
ಬೆಂಗಳೂರು: ರೈತರ ಬಗ್ಗೆ ಹೇಳಿಕೆ ನೀಡಿ ರೈತಪರ ಸಂಘಟನೆಗಳಿಂದ ತೀವ್ರ ವಿರೋಧ ಎದುರಿಸಿದ್ದ ಶಾಸಕ ಅಶೋಕ್ ಖೇಣಿ ಇದೀಗ ಕ್ಷಮೆಯಾಚಿಸಿದ್ದಾರೆ.
ಪ್ರತಿಭಟನಾಕಾರರು ನೈಸ್ ಸಂಸ್ಥೆಯ ಟೋಲ್ ಗೇಟ್‌ಗೆ ನುಗ್ಗಿ ತೀವ್ರ ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಖೇಣಿ ಪ್ರತಿಕ್ರಿಯಿಸಿದ್ದು, ರೈತರು ಜೀವಿಸುವ, ನಡೆದಾಡುವ ದೇವರು, ಅವರಿಗೆ ನಾನು ಎಂದೂ ಅವಮಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರು ಇಂದು ಹಲವು ಕಷ್ಟಗಳಿಗೆ ತುತ್ತಾಗಿ ಹೈರಾಣಾಗಿ ಹೋಗುತ್ತಿದ್ದಾರೆ. ಆದರೆ ಸರ್ಕಾರ ಅವರಿಗೆ ಸೂಕ್ತ ರಕ್ಷಣೆ, ಪರಿಹಾರ ನೀಡುತ್ತಿಲ್ಲ. ಆದುದರಿಂದ ಆತ್ಮಹತ್ಯೆಯಂತಹ ಗಂಭೀರ ಹಾದಿ ಕಂಡುಕೊಳ್ಳುತ್ತಿದ್ದಾರೆ ಎಂದು ತಾವಾಡಿದ್ದ ಮಾತನ್ನು ಸರಿಪಡಿಸಿಕೊಂಡಿದ್ದಾರೆ.
ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಖೇಣಿ, ರೈತರು ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಕಡಿತದಂತಹ ಅನೈತಿಕ ಚಟುವಟಿಕೆಗಳಿಗೆ ಮೊರೆ ಹೋಗುತ್ತಿದ್ದು, ಇದರ ಪರಿಣಾಮದಿಂದಲೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದರಿಂದ ಕೋಪೋದ್ರಿಕ್ತರಾದ ರೈತ ಸಂಘಟನೆಗಳು ಮತ್ತು ಕನ್ನಡಪರ ಹೋರಾಟಗಾರರು, ಇಂದು ಬೆಳಗ್ಗೆ ಬೆಂಗಳೂರು-ಕನಕಪುರ ರಸ್ತೆಯಲ್ಲಿರುವ ಟೋಲ್ ಗೇಟ್‌ಗೆ ನುಗ್ಗಿ ಕಚೇರಿಗೆ ಅಳವಡಿಸಲಾಗಿದ್ದ ಗಾಜುಗಳನ್ನು ಧ್ವಂಸ ಮಾಡಿದ್ದರು.
Advertisement