
ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರದ ಬರ ಅಧ್ಯಯನ ತಂಡವು ಶೀಘ್ರವೇ ರಾಜ್ಯಕ್ಕೆ ಭೇಟಿ ನೀಡಲಿದೆ. ಈ ಕುರಿತು ಈಗಾಗಲೇ ಸರ್ಕಾರಕ್ಕೆ ಕೇಂದ್ರದಿಂದ ಪತ್ರ ಬಂದಿದೆ ಎಂದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿನ ವಿದ್ಯುತ್ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಗ್ರಿಡ್‍ನಿಂದ 1500 ಮೆವ್ಯಾ ವಿದ್ಯುತ್‍ಗೆ ಬೇಡಿಕೆ ಇರಿಸಿರುವುದಾಗಿ ತಿಳಿಸಿದರು.
ದೇವದುರ್ಗ ತಾಲೂಕಿನ ಅರಕೇರಾ ಮತ್ತು ಮಾನವಿ ತಾಲೂಕಿನ ಲಕ್ಕಂದಿನ್ನಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಭಿಕರ ಬರವಿದ್ದು, ರಾಜ್ಯ ಸರ್ಕಾರ ಈಗಾಗಲೇ ರೂ. 235 ಕೋಟಿ ಪರಿಹಾರ ಕಾರ್ಯಕ್ಕೆ ಬಿಡುಗಡೆಗೊಳಿಸಿದೆ. ಬರದಿಂದ ರೂ. 11500 ಕೋಟಿ ಮೊತ್ತದ ಬೆಳೆ ಹಾನಿಯಾಗಿದೆ. ರೂ. 3050 ಕೋಟಿ ಪರಿಹಾರಕ್ಕೆ ಕೇಂದ್ರಕ್ಕೆ ಕೇಳಿದ್ದು ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಕೇಂದ್ರ ಬರ ಅಧ್ಯಯನ ತಂಡವು ಬರಪೀಡಿತ ಜಿಲ್ಲೆಗೆ ಭೇಟಿ ನೀಡಿ ಮರಳಿದ ನಂತರದಲ್ಲಿ ಕೇಂದ್ರಕ್ಕೆ ಮತ್ತೆ ನಿಯೋಗದಲ್ಲಿ ತೆರಳಿ ಮನವಿ ಮಾಡಲಾಗುತ್ತದೆ. ಗುಜರಾತ್, ಬಿಹಾರ ರಾಜ್ಯಗಳಿಗೆ ಕೇಂದ್ರವು ಹೆಚ್ಚಿನ ಅನುದಾನ ಒದಗಿಸಿದೆ. ಆದರೆ, ಕರ್ನಾಟಕಕ್ಕೆ ಅನುದಾನ ಒದಗಿಸುವಲ್ಲಿ ವಿಳಂಬ ಮಾಡುತ್ತಿದೆ ಎಂದ ಅವರು ಕೇಂದ್ರ ಶೀಘ್ರವೇ ಅಗತ್ಯ ಅನುದಾನ ಒದಗಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ವಿದ್ಯುತ್ ಸಮಸ್ಯೆ: ರಾಜ್ಯದಲ್ಲಿ ವಿದ್ಯುತ್ ಅಭಾವ ಹೆಚ್ಚಳ ಕಂಡಿದೆ. ದಿನವೂ 3 ಸಾವಿರ ಮೆವ್ಯಾ ವಿದ್ಯುತ್ ಕೊರತೆಯಾಗುತ್ತಿದೆ. ಹೊರರಾಜ್ಯಗಳಿಂದ ವಿದ್ಯುತ್ ಖರೀದಿಸಲು ಕಾರಿಡಾರ್ ಕೊರತೆಯಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರದ ಪವರ್‍ಗ್ರಿಡ್‍ಗಳಿಂದಲೇ ರಾಜ್ಯದ ವಿದ್ಯುತ್ ಅಭಾವ ನೀಗಿಸಲು 1500 ಮೆವ್ಯಾ ವಿದ್ಯುತ್ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಬಿಬಿಎಂಪಿ: ಬಿಬಿಎಂಪಿಯಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯ ಸ್ಥಾನಗಳಲ್ಲಿ ಗೆದ್ದಿದ್ದರೂ ಅದಕ್ಕೆ ಅಧಿಕಾರಕ್ಕೇರುವಷ್ಟು ಸಂಖ್ಯೆಯ ಶಾಸಕರು, ಎಂಎಲ್ಸಿಗಳು ಲಭ್ಯರಿಲ್ಲ. ಕಾಂಗ್ರೆಸ್ ಬಳಿ ಅಗತ್ಯ ಸಂಖ್ಯೆಯ ಬೆಂಬಲವಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದಲೇ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅವರು ಜೆಡಿಎಸ್ ಜತೆ ಮಾತುಕತೆ ನಡೆಸಿದ್ದಾರೆಂದರು.
ಸಂಪುಟ ವಿಸ್ತರಣೆ:ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಗೆ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆ ನಂತರ ಕಾಲ ಕೂಡಿಬರಲಿದೆ ಎಂದ ಅವರು, ಸರ್ಕಾರವು ಬರ ಪರಿಹಾರ ಕಾಮಗಾರಿಗಳಲ್ಲಿ ಯಾವುದೇ ಲೋಪ ಸಹಿಸದು. ಕೆಳಹಂತದ ಮತ್ತು ಮೇಲಿನ ಅಧಿಕಾರಿಗಳು ಎಂಬ ಭೇದಭಾವ ಮಾಡದೇ ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಸ್ಪೀಕರ್: ರಾಜ್ಯ ಸರ್ಕಾರದ ಬರ ನಿರ್ವಹಣೆಗೆ ಸಂಬಂಧಿಸಿ ಸ್ಪೀಕರ್ ಕಾಗೋಡು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ಪೀಕರ್ ಎಂದಿಗೂ ರಾಜಕೀಯ ಮಾತನಾಡಲ್ಲ ಎಂದಷ್ಟೇ ಹೇಳಿ ಜಾರಿಕೊಂಡರು. ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ ಪರಿಹಾರ ನೀಡುವಲ್ಲಿ ಆಗುತ್ತಿರುವ ವಿಳಂಬ ಸರ್ಕಾರ ಸಹಿಸದು. ಅಧಿಕಾರಿಗಳು ರೈತರ ಆತ್ಮಹತ್ಯೆಯ ಪರಿಹಾರಕ್ಕೆ ಸಂಬಂಧಿಸಿದ ವರದಿಗಳನ್ನು ಸರ್ಕಾರಕ್ಕೆ ತುರ್ತಾಗಿ ಕಳಿಸಿಕೊಡಲು ಸೂಚಿಸಿರುವುದಾಗಿ ಹೇಳಿದರು. ಶಾಸಕರಾದ ಎನ್.ಎಸ್. ಬೋಸರಾಜು, ಹಂಪಯ್ಯ ನಾಯಕ, ಪ್ರತಾಪಗೌಡ ಪಾಟೀಲ್, ತುಂಗಭದ್ರಾ ಕಾಡಾ ಅಧ್ಯಕ್ಷ ವಸಂತಕುಮಾರ್ ಸೇರಿದಂತೆ ಪಕ್ಷದ ಪ್ರಮುಖರಿದ್ದರು.
Advertisement