
ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಹುದ್ದೆಗೆ ಸೆ.11 ರಂದು ನಡೆಯಲಿರುವ ಆಯ್ಕೆಯಲ್ಲಿ ಸಂಸದ ವೀರಪ್ಪ ಮೊಯ್ಲಿ ಮತ್ತು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಸೇರಿದಂತೆ ಆರು ಮಂದಿಗೆ ಮತದಾನ ಹಕ್ಕು ನಿರಾಕರಿಸಲು ಪ್ರಾದೇಶಿಕ ಆಯುಕ್ತರು ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಹೈ ಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಡಿ.ರಮೇಶ್ ಮತ್ತು ಎಸ್.ಎಸ್.ಕಲ್ಮಠ ಎಂಬುವರು ಈ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಕೀಲ ಎನ್.ಪಿ.ಅಮೃತೇಶ್ ವಕಾಲತು ವಹಿಸಿದ್ದಾರೆ.
ಅರ್ಜಿದಾರರ ವಾದವೇನು?
ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ, ಬೆಂಗಲೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯರಾದ ಜಯಮಾಲ, ವಿ.ಎಸ್.ಉಗ್ರಪ್ಪ, ರಘು ಆಚಾರ್ ಮತ್ತು ಆಂಗ್ಲೋ ಇಂಡಿಯನ್ ಸದಸ್ಯ ವಿನಿತಾ ನೀರೋ ಅವರಿಗೆ, ಸೆ.11ರಂದು ನಡೆಯಲಿರುವ ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಹುದ್ದೆಯ ಚುನಾವಣೆಗೆ ಮತದಾನ ಹಕ್ಕು ನೀಡಲಾಗಿದೆ.
ಕಾನೂನು ಪ್ರಕಾರ ಬಿಬಿಎಂಪಿ ವ್ಯಾಪ್ತಿಯ ಮತದಾರ ಪಟ್ಟಿಯಲ್ಲಿ ಹೆಸರಿರುವ ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಮಾತ್ರ ಮೇಯರ್ ಆಯ್ಕೆಯಲ್ಲಿ ಮತದಾನ ಹಕ್ಕು ಹೊಂದಿರುತ್ತಾರೆ. ಆದರೆ, ಆರು ಮಂದಿಯ ಬಿಬಿಎಂಪಿ ವ್ಯಾಪ್ತಿಯ ಮತದಾರರಲ್ಲ. ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರದಲ್ಲಿ ತಮ್ಮ ವಿಳಾಸ ಹೊಂದಿದ್ದಾರೆ. ಸಂಸದ ಡಿ.ಕೆ.ಸುರೇಶ್ ಕನಕಪುರದಲ್ಲಿ ವಿಳಾಸ ಹೊಂದಿದ್ದು, ಅಲ್ಲಿನ ಮತದಾರರ ಪಟ್ಟಿಯಲ್ಲಿ ಇವರ ಹೆಸರಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಈ ಆರು ಮಂದಿಗೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಲ್ಲಿ ಮತದಾನ ಮಾಡುವ ಅವಕಾಶ ನಿರಾಕರಿಸಲ ಪ್ರಾದೇಶಿಕ ಆಯುಕ್ತರು ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.
Advertisement