ಸಂಸತ್ತು, ವಿಧಾನಸಭೆಗೂ ಮೀಸಲಿರಲಿ: ಸಿದ್ದರಾಮಯ್ಯ

ಕೆಲವರು ತೋರಿಕೆಗಾಗಿ ಸಾಮಾಜಿಕ ನ್ಯಾಯದ ಪರವಾಗಿದ್ದರೆ, ಆಂತರಿಕವಾಗಿ ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದಾರೆ. ಇದನ್ನು ತಾವು ರಾಜಕೀಯ ಉದ್ದೇಶದಿಂದ ಹೇಳುತ್ತಿಲ್ಲ, ಸತ್ಯವನ್ನೇ ಹೇಳುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು...
ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಸಲ್ಲಿಸಿದರು. ಕ
ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಸಲ್ಲಿಸಿದರು. ಕ

ಬೆಂಗಳೂರು: ಕೆಲವರು ತೋರಿಕೆಗಾಗಿ ಸಾಮಾಜಿಕ ನ್ಯಾಯದ ಪರವಾಗಿದ್ದರೆ, ಆಂತರಿಕವಾಗಿ ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದಾರೆ. ಇದನ್ನು ತಾವು ರಾಜಕೀಯ ಉದ್ದೇಶದಿಂದ ಹೇಳುತ್ತಿಲ್ಲ, ಸತ್ಯವನ್ನೇ ಹೇಳುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಡವರು, ಹಿಂದುಳಿದವರು ಸೇರಿದಂತೆ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಮೀಸಲಾತಿ ಜಾರಿಗೆ ತರಲಾಗಿದೆ. ಆದರೆ, ಈ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಕೆಲವರು ಜನರ ಮುಂದೆ ಸಾಮಾಜಿಕ ನ್ಯಾಯಾದ ಪರವಾಗಿ ಮಾತನಾಡಿದರೆ, ಆಂತರಿಕವಾಗಿ ವಿರೋಧಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರಾಜಕೀಯ ಮೀಸಲಾತಿಯಿಂದ ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ನ್ಯಾಯ ಸಿಕ್ಕಂತಾಗಿದೆ. ಇದರಿಂದ ಸಮಾಜದ ಪರಿವರ್ತನೆಯೂ ಆಗಲಿದೆ. ಹಾಗಾಗಿ ವಿಧಾನಸಭೆ ಹಾಗೂ ಸಂಸತ್ತಿಗೂ ಮೀಸಲಾತಿ ವಿಸ್ತರಣೆಯಾಗಬೇಕಿದೆ. ಕರ್ನಾಟಕದಲ್ಲಿ ಶರಣ ಕಾಲದಿಂದಲೂ ಸಾಮಾಜಿಕ ನ್ಯಾಯ ಪ್ರತಿಪಾದನೆಯಾಗಿದ್ದು, ಇದು ನಿರಂತರವಾಗಿ ಮುಂದುವರಿಯಬೇಕು. ಇದರಿಂದ ಎಲ್ಲ ವರ್ಗದ ಜನರಿಗೆ ಅವಕಾಶ ಸಿಕ್ಕಿ, ಸಾಮಾಜಿಕ ಬದಲಾವಣೆ ಸಾಧ್ಯವಾಗಲಿದೆ ಎಂದರು.

ರಾಜ್ಯದಲ್ಲಿ ಜಾತಿ ಜನಗಣತಿ ಮೂಲಕ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಲ ವಿರೋಧಿಗಳು ಟೀಕಿಸಿದ್ದರೂ, ತಮಗೆ ನೋವಾಗಿರಲಿಲ್ಲ. ಆದರೆ, ನಮ್ಮವರೇ ಜಾತಿ ಜನಗಣತಿ ಬಗ್ಗೆ ವಿರೋಧಿಸಿದ್ದು, ಮನಸ್ಸಿಗೆ ತುಂಬಾ ನೋವಾಗಿದೆ. ಅಲ್ಲದೆ, ಕೆಲವರು ಮೀಸಲಾತಿಯನ್ನೇ ತಪ್ಪು ಎಂದು ಮಾತನಾಡುತ್ತಿದ್ದಾರೆ. ಹಾಗಾಗಿ ಅಹಿಂದ ವರ್ಗದವರು ಜಾತಿ ಜನಗಣತಿ ಹಾಗೂ ಮೀಸಲು ಬೇಡ ಎನ್ನುವವರ ವಿರುದ್ಧ ಧ್ವನಿ ಎತ್ತಬೇಕು. ಆಂತರಿಕವಾಗಿ ಸಾಮಾಜಿಕ ನ್ಯಾಯ ವಿರೋಧಿಸುವವರ ಬಗ್ಗೆ ಎಚ್ಚರವಹಿಸಬೇಕು. ರಾಜ್ಯದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು. ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚ ಅಂಕಗಳಿಸಿದ ಸುಮಾರು 400 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಆಯ್ಕೆಯಾದವರನ್ನು ಅಭಿನಂದಿಸಿದರು. ಕಾಗಿನೆಲೆ ಮಹಾಸಂಸ್ಥಾನ ಮಠದ ಈಶ್ವರಾನಂದಪುರಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಚ್.ರೇವಣ್ಣ, ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಚಂದ್ರಪ್ಪ, ಮಾಜಿ ಮೇಯರ್ ಡಾ.ಎಂ.ಶಾಂತಕುಮಾರ್, ವೆಂಕಟೇಶ್ ಮೂರ್ತಿ, ಪ್ರದೇಶ ಕುರುಬ ಸಂಘದ ಅಧ್ಯಕ್ಷ ಡಾ.ರಾಜೇಂದ್ರ. ಯ.ಸಣ್ಣಕ್ಕಿ, ಉಪಾಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಕಾರ್ಯಾಧ್ಯಕ್ಷ ಎಂ.ವಿ.ಸೋಮಶೇಖರ್ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com