ಭಾರತಿ ಅರಸ್ ಕುಮಾರಕೃಪಾ ಗೆಸ್ಟ್!

ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರ ಪುತ್ರಿ ಭಾರತಿ ಅರಸ್ ಅವರಿಗೆ ರಾಜ್ಯದ ಪ್ರತಿಷ್ಠಿತ ಕುಮಾರಕೃಪಾ ಅತಿಥಿಗೃಹದಲ್ಲಿ ಕಳೆದ ಎಂಟು ತಿಂಗಳಿಂದ ವಾಸ್ತವ್ಯ ಹೂಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವಕಾಶ ಕಲ್ಪಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರ ಪುತ್ರಿ ಭಾರತಿ ಅರಸ್ ಅವರಿಗೆ ರಾಜ್ಯದ ಪ್ರತಿಷ್ಠಿತ ಕುಮಾರಕೃಪಾ ಅತಿಥಿಗೃಹದಲ್ಲಿ ಕಳೆದ ಎಂಟು ತಿಂಗಳಿಂದ ವಾಸ್ತವ್ಯ ಹೂಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವಕಾಶ ಕಲ್ಪಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದವರೆಗೂ ಕುಮಾರಕೃಪಾ ಅತಿಥಿ ಗೃಹದಲ್ಲಿ ಭಾರತಿ ಅರಸ್ ರಾಜ್ಯದ ಅತಿಥಿಯಾಗಿಯೇ ವಾಸ್ತವ್ಯ ನಡೆಸಿ-ದ್ದರು. ರಾಹುಲ್ ಆಗಮನ ಸಂದರ್ಭದಲ್ಲಿ ಗಣ್ಯರಿಗೆ ಕುಮಾರಕೃಪಾದಲ್ಲಿ ಕೊಠಡಿ ಸಮಸ್ಯೆ ಎದುರಾದಾಗ ಅನಿವಾರ್ಯವಾಗಿ ಡಿಪಿಎಆರ್ ಸೂಚನೆ ಮೇರೆಗೆ ಶಿಷ್ಟಾಚಾರ ವಿಭಾಗದ ಅಧಿಕಾರಿಗಳು ಭಾರತಿ ಅರಸ್ ಅವರನ್ನು ಖಾಲಿ ಮಾಡಿಸಿದ್ದಾರೆ.

ಭಾರತಿ ಅರಸ್ ಅವರು ಇಷ್ಟು ದಿನ ಕುಮಾರಕೃಪಾದಲ್ಲಿ ತಂಗಿದ್ದರಿಂದ ಅತಿಥಿಗೃಹಕ್ಕೆ ಬರೋಬ್ಬರಿ ರು.1.9 ಲಕ್ಷ ಬಿಲ್ ಆಗಿದ್ದು, ಇದನ್ನು ಚುಕ್ತಾ ಮಾಡುವವರು ಯಾರು? ಎಂಬ ವಿವಾದ ಈಗ ಆರಂಭವಾಗಿದೆ.

ಏಕೆ ಹೀಗಾಯ್ತು?
ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಪುತ್ರಿ ಭಾರತಿ ಅರಸ್ ಅವರು ಚಿತ್ರಲೇಖಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಹಣದ ವ್ಯವಹಾರ ಸಂಬಂಧ ಭಾರತಿ ಅರಸ್ ಚಿತ್ರಲೇಖಾ ಅವರನ್ನು ತಮ್ಮ ಇಬ್ಬರು ಸಹಚರರ ಜತೆ ಸೇರಿ ಕೊಲೆ ಮಾಡಿ ಶಿರಾಡಿಘಾಟ್‍ನಲ್ಲಿ ಶವವನ್ನು ಬಿಸಾಡಿದ್ದರು ಎಂಬ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು. ಆದರೆ, ಸಾಕ್ಷ್ಯಾಧಾರದ ಅಭಾವ ಹಿನ್ನೆಲೆಯಲ್ಲಿ ಬೆಂಗಳೂರಿನ ತ್ವರಿತಗತಿ ನ್ಯಾಯಾಲಯ ಭಾರತಿ ಅರಸ್‍ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ಚಿತ್ರಲೇಖಾ ಅವರ ತಾಯಿ ಶಾರದಾ ಅರಸ್ ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಮನೆ ಇಲ್ಲದ್ದರಿಂದ, ನ್ಯಾಯಾಲಯದ ವಿಚಾರಣೆಗೆ ಮೈಸೂರಿನಿಂದ ಬೆಂಗಳೂರಿಗೆ ಬರಬೇಕಾಗುತ್ತದೆ. ಆ ಸಂದರ್ಭದಲ್ಲಿ ವಾಸ್ತವ್ಯದ ಸಮಸ್ಯೆಯಾಗುತ್ತದೆ ಎಂದು ಭಾರತಿ ಅರಸ್ ಅವರು ಕುಮಾರಕೃಪಾದಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ವಸತಿಭಾಗ್ಯ ಕಲ್ಪಿಸಲಾಗಿತ್ತು.

ಮುಖ್ಯಮಂತ್ರಿಯ ಅತಿಥಿ
ಕುಮಾರಕೃಪಾದ ಮೇಲ್ವಿಚಾರಣೆ ನೋಡಿಕೊಳ್ಳುವ ಸಿಬ್ಬಂದಿ ಪ್ರಕಾರ, ಇಲ್ಲಿ ಸರ್ಕಾರಿ ಅತಿಥಿಗಳಿಗೆ ಸಾಮಾನ್ಯ ವಾಸ್ತವ್ಯ ದರವನ್ನು ಪ್ರತಿ ದಿನಕ್ಕೆ ರು.300 ಎಂದು ನಿಗದಿ ಮಾಡಲಾಗಿದೆ. ಒಂದು ವಾರದವರೆಗೆ ಇದೇ ದರ ಮುಂದುವರೆಯುತ್ತದೆ. ಎರಡನೇ ವಾರವೂ ವಾಸ್ತವ್ಯ ಮುಂದುವರಿಸಿದರೆ ಪ್ರತಿದಿನ ರು.600 ನೀಡಬೇಕಾಗುತ್ತದೆ. ಆದರೆ ವಿಸ್ತರಣೆಯಾಗದಂತೆ ತಡೆಯುವುದಕ್ಕೆ ಮುಖ್ಯಮಂತ್ರಿಗಳು ಸೂಚನೆ ನೀಡುವುದಕ್ಕೆ ಅಧಿಕಾರವಿದೆ. ಈ ಅಧಿಕಾರವನ್ನು ಬಳಸಿ ಸಿಎಂ ಅವರು ಭಾರತಿ ಅರಸ್ ಅವರಿಗೆ ವಾಸ್ತವ್ಯಕ್ಕೆ ಅವಕಾಶ ನೀಡಿದ್ದರು. ಹೀಗಾಗಿ ಕುಮಾರಕೃಪಾದ ಅಧಿಕಾರಿಗಳು ಭಾರತಿ ಅವರನ್ನು ಸಿದ್ದರಾಮಯ್ಯ ಅವರ ಅತಿಥಿ ಎಂದೇ ಪರಿಗಣಿಸಿದ್ದರು. ಆದರೆ, ಭಾರತಿ ತಿಂಗಳು ಕಳೆದರೂ ಕದಲಲಿಲ್ಲ. ಹೀಗಾಗಿ ಡಿಪಿಎಆರ್‍ನವರು ಎರಡು ಬಾರಿ ತೆರವು ಮಾಡುವಂತೆ ಭಾರತಿ ಅವರಿಗೆ ಸೂಚನೆ ನೀಡಿದರು. ಆದರೆ ಪ್ರಯೋಜನವಾಗಲಿಲ್ಲ. ಬರೋಬ್ಬರಿ 8 ತಿಂಗಳು ಸರ್ಕಾರಿ ಅತಿಥಿಯಾಗಿ ಮುಂದುವರಿದಿದ್ದು, ಬಿಲ್ ಭರಿಸುವವರು ಯಾರು? ಎಂಬುದಕ್ಕೆ ಉತ್ತರವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com