ಬಿಬಿಎಂಪಿ ಕಸ ಸೂತ್ರ!

ಪ್ರತಿ ವಲಯಗಳಲ್ಲೂ ಮೂಲದಲ್ಲಿಯೇ ಕಸ ವಿಂಗಡಣೆ ಮಾಡಬೇಕು. ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭ ಕಸ ವಿಲೇವಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು...
ಕಸ
ಕಸ
ಬೆಂಗಳೂರು: ಪ್ರತಿ ವಲಯಗಳಲ್ಲೂ ಮೂಲದಲ್ಲಿಯೇ ಕಸ ವಿಂಗಡಣೆ ಮಾಡಬೇಕು. ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭ ಕಸ ವಿಲೇವಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ವಲಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಶುಕ್ರವಾರ ನಡೆದ ವಲಯ ಜಂಟಿ ಆಯುಕ್ತರ ಸಭೆಯಲ್ಲಿ, ತ್ಯಾಜ್ಯ ನಿರ್ವಹಣೆ, ಕಸ ವಿಂಗಡಣೆ, ಹೆಚ್ಚು ಕಸ ಬೀಳುವ ಸ್ಥಳ ಗುರುತಿಸುವುದು, ಒಣ ತ್ಯಾಜ್ಯ ವಿಂಗಡಣೆಯ ಘಟಕ ನಿರ್ವಹಣೆ ಬಗ್ಗೆ ಆಯಾ ಅಧಿಕಾರಿಗಳು ವಿವರಣೆ ನೀಡಿದರು. ಆಯುಕ್ತ ಕುಮಾರ್ ನಾಯಕ್ ಮಾತನಾಡಿ, ಆಯಾ ವಲಯಗಳಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡ ಉತ್ತಮ ಪದ್ಧತಿಗಳನ್ನು ಬೇರೆ ವಲಯಗಳಲ್ಲೂ ಅನುಷ್ಠಾನಗೊಳಿಸಬೇಕು. ಅಧಿಕಾರಿಗಳ ತಂಡ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸರ್ಕಾರೇತರ ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮೂಲದಲ್ಲೇ ಕಸ ವಿಂಗಡಣೆ ಮಾಡಬೇಕು.
ಹೆಚ್ಚು ಕಸ ಹಾಕುವ ಸ್ಥಳ ಗುರುತಿಸಿ ತೆರವು ಮಾಡುವುದು, ರಸ್ತೆ ಸ್ವಚ್ಛತೆ, ತ್ಯಾಜ್ಯ ವಿಂಗಡಣೆ ಘಟಕಗಳ ನಿರ್ವಹಣೆ ಸೂಕ್ತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಕಸದ ನಿರ್ವಹಣೆ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯೂ ಅಗತ್ಯವಾಗಿದೆ ಎಂದರು. ದಕ್ಷಿಣ ವಲಯದ ಅಧಿಕಾರಿಗಳು ಪ್ರಾತ್ಯಕ್ಷಿಕೆ ನೀಡಿ, ಕೋರಮಂಗಲದ ಫೋರಂ ಬಳಿ ಮಾದರಿ ತ್ಯಾಜ್ಯ ವಿಂಗಡಣೆ ಘಟಕ ಸ್ಥಾಪಿಸಲಾಗಿದೆ. 
ಮಡಿವಾಳ ಮಾರುಕಟ್ಟೆಯಲ್ಲಿ ಉತ್ಪತ್ತಿಯಾದ ಹಸಿ ಕಸವನ್ನು ಕೆಸಿಡಿಸಿ ಘಟಕಕ್ಕೆ ಸಾಗಿಸಿ ಗೊಬ್ಬರ ಮಾಡಲಾಗುತ್ತಿದೆ. 38ಕ್ಕೂ ಅಧಿಕ ತ್ಯಾಜ್ಯ ವಿಂಗಡಣೆ ಘಟಕಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಮಡಿವಾಳ ಮೇಲ್ಸೇತುವೆ ಕೆಳಗೆ ಸ್ಥಾಪಿಸಲಾದ
ಒಣತ್ಯಾಜ್ಯ ಸಂಗ್ರಹಣಾ ಘಟಕ ಯಶಸ್ವಿಯಾಗಿ ನಡೆಯುತ್ತಿದೆ ಎಂದು ವಿವರಿಸಿದರು. ಬೊಮ್ಮನಹಳ್ಳಿ ವಲಯಾಧಿಕಾರಿ ಮಾತನಾಡಿ, 2 ಜೈವಿಕ ಅನಿಲ ಘಟಕದಲ್ಲಿ ಸಮರ್ಪಕವಾಗಿ ನಡೆಯುತ್ತಿವೆ. ಬೇಗೂರು ಘಟಕದಲ್ಲಿ ಉತ್ಪತ್ತಿಯಾದ ವಿದ್ಯುತ್ ಬೀದಿ ದೀಪಗಳಿಗೆ ಬಳಕೆಯಾಗುತ್ತಿದೆ. ಹೆಚ್ಚು ಕಸ ಹಾಕುವ 163 ಸ್ಥಳಗಳನ್ನು ಗುರುತಿಸಿ ಶುಚಿಗೊಳಿಸಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com