ಎಕನಾಮಿಕ್ಸ್ ಸ್ಕೂಲ್‍ನಿಂದ ಹಿಂದೆ ಸರಿಯಲು ಸಿದ್ಧ

ಬೆಂಗಳೂರು ವಿವಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಮಟ್ಟದ `ಸೀತಾರಾಂ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್' ವಿಚಾರ ದಲ್ಲಿ ಕೆಲವು ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ನಮ್ಮ ಸಂಸ್ಥೆಗೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೆಂಗಳೂರು ವಿವಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಮಟ್ಟದ `ಸೀತಾರಾಂ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್' ವಿಚಾರ ದಲ್ಲಿ ಕೆಲವು ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ನಮ್ಮ ಸಂಸ್ಥೆಗೆ ಆಗಬಹುದಾದ ನಕಾರಾತ್ಮಕ ಪ್ರಚಾರ ಮತ್ತು ಮುಜುಗರ ತಪ್ಪಿಸಲು ನಾವು ಪ್ರಸ್ತಾವನೆಯಿಂದ ಹಿಂದೆ ಸರಿಯಲು ಸಿದ್ಧ. ಈ ಬಗ್ಗೆ ಯಾವುದೇ ವಿಷಾದವೂ ಇಲ್ಲ ಎಂದು ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್ ಸ್ಪಷ್ಟಪಡಿಸಿದೆ.

ಇತ್ತೀಚೆಗೆ ನಡೆದ ಬೆಂವಿವಿಯ ಎರಡು ಸಿಂಡಿಕೇಟ್ ಸಭೆಯಲ್ಲಿ ಸೀತಾರಾಂ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಜೊತೆಗೆ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತಲ್ಲದೇ, ವಿದ್ಯಾರ್ಥಿ ಸಂಘಟನೆಯೊಂದು ಪ್ರತಿಭಟಿಸಿತ್ತು. ಈ ಹಿನ್ನೆಲೆಯಲ್ಲಿ ವಿವಿಯು ಸ್ಪಷ್ಟನೆ ನೀಡಿ, ಈ ಸಂಸ್ಥೆಗೆ ಯಾವುದೇ ಜಾಗ ನೀಡುತ್ತಿಲ್ಲ ಮತ್ತು ಸಂಸ್ಥೆಯ ನಿಯಂತ್ರಣವು ವಿವಿಯ ಕೈಯಲ್ಲೇ ಇರುತ್ತದೆ ಎಂದು ಸ್ಪಷ್ಟಪಡಿಸಿತ್ತು.

ಜೊತೆಗೆ ಸ್ವಾಯತ್ತ ಸಂಸ್ಥೆಯಾಗಿ ರೂಪಿಸುವ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಹೇಳಿತ್ತು. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಸುದೀರ್ಘವಾಗಿ ಸ್ಪಷ್ಟನೆ ನೀಡಿರುವ ಜಿಂದಾಲ್ ಸಂಸ್ಥೆಯು, ಒಂದು ವರ್ಗದ ವಿದ್ಯಾರ್ಥಿಗಳು ಆರೋಪಿಸಿರುವಂತೆ ವಿವಿಯಲ್ಲಿ ಈ ಸಂಸ್ಥೆ ಸ್ಥಾಪನೆಯಿಂದ ಶಿಕ್ಷಣದ ಖಾಸಗೀಕರಣವಾದಂತಾಗುತ್ತದೆ. ವಿವಿಯ ಜಾಗ ಖಾಸಗಿ ಸಂಸ್ಥೆಗೆ ನೀಡಲಾಗುತ್ತದೆ ಎಂಬುದೆಲ್ಲ ಆಧಾರರಹಿತ ಆರೋಪಗಳಾಗಿವೆ. ]

ಆರಂಭದಿಂದಲೂ ನಾವು ಹೇಳಿಕೊಂಡು ಬಂದಿರುವಂತೆ ಈ ಸಂಸ್ಥೆಗೆ ಜಾಗವನ್ನೇ ಕೇಳಿಲ್ಲ. ಕಟ್ಟಡವನ್ನು ಮಾತ್ರ ನಿರ್ಮಿಸಿ ಕೊಡುತ್ತೇವೆ, ಜೊತೆಗೆ ಹಾಸ್ಟೆಲ್ ನಿರ್ಮಿಸಿಕೊಡುವುದಾಗಿ ಹೇಳಿದ್ದೆವು. ನಮ್ಮ ನಿಯಂತ್ರಣದಲ್ಲಿ ಈ ಸಂಸ್ಥೆ ನಡೆಯಬೇಕೆಂದು ನಾವೇನೂ ಬಯಸುತ್ತಿಲ್ಲ. ವಿವಿ ಸಿಬ್ಬಂದಿ, ಭೋದಕರೇ ಅಲ್ಲಿ ಕಾರ್ಯನಿರ್ವಹಿಸುತ್ತಾರೆ. ವಿವಿಯಿಂದಲೇ ಪರೀಕ್ಷೆ, ಪ್ರವೇಶ ಸಹ ನಡೆಯುತ್ತದೆ. ಸ್ವಾಯತ್ತ ಸಂಸ್ಥೆಯಾಗಬೇಕೆಂದೂ ಸಹ ನಾವು ಬಯಸಿಲ್ಲ ಎಂದು ಸಂಸ್ಥೆ ತಿಳಿಸಿದೆ.

2012ರಲ್ಲಿ ಇಂತಹದ್ದೇ ವಿವಾದ ಸೃಷ್ಟಿಯಾಗಿತ್ತು. ನಾವು ನಮ್ಮ ಪ್ರಸ್ತಾವನೆ ಹಿಂದಕ್ಕೆ ಪದೆದುಕೊಂಡಿದ್ದೆವು. ಈಗಲೂ ಬಾಹ್ಯ ಹಿತಾಸಕ್ತಿಗಳು ಇಂತಹದ್ದೊಂದು ವಿವಾದವನ್ನು ಸೃಷ್ಟಿಸಿ, ಅನಗತ್ಯ ಆರೋಪಗಳನ್ನು ಮಾಡಿ ನಮ್ಮ ಹೆಸರಿಗೆ ಕಳಂಕ ತರುತ್ತಿವೆ ಎಂದು ಜಿಂದಾಲ್ ಬೇಸರ ವ್ಯಕ್ತಪಡಿಸಿದೆ.

ವಿವಿ ಹೇಳಿದಂತೆಯೇ ಕಟ್ಟಡಗಳನ್ನು ಕಟ್ಟಿಕೊಡುವುದು ನಮ್ಮ ಆಶಯ. ವಿವಾದ ಮೈ ಮೇಲೆ ಎಳೆದುಕೊಳ್ಳಬೇಕೆಂಬ ಯಾವುದೇ ಆಸೆಯೂ ನಮಗಿಲ್ಲ. ನಮ್ಮ ತತ್ವ, ಹೆಸರನ್ನು ಈ ಯೋಜನೆಯಿಂದ ಕಳೆದುಕೊಳ್ಳಲೂ ತಯಾರಿಲ್ಲ. ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುವಂತಹ ಈ ಯೋಜನೆ ಜಾರಿಯು ಸರ್ಕಾರಕ್ಕೆ ವಿದ್ಯಾರ್ಥಿಗಳಿಗೆ ಇಷ್ಟವಿಲ್ಲವೆಂದಾದರೆ ನಮ್ಮ ಒತ್ತಾಯವೂ ಇಲ್ಲ. ಇನ್ಯಾವುದೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದಿಗೆ ಸೇರಿ ಇಂತಹ ಸಂಸ್ಥೆ ಕಟ್ಟುವ ಅವಕಾಶವೂ ನಮಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಕೆ.ಆರ್.ರಘುನಾಥ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com