ಮರ ಗಣತಿಗೆ ಬೇಕಿಲ್ಲ ಟೆಂಡರ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಮರ ಗಣತಿ ಮಾಡಲು ಟೆಂಡರ್ ಕರೆಯಬೇಕೇ ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಅರಣ್ಯ ವಿಭಾಗದಲ್ಲಿ ಗಣತಿಗಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮರ ಗಣತಿ ಮಾಡಲು ಟೆಂಡರ್ ಕರೆಯಬೇಕೇ ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಅರಣ್ಯ ವಿಭಾಗದಲ್ಲಿ ಗಣತಿಗಾಗಿ ಟೆಂಡರ್ ಕರೆಯಲು ಸಿದ್ಧತೆ ಶುರುವಾಗಿದ್ದರೆ, ಇದಕ್ಕಾಗಿ ಪ್ರತ್ಯೇಕ ಟೆಂಡರ್ ಕರೆಯುವ ಅಗತ್ಯವೇ ಇಲ್ಲ ಎಂದು ಮೇಯರ್ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ. 
ಮುಂದಿನ ಎರಡು ತಿಂಗಳೊಳಗೆ ಬಿಬಿಎಂಪಿಯ ಅರಣ್ಯ ವಿಭಾಗ ಮರಗಳ ಗಣತಿ ಕಾರ್ಯ ಆರಂಭಿಸಲಿದೆ. ಅರಣ್ಯ ವಿಭಾಗದಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಂಖ್ಯೆ ಕಡಿಮೆ ಇರುವುದರಿಂದ ಮರ ಗಣತಿಗೆ ಎನ್‍ಜಿಒಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ನಿಯಮ ಪ್ರಕಾರ ಟೆಂಡರ್ ಕರೆದು ಗಣತಿ ಆರಂಭಿಸಲಾಗುತ್ತದೆ. ಆದರೆ ವಲಯ ಹಾಗೂ ವಾರ್ಡ್ ಮಟ್ಟದಲ್ಲಿ ಅಧಿಕಾರಿಗಳನ್ನು ಕೇಳಿದರೆ ಅವರೇ ಮಾಹಿತಿ ಒದಗಿಸುತ್ತಾರೆ. ಇದನ್ನು ಬಿಟ್ಟು ಪ್ರತ್ಯೇಕವಾಗಿ ಟೆಂಡರ್ ಕರೆಯುವ ಅಗತ್ಯವಿಲ್ಲ ಎಂದು ಮೇಯರ್ ಮಂಜುನಾಥ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. 
ವಾರ್ಡ್‍ವಾರು ಮಾಹಿತಿ: ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 14.78 ಲಕ್ಷ ಮರಗಳಿವೆ. ಬಿಡಿಎಯಿಂದ ಮರಗಳನ್ನು ನೆಡುತ್ತಿದ್ದು, ನಿರ್ವಹಣೆಯಲ್ಲಿರುವ ಮರಗಳ ಮಾಹಿತಿ ಮಾತ್ರ ಬಿಬಿಎಂಪಿ ಬಳಿಯಿದೆ. ಉದ್ಯಾನ, ಸ್ಮಶಾನ, ಬಡಾವಣೆಗಳು ಸೇರಿದಂತೆ ಬಿಬಿಎಂಪಿ ನೆಡದೇ ಇರುವ ಮರಗಳ ಬಗ್ಗೆ ಸಮರ್ಪಕ ಮಾಹಿತಿ ಕ್ರೋಡೀಕರಣವಾಗಿಲ್ಲ. 
ಹಲವು ವರ್ಷಗಳಿಂದ ಮರ ಗಣತಿ ನಡೆಸಬೇಕೆಂಬ ಪ್ರಯತ್ನವಿದ್ದರೂ ಕಾರ್ಯಗತಗೊಂಡಿರಲಿಲ್ಲ. ಮೂರು ತಿಂಗಳ ಹಿಂದೆ ಮಳೆಯಿಂದಾಗಿ ಮರಗಳು ಬಿದ್ದು ಸಾವುಂಟಾದಾಗ ಮರಗಳ ಗಣತಿ ಮಾಡಲು ನಿರ್ಧರಿಸಲಾಗಿತ್ತು. ಒಣಗಿದ ಮರ ಹಾಗೂ ಕೊಂಬೆಗಳನ್ನು ಪತ್ತೆಮಾಡಿ ಕಡಿಯಲು ತೀರ್ಮಾನಿಸಲಾಗಿತ್ತು. ಬಿಬಿಎಂಪಿ ಅರಣ್ಯ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿದೆ. ಮರ, ಕೊಂಬೆ ಕಡಿಯಲು 13 ತಂಡಗಳಿದ್ದರೂ ಬೃಹತ್ ಬೆಂಗಳೂರಿಗೆ ಇದು ಸಾಲುತ್ತಿಲ್ಲ.
 ಹೀಗಾಗಿ ಒಟ್ಟು 21 ತಂಡ ನೀಡುವಂತೆ ವಿಭಾಗದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರ ಕಡಿಯಲು ಸಿಬ್ಬಂದಿ ಕೊರತೆಯಿರುವಾಗ ಗಣತಿ ಮಾಡಲು ಸಹಜವಾಗಿಯೇ ಸಿಬ್ಬಂದಿ ಕೊರತೆ ಉಂಟಾಗಿದೆ. ಹೀಗಾಗಿ ಹೊರಗಿನ ಸಂಸ್ಥೆಗಳಿಂದ ಗಣತಿಗೆ ತೀರ್ಮಾನಿಸಲಾಗಿದೆ.
 `ಪ್ರತಿ ವಲಯ ಹಾಗೂ ವಾರ್ಡ್‍ಗಳಲ್ಲಿ ಅಧಿಕಾರಿಗಳಿದ್ದು, ಇವರಿಂದಲೇ ಮರಗಳ ಬಗ್ಗೆ ಮಾಹಿತಿ ಪಡೆಯಬಹುದು. ಹೀಗಾಗಿ ಟೆಂಡರ್ ಕರೆದು ಪ್ರತ್ಯೇಕವಾಗಿ ಗಣತಿ ಮಾಡುವ ಅವಶ್ಯಕತೆಯೇ ಇಲ್ಲ. ಮರ ಗಣತಿ ಮಾಡುವ ಯಾವುದೇ ಪ್ರಸ್ತಾವನೆ ಬಿಬಿಎಂಪಿಯಲ್ಲಿ ಇಲ್ಲ. ಆದರೆ ಇದಕ್ಕೆಂದು ಮರಗಳನ್ನು ಲೆಕ್ಕ ಹಾಕಲು ಎನ್‍ಜಿಒಗಳಿಗೆ ಗುತ್ತಿಗೆ ನೀಡಲು ಸಾಧ್ಯವಾಗುವುದಿಲ್ಲ' ಎಂದು ಮೇಯರ್ ತಿಳಿಸಿದ್ದಾರೆ. 
ತರಬೇತಿ ಶಿಬಿರ: ಮರ ಲೆಕ್ಕಹಾಕಲು ತರಬೇತಿ ಶಿಬಿರ ನಡೆಸಲಾಗುತ್ತದೆ. ಮರಗಳ ಅಂದಾಜು ಸಂಖ್ಯೆ, ಗಣತಿ ಮಾಡುವ ವೈಜ್ಞಾನಿಕ ವಿಧಾನ, ಮರ ಜಾತಿಗಳ ಲೆಕ್ಕ, ಮುದಿ ಮರಗಳ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳನ್ನು ಒಂದೇ ಬಾರಿಗೆ ಕಲೆಹಾಕಲು ತರಬೇತಿ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com