ಅಸಲು ಹೊರೆ; ಬಡ್ಡಿ ಬರೆ

ಭೀಕರ ಬರ, ರೈತರ ಸರಣಿ ಅತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಬಡ್ಡಿ ಮನ್ನಾ ಭಾಗ್ಯದಿಂದ ರೈತರಿಗೆ ಅಂಥಾ ಲಾಭವೇನು ಆಗೋದಿಲ್ಲ.
ಬರ(ಸಾಂದರ್ಭಿಕ ಚಿತ್ರ)
ಬರ(ಸಾಂದರ್ಭಿಕ ಚಿತ್ರ)

ಬೆಂಗಳೂರು: ಭೀಕರ ಬರ, ರೈತರ ಸರಣಿ ಅತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಬಡ್ಡಿ ಮನ್ನಾ ಭಾಗ್ಯದಿಂದ ರೈತರಿಗೆ ಅಂಥಾ ಲಾಭವೇನು ಆಗೋದಿಲ್ಲ. ಇದನ್ನು ಅರಿತಿರುವ ರೈತರು ಬಡ್ಡಿ ಮನ್ನಾಕ್ಕಾಗಿ ಅಸಲುಪಾವತಿಸುವುದು ಅನುಮಾನ!
ಏಕೆಂದರೆ ಸುಸ್ತಿದಾರರಾಗಿರುವ ರೈತರ ಪೈಕಿ ಬಹುಪಾಲು ಪಡೆದಿರುವ ಸಾಲದ ಮೊತ್ತ ಬರಿ 25 ಸಾವಿರ. ಇದನ್ನು ಅವರು 10 ವರ್ಷಗಳಿಂದಲೂ ಪಾವತಿಸಲು ಆಗದೇ ಉಳಿಸಿಕೊಂಡೇ ಬಂದಿದ್ದಾರೆ. ಆ ಸಾಲದ ಮೇಲಿನ ಬಡ್ಡಿ ರೂ 12 ಸಾವಿರದ ವರೆಗೂ ಇದೆ. 10 ವರ್ಷಗಳಿಂದ ಅಸಲು ತೀರಿಸಲು ಆಗದ ರೈತರು ಈಗ ಬಡ್ಡಿ ಮನ್ನಾಕ್ಕಾಗಿ ರೂ 25 ಸಾವಿರ ಅಸಲು ಪಾವತಿಸುವರೇ ಎಂಬ ಅನುಮಾನ ಸಹಕಾರ ಇಲಾಖೆಯನ್ನು ಕಾಡುತ್ತಿದೆ.
ಒಂದು ವೇಳೆ ಈ ಸುಸ್ತಿದಾರರು ಐದಾರು ಲಕ್ಷಕ್ಕಿಂತ ಹೆಚ್ಚು ಸಾಲ ಪಡೆದಿದ್ದರೆ ಮುಂದೆ ಸಾಲ ಪಡೆಯಲು ಅಡ್ಡಿಯಾಗುತ್ತದೆ ಎಂದು ಅಸಲು ಪಾವತಿಸಿ ಬಡ್ಡಿ ಮನ್ನಾ ಮಾಡಿಸಿಕೊಳ್ಳುತ್ತಿದ್ದರು. ಆದರೆ ಸರ್ಕಾರ ಗುರುತಿಸಿರುವ ಎಲ್ಲಾ 2 ,07 ,197 ಸುಸ್ತಿದಾರರೂ ಚೂರುಪಾರು ಜಮೀನಿರುವ ಸಣ್ಣ ರೈತರು. ಹೆಚ್ಚು ಸಾಲ ಪಡೆಯಲು ಅವರಿಗೆ ಶಕ್ತಿಯೂ ಇಲ್ಲ. ಅಷ್ಟು ಪ್ರಮಾಣದ ಜಮೀನು ಇಲ್ಲ. ಹೀಗಾಗಿ ಅವರು ಭೀಕರ ಬರ ಪರಿಸ್ಥಿತಿಯಲ್ಲಿ ಮಾರ್ಚ್ ಗಡುವಿನ ಒಳಗಾಗಿ ರೂ 25 ಸಾವಿರಗಳನ್ನು ಪಾವತಿಸಿ ಬಡ್ಡಿ ಮನ್ನಾ ಭಾಗ್ಯ ಪಡೆಯುವ ಸಾಧ್ಯತೆ ಕಡಿಮೆ. ಇನ್ನು ಸುಸ್ತಿದಾರರ ಪೈಕಿ 32 ,000 ಮಂದಿ ಎಷ್ಟೇ ಮನವೊಲಿಸಿದರೂ(ಕಷ್ಟದ ರೈತರು) ಸಾಲತೀರಿಸದವರು. ಆದ್ದರಿಂದ 136 ತಾಲೂಕುಗಳಲ್ಲಿ ಭೀಕರ ಬರ ಬವಣೆಯಿಂದಾಗಿ ಬಡ್ಡಿ ಮನ್ನಾ ಬದಲು ಸಾಲ ಮನ್ನಾವೇ ಆಗಲಿ ಎಂದು ನಿರೀಕ್ಷಿಸುತ್ತಿದ್ದಾರೆ ಎಂದು ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದಾರೆ. 
ಅಷ್ಟಕ್ಕೂ ಸರ್ಕಾರ ಬಡ್ಡಿ ಮನ್ನಾ ಮಾಡುವುದರಿಂದ ಬೊಕ್ಕಸಕ್ಕೆ ರೂ 215 ಕೋಟಿಗಳಷ್ಟು ಮಾತ್ರ ಹೊರ ಬೀಳುತ್ತದೆ. ಇದರೊಂದಿಗೆ ಸಾಲವನ್ನು ಮನ್ನಾ ಮಾಡಿದರೆ ಸರ್ಕಾರಕ್ಕೆ ಹೆಚ್ಚುವರಿ ರೂ 536 ಕೋಟಿ ಹೊರೆ ಉಂಟಾಗುತ್ತದೆ. ಆದರೆ ಸರ್ಕಾರ ಸಾಲ ಮನ್ನಾ ಮಾಡದೇ ಬರೀ ಬಡ್ಡಿ ಮನ್ನಾ ಮಾಡುವುದರಿಂದ ರೈತರಿಗೆ ಹೆಚ್ಚಿನ ಲಾಭವೇನು ಆಗದು ಎಂದು ರತ ಮುಖಂಡರು ಹೇಳಿದ್ದಾರೆ.
ಈ ಸುಸ್ತಿದಾರರು ವಂಚಿತರು: ರಾಜ್ಯದಲ್ಲಿ ಈಗ ಗುರುತಿಸಿರುವ ಸುಸ್ತಿದಾರರು 2008 ರ ನಂತರದಿಂದ 2014 ರ ಒಳಗಾಗಿ ಸಾಲ ಪಡೆದಿರುವವರು. ಇವರು ಈ ಹಿಂದೆ ಸರ್ಕಾರ ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ ಯೋಜನೆಗಳನ್ನು ಪ್ರಕಟಿಸಿದ್ದಾಗ ವಿವಿಧ ತಾಂತ್ರಿಕ ಕಾರಣಗಳಿಂದ ವಂಚಿತರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com