
ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಈ ಭಾನುವಾರ ಬೀದಿ ನಾಟಕಗಳದ್ದೇ ವಿಶೇಷ, ಮೂರು ವಿಭಿನ್ನ ವಿಷಯಕ್ಕೆ ಸಂಬಂಧಿಸಿದಂತೆ ನಾಟಕಗಳು ಪ್ರದರ್ಶನಗೊಂಡವು.
ಮೌಂಟ್ ಕಾರ್ಮೆಲ್ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಪೋಷಕಾಂಶದ ವಾರ ಪ್ರಯುಕ್ತ ಜಾಗೃತಿ ನಾಟಕ ನಡೆದರೆ ಲೋಹಯುಕ್ತ ಗಣಪನನ್ನು ಬಳಸಿ ಪರಿಸರ ನಾಶ ಮಾಡಬೇಡಿ, ಬದಲಿಗೆ ಪರಿಸರ ಸ್ನೇಹಿ ಗಣಪನನ್ನು ಆರಾಧಿಸಿ ಜನರ ಜೀವ ಉಳಿಸಿ ಎಂದು ಸಂದೇಶ ಸಾರುವ ಬೀದಿ ನಾಟಕವನ್ನು ವಿಜಯ್, ತಂಡದವರು ಪ್ರದರ್ಶಿಸಿದರು.
ಸಮಾಜದಲ್ಲಿ ಮಹಿಳೆಯ ಮೇಲಾಗುತ್ತಿರುವ ಅತ್ಯಾಚಾರ, ದೌರ್ಜನ್ಯ, ಮಕ್ಕಳ ನಿಂದನೆಯಂತಹ ಕ್ರೌರ್ಯ ತಡೆಗೆ ಜಾಗೃತಿ ಕಾರ್ಯಕ್ರಮವಾಗಿ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಬೀದಿ ನಾಟಕ ನಡೆಸಿದರು. ಕಳೆದ ವಾರ ತಂಬಾಕಿನಿಂದಾಗುವ ದುಷ್ಪರಿಣಾಮ ಕುರಿತು ಮ್ಯಾಜಿಕ್ ಷೋ ನಡೆದರೆ ಈ ಬಾರಿ ಜೇಮ್ಸ್ ಜಾರ್ಜ್ ಅವರಿಂದ ಮ್ಯಾಜಿಕ್ ಷೋ ನಡೆಯಿತು.
ಅಕ್ಷಯ ಫೌಂಡೇಶನ್ ಸಹಯೋಗದೊಂದಿಗೆ ಡಾ.ಎಚ್.ಎಸ್.ನಾರಾಯಣ ಅವರಿಂದ ಕನ್ನಡ ಸಾಹಿತ್ಯಕ್ಕೆ ಬೀಚಿ ಕೊಡುಗೆ ಕುರಿತು ಉಪನ್ಯಾಸ ನಡೆಯಿತು. ಯುವಕರ ಒಂದು ತಂಡ ಸ್ವಯಂ ಪ್ರೇರಿತರಾಗಿ ಸಂಗೀತ ಉಪಕರಣಗಳೊಂದಿಗೆ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಳೆದ ವಾರಕ್ಕಿಂತ ಈ ವಾರ ಅತಿ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಮಧುಬನಿಯ ಜ್ಞಾನೇಶ್ ಮಿಶ್ರಾ ಅವರು ಹುಲಿ ಕುರಿತು ಚಿತ್ರಕಲಾ ಪ್ರದರ್ಶನ ನಡೆಸಿದರು.
Advertisement