ಸಿಬ್ಬಂದಿ ಗೈರು ಕಂಡು ಸಮಿತಿ ಸದಸ್ಯರು ಗರಂ

ಬಿಬಿಎಂಪಿ ಯಲಹಂಕ ವಲಯ ಕಚೇರಿಯ ತಪಾಸಣೆ ನಡೆಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ, ವಲಯದ ಕಚೇರಿಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಅಳವಡಿಸಲು ಸೂಚಿಸಿದೆ...
ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ (ಸಂಗ್ರಹ ಚಿತ್ರ)
ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ (ಸಂಗ್ರಹ ಚಿತ್ರ)

ಬೆಂಗಳೂರು: ಬಿಬಿಎಂಪಿ ಯಲಹಂಕ ವಲಯ ಕಚೇರಿಯ ತಪಾಸಣೆ ನಡೆಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ, ವಲಯದ ಕಚೇರಿಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಅಳವಡಿಸಲು ಸೂಚಿಸಿದೆ.

ಸಮಿತಿ ಅಧ್ಯಕ್ಷ ರಾಜಣ್ಣ ಅವರ ನೇತೃತ್ವ ದಲ್ಲಿ ಸದಸ್ಯರು ಸೋಮವಾರ ಯಲಹಂಕ ವಲಯ ಕಚೇರಿಗೆ ದಿಢೀರ್ ಭೇಟಿ ನೀಡಿದರು. ವಲಯ ಸಂಕೀರ್ಣದಲ್ಲಿದ್ದ ಬಯೋಮೆಟ್ರಿಕ್ ಉಪಕರಣ ಸುಸ್ಥಿತಿಯಲ್ಲಿದ್ದು, ಹಾಜರಾತಿ ನಿರ್ವಹಿಸುತ್ತಿರುವುದರ ಬಗ್ಗೆ ಮಾಹಿತಿ ಕೇಳಿದಾಗ ಅಧಿಕಾರಿಗಳು ನಿರುತ್ತರರಾದರು. ಒಟ್ಟು ಸಿಬ್ಬಂದಿ ಪೈಕಿ ಶೇ.40 ಮಾತ್ರ ಹಾಜರಿದ್ದು, ಹಾಜರಾತಿ ಪುಸ್ತಕವನ್ನೂ ಸೂಕ್ತವಾಗಿ ನಿರ್ವಹಣೆ ಮಾಡಿರಲಿಲ್ಲ.

ಸಿಸಿ ಕ್ಯಾಮೆರಾ ಕೆಟ್ಟು ಹೋಗಿದ್ದು, 3 ದಿನಗಳಲ್ಲಿ ಅದನ್ನು ದುರಸ್ತಿಗೊಳಿಸಲು ಸೂಚಿಸಲಾಯಿತು. ಕರ್ತವ್ಯಕ್ಕೆ ಹಾಜರಾಗದವರಿಗೆ ನೋಟಿಸ್ ನೀಡಿ, ಸಮರ್ಪಕ ಸಮಜಾಯಿಷಿ ಬಂದಿಲ್ಲವಾದರೆ, ಅಮಾನತು ಮಾಡಿ ವರದಿ ಸಲ್ಲಿಸಲು ಹಾಗೂ ವಲಯದ ಎಲ್ಲ ಕಚೇರಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಲು ಜಂಟಿ ಆಯುಕ್ತರಿಗೆ ಸೂಚಿಸಲಾಯಿತು. ಇಲ್ಲಿನ ನಿಯಂತ್ರಣ ಕೊಠಡಿ  ಪರಿಶೀಲಿಸಿದಾಗ, ಮುಟ್ಟುಗೋಲು ಹಾಕಿದ ಸಾಮಗ್ರಿಗಳ ವಿವರ ನಮೂದಿಸಿದ ಪುಸ್ತಕ ಹಾಜರುಪಡಿಸಲಿಲ್ಲ. ಕೊಠಡಿಯಲ್ಲಿ ಇರಬೇಕಾದ ತುರ್ತು ನಿರ್ವಹಣಾ (ಸ್ಕ್ವಾಡ್) ಸಿಬ್ಬಂದಿ ಕೂಡ ಇರಲಿಲ್ಲ. ನೋಂದಣಿ ಪುಸ್ತಕದಲ್ಲಿ ವಿವರಗಳು ಅಪೂರ್ಣವಾಗಿರುವುದು ಕಂಡುಬಂತು. ಹಿರಿಯ ಅಧಿಕಾರಿಗಳಿಂದ ಕಿರಿಯ ವರ್ಗದ ನೌಕರರವರೆಗೆ ಯೂರು ಗುರುತಿನ ಚೀಟಿ ಧರಿಸದಿರುವುದು ಹಾಗೂ ನಾಲ್ಕನೇ ದರ್ಜೆ ನೌಕರರು ಸಮವಸ್ತ್ರ ಧರಿಸಿಲ್ಲದೇ ಕಚೇರಿಗೆ ಬಂದಿದ್ದು ಪತ್ತೆಯಾಯಿತು.

ಗ್ಯಾಂಗ್ ಮೆನ್ ಗಳನ್ನು ಕಚೇರಿಯ ಸಹಾಯಕರಾಗಿ ಹಾಗೂ ರೆಕಾರ್ಡ್ ರೂಂನ ಉಸ್ತುವಾರಿ ನಿರ್ವಹಣೆ ಮಾಡಲು ನಿಯೋಜಿಸಿರುವುದು ಕಂಡುಬಂತು. ಕಡತಗಳ ಶಾಖೆಯ ನಿರ್ವಹಣೆಗೆ ಸಮಾನ ಕೆಲಸಕ್ಕೆ ಸಮಾನ ವೇತನದಡಿಯಲ್ಲಿ ನಿಯೋಜನೆಗೊಂಡಿರುವ ಗ್ಯಾಂಗ್ ಮೆನ್ ಗಳನ್ನು ನಿಯೋಜಿಸಿರುವುದು ನಿಯಮಬಾಹಿರವಾಗಿದೆ. ಇದರಿಂದ ಮುಖ್ಯವಾದ ಕಡತಗಳ ದುರುಪಯೋಗವಾಗುತ್ತದೆ. ಇದಕ್ಕೆ ವಲಯ ಜಂಟಿ ಆಯುಕ್ತರೇ ನೇರ ಜವಾಬ್ದಾರಿಯಾಗುತ್ತಾರೆ ಎಂದು ಸಮಿತಿ ಸದಸ್ಯರು ಎಚ್ಚರಿಸಿದರು. ಕೂಡಲೇ ಗ್ಯಾಂಗ್ ಮೆನ್ ಗಳನ್ನು ಈ ಕೆಲಸದಿಂದ ಬಿಡುಗಡೆಗೊಳಿಸಿ, ಆ ಸ್ಥಳಕ್ಕೆ ನಿಯಮಾನುಸಾರ ಪಾಲಿಕೆ ಸಿಬ್ಬಂದಿ ನಿಯೋಜಿಸಲು ಸೂಚಿಸಲಾಯಿತು.

ಸ್ಥಳದಲ್ಲೇ ದೂರು

ನಂತರ ಕೊಡಿಗೇಹಳ್ಳಿಯ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಲಾಯಿತು. ಸ್ಥಳೀಯರಾದ ರವಿ ಮಾಂಡ್ಯಮ್ ಎಂಬುವರು ಖಾತಾ ಸಂಖ್ಯೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಸಮಿತಿ ಸದಸ್ಯರು ಪ್ರಶ್ನಿಸಿದಾಗ ಯಾವುದೇ ಮಾತಿಗೆ ಸಮಂಜಸ ಉತ್ತರ ದೊರೆಯಲಿಲ್ಲ. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೂಕ್ತವಾಗಿ ಸ್ಪಂದಿಸದೆ ಕೆಲಸ ಮಾಡುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com