
ಬೆಂಗಳೂರು: ರಾಜಧಾನಿಯ ಏಕೈಕ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ವಿಕ್ಟೋರಿಯಾ)ಗೆ ಉಪಲೋಕಾಯುಕ್ತ ಸುಭಾಷ್ ಬಿ.ಅಡಿ ಮಂಗಳವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಅಲ್ಲಿನ ರೋಗಿಗಳು ಅನುಭವಿಸುತ್ತಿರುವ ನರಕಯಾತನೆಯನ್ನು ಖುದ್ದು ಪರಿಶೀಲಿಸಿದರು. ಮಧ್ಯಾಹ್ನ ಸುಮಾರು 1.05ಕ್ಕೆ ಆಸ್ಪತ್ರೆಗೆ ಆಗಮಿಸಿದಾಗ ವೈದ್ಯಕೀಯ ನಿರ್ದೇಶಕ ಡಾ.ಪಿ.ಜಿ.ಗಿರೀಶ್ ಇಲ್ಲದ ಕಾರಣ ಅವರಿಗಾಗಿ ಬರೋಬ್ಬರಿ ಒಂದೂವರೆ ಗಂಟೆ ಕಾದು ಕುಳಿತರು. ಕೊನೆಗೂ ಬಂದ ನಿರ್ದೇಶಕರನ್ನು ಉಪ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು.
ತಾವು ಕೆಲಸ ನಿಮಿತ್ತ ಹೊರಗೆ ಹೋಗಿದ್ದಾಗಿ ಸಬೂಬು ಹೇಳಿದ ಡಾ. ಗಿರೀಶ್, ಉಪ ಲೋಕಾಯುಕ್ತರನ್ನು ಆಸ್ಪತ್ರೆಯ ವಿವಿಧ ವಾರ್ಡ್‍ಗಳಿಗೆ ಕರೆದೊಯ್ದು ಅಲ್ಲಿನ ಸಮಸ್ಯೆ ಬಗ್ಗೆ ವಿವರಿಸಿದರು. ನ್ಯಾ.ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದ ವೇಳೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಏಕಾಏಕಿ ದಾಳಿ ನಡೆಸಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿ, ಸಮಸ್ಯೆ ಆಲಿಸುತ್ತಿದ್ದರು. ಅವರ ನಂತರದ ಲೋಕಾಯುಕ್ತರು ಆಸ್ಪತ್ರೆ, ರೋಗಿಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಈಗ ಉಪ ಲೋಕಾಯುಕ್ತ ಬಿ. ಸುಭಾಷ್ ಅಡಿ ಅವರು ರೋಗಿಗಳತ್ತಲೂ ಗಮನಹರಿಸಲು ಮುಂದಾಗಿತ್ತು.
ತಡೆದ ಭದ್ರತಾ ಸಿಬ್ಬಂದಿ: ಉಪಲೋಕಾಯುಕ್ತರು ಆಸ್ಪತ್ರೆ ಗೇಟ್ ಬಳಿ ಹೋಗುತ್ತಿದ್ದಂತೆ ಅಲ್ಲಿದ್ದ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ತಾವು ಯಾರು? ಯಾರನ್ನು ನೋಡಲು ಬಂದಿದ್ದೀರಿ ಎಂದು ಪ್ರಶ್ನಿಸಿದ ಅವರು, ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದು ಒಳಹೋಗುವಂತೆ ಸೂಚಿಸಿದರು. ಉಪ ಲೋಕಾಯುಕ್ತರ ಗನ್ ಮಾ್ಯನ್ ಹಾಗೂ ಇತರರು ಭದ್ರತಾ ಸಿಬ್ಬಂದಿ ಮನವೊಲಿಸಿದರು. ಐದತ್ತು ನಿಮಿಷ ನಡೆದ ಗದ್ದಲದ ನಂತರ ನ್ಯಾ.ಅಡಿ ಅವರು ಡಾ.ಗಿರೀಶ್ ಕಚೇರಿಗೆ ತೆರಳಿದರು. ಈ ವೇಳೆ ಅಲ್ಲಿನ ಸಿಬ್ಬಂದಿ ಕೆಲಕಾಲ ಭಯಭೀರಾದರು. ನಂತರ ಗಿರೀಶ್ ಅವರಿಗೆ ಕರೆ ಮಾಡಿ ಮಾತನಾಡಿದ ಅವರು, ತಕ್ಷಣ ಕಚೇರಿಗೆ ಬರುವಂತೆ ಸೂಚಿಸಿದರು. ಆದರೂ, ಅವರು ತಡವಾಗಿ ಆಗಮಿಸಿದರು.
ಈ ವೇಳೆ ಆಸ್ಪತ್ರೆಗೆ ಸಂಬಂಧಿಸಿದ ವಿವಿಧ ಕಡತಗಳನ್ನು ಪರಿಶೀಲಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಐಸಿಯುನಲ್ಲಿ ಸಿಬ್ಬಂದಿ ಇಲ್ಲ: ಮೊದಲು ಐಸಿಯುಗೆ ಭೇಟಿ ನೀಡಿದ ಅವರು, ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ರೋಗಿಗಳ ಜತೆ ಮಾತುಕತೆ ನಡೆಸಿದರು. ನಂತರ ಅಲ್ಲಿ ಸಿಬ್ಬಂದಿ ಕೊರತೆ ಅರಿತ ಅವರು, ಗಿರೀಶ್‍ರನ್ನು ತರಾಟೆಗೆ ತೆಗೆದುಕೊಂಡರು. ತುರ್ತು ಚಿಕಿತ್ಸಾ ಘಟಕ ಎಂದರೆ ರೋಗಿಗಳ ಸ್ಥಿತಿ ಕಠಿಣವಾಗಿರುತ್ತದೆ. ಅಲ್ಲಿಯೇ ಸೂಕ್ತ ಚಿಕಿತ್ಸೆ ಇಲ್ಲವಾದಲ್ಲಿ ಇನ್ನು ಚಿಕಿತ್ಸೆ ಯಾವ ರೀತಿ ಸಿಗುತ್ತದೆ ಎಂದು ಪ್ರಶ್ನಿಸಿದರು. ಆಸ್ಪತ್ರೆ ವೀಕ್ಷಣೆ ನಂತರ ಸುದ್ದಿಗಾರ ಜತೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ 210 ಬೆಡ್‍ಗಳಿವೆ. ಅವುಗಳಲ್ಲಿ ಶೇ.40-50 ಖಾಲಿ ಇವೆ. ಇಲ್ಲಿ ಅಗತ್ಯ ಸೌಲಭ್ಯ ಇದೆ. ಆದರೆ, ವೈದ್ಯರ ಕೊರತೆಯಿಂದ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ ರೋಗಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
Advertisement