
ಬೆಂಗಳೂರು: ಪಾದರಾಯನಪುರ ಹಾಗೂ ಬಾಪೂಜಿನಗರದ ರಾಜಕಾಲುವೆ ಬಿಬಿಎಂಪಿ ಕಸ ಹಾಕುವ 'ಡಂಪಿಂಗ್ ಯಾರ್ಡ್' ಆಗಿ ಮಾರ್ಪಟ್ಟಿದೆ. ಬಿಬಿಎಂಪಿ ಕಸದ ಗುತ್ತಿಗೆದಾರರು ನಿತ್ಯ ಇಲ್ಲಿನ ರಾಜಕಾಲುವೆಗೆ ಕಸ ಸುರಿಯುತ್ತಿದ್ದಾರೆ.
ಬಾಪೂಜಿ ನಗರ, ವಿಜಯನಗರ, ಹಂಪಿನಗರ, ಮಲ್ಲೇಶ್ವರ ಸೇರಿದಂತೆ ಹಲವು ವಾರ್ಡ್‍ಗಳಿಂದ ತಂದ ಕಸವನ್ನು ಇಲ್ಲಿ ಸುರಿಯಲಾಗುತ್ತಿದೆ. ಇದಕ್ಕೆ ಪೂರಕವಾಗಿ ರಾಜಕಾಲುವೆಯ ತಡೆಗೋಡೆಯೂ ಇಲ್ಲಿ ಬಿದ್ದುಹೋಗಿದೆ. ಸುಮಾರು 150200 ಆಟೋಗಳಲ್ಲಿ ಕಸ ತರುವ ಗುತ್ತಿಗೆದಾರರು ನೇರವಾಗಿ ರಾಜಕಾಲುವೆಗೆ ಸುರಿಯುತ್ತಿದ್ದಾರೆ. ಗುತ್ತಿಗೆ ನಿಯಮದ ಪ್ರಕಾರ ಕಸವನ್ನು ವಿಂಗಡಿಸಿ ನಿಯೋಜಿಸಿದ ಕಸ ಘಟಕಕ್ಕೆ ಕಳುಹಿಸಬೇಕು. ಆದರೆ ಕಸವನ್ನು ರಾಜಕಾಲುವೆಗೆ ಹಾಕಿ ನಿಯಮ ಉಲ್ಲಂಘಿಸಿರುವುದಲ್ಲದೆ, ಇದಕ್ಕಾಗಿ ರಾಜಕಾಲುವೆಯ ತಡೆಗೋಡೆಯನ್ನೂ ಹಾಳು ಮಾಡಲಾಗಿದೆ.
ಈ ರಾಜಕಾಲುವೆಯಲ್ಲಿ ಹಾಕಿದ ಕಸ ನೇರವಾಗಿ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ರಾಜಕಾಲುವೆವರೆಗೂ ಹರಿದು, ಅಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದೆ. ಇದರಿಂದ ಮಳೆಗಾಲದ ಸಂದರ್ಭದಲ್ಲಿ ಉಕ್ಕುವ ನೀರು ರಸ್ತೆ ಹಾಗೂ ಮೇಲ್ಸೇತುವವರೆಗೆ ಹರಿಯುತ್ತಿದೆ. ಪ್ರತಿ ಬಾರಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಒಳಗೆ ನೀರು ನುಗ್ಗುವ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗೆ ಇಲ್ಲಿ ಕಸ ಸುರಿಯುತ್ತಿರುವುದೂ ಕೂಡ ಕಾರಣವಾಗಿದೆ. `ಹೊರಗಿನ ವಾರ್ಡ್‍ಗಳಾದ ಬಾಪೂಜಿನಗರ, ವಿಜಯನಗರದಿಂದ ಕಸ ತಂದು ಇಲ್ಲಿನ ರಾಜಕಾಲುವೆಯಲ್ಲಿ ಸುರಿಯಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ರಾಜಕಾಲುವೆಯ ತಡೆಗೋಡೆ ನಿರ್ಮಿಸಿ, ಎತ್ತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷ ತಿಳಿಸಿದ್ದಾರೆ.
Advertisement