಥಿಗಳನ್ನು ಇಬ್ಬರೂ ಗಣ್ಯರೂ ಭೇಟಿಯಾದರು. ಅಲ್ಲಿನ ಪ್ರಮುಖ ತರಬೇತಿ ವಿದ್ಯಾರ್ಥಿನಿ ಬೆಂಗಳೂರಿನ ಮಮತಾ ಅವರೊಂದಿಗೆ ಸಂವಾದ ನಡೆಸಿದರು. ಆಗ ಪ್ರಧಾನಿ ಮೋದಿ ಯಾವುದೇ ಪ್ರಶ್ನೆ ಕೇಳಲಿಲ್ಲ. ಆದರೆ ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಮಾತ್ರ, ಮಮತಾಗೆ ಕೆಲವು ಪ್ರಶ್ನೆಗಳನ್ನು ಹಾಕಿದರು. ತರಬೇತಿ ಸಮಯದಲ್ಲಿ ಸಹೋದ್ಯೋಗಿ ಯುವಕರ ಸಹಕಾರ ಹೇಗಿದೆ ಮತ್ತು ಈ ತರಬೇತಿಗೆ ಕಳುಹಿಸುತ್ತಿರುವ ಕುಟುಂಬದವರ ಸಹಕಾರ ಹೇಗಿದೆ ಎಂದು ಕೇಳಿದರು. ಈ ಎರಡೂ ಪ್ರಶ್ನೆಗಳಿಗೂ ವಿದ್ಯಾರ್ಥಿನಿ ಸಕಾರಾತ್ಮಕ ಉತ್ತರ ನೀಡುತ್ತಿದ್ದಂತೆ ಇಬ್ಬರೂ ಗಣ್ಯರೂ ಮಾಧ್ಯಮಗಳ ಮುಂದೆ ಹಾಜರಾದರು. ಆದರೆ ಯಾವುದೇ ಮಾತನಾಡಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com