ಪ್ರೇಯಸಿಗಾಗಿ ಹುಸಿ ಬಾಂಬ್ ಇಟ್ಟ, ಪತ್ನಿ ಕೊಂದ ವಿಚಾರ ಬಾಯಿಬಿಟ್ಟ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ತಡರಾತ್ರಿ ಬಂದ ಹುಸಿ ಬಾಂಬ್ ಬೆದರಿಕೆ ಪ್ರಕರಣದ ತನಿಖೆಯನ್ನು...
ಸಾಫ್ಟ್ ವೇರ್ ಕಂಪನಿ ಉದ್ಯೋಗಿ ಎಂ.ಜಿ. ಗೋಕುಲ್‍ (ಸಂಗ್ರಹ ಚಿತ್ರ)
ಸಾಫ್ಟ್ ವೇರ್ ಕಂಪನಿ ಉದ್ಯೋಗಿ ಎಂ.ಜಿ. ಗೋಕುಲ್‍ (ಸಂಗ್ರಹ ಚಿತ್ರ)

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ತಡರಾತ್ರಿ 1.40ರ ಸುಮಾರಿಗೆ ಬಂದ ಹುಸಿ ಬಾಂಬ್ ಬೆದರಿಕೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಆದೇಶಿಸಿದ್ದಾರೆ.

ವಾಟ್ಸ್ ಆ್ಯಪ್ ಮೂಲಕ ಏರ್ ಪೋರ್ಟ್‍ಗೆ ಹುಸಿ ಸಂದೇಶ ಹಾಗೂ ಫೋನ್ ಕರೆ ಮಾಡಿರುವ ಆರೋಪದ ಮೇಲೆ ವಶಕ್ಕೆ ತೆಗೆದುಕೊಂಡಿದ್ದ ಸಾಫ್ಟ್ ವೇರ್ ಕಂಪನಿ ಉದ್ಯೋಗಿ ಎಂ.ಜಿ. ಗೋಕುಲ್‍ನನ್ನು(30) ಭಾನುವಾರ ಅಧಿಕೃತವಾಗಿ ಬಂಧಿಸಲಾಗಿದೆ. ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಗೋಕುಲ್‍ನ ಗೆಳತಿ ಧನ್ಯ ಹಾಗೂ ಆಕೆಯ ಪತಿ ಸಜು ಜೋಸ್‍ನನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದೇ ವೇಳೆ ಗೋಕುಲ್ ಜು.28ರಂದು ತನ್ನ ಪತ್ನಿ ಅನು ಎಂಬುವರನ್ನು ಕೊಲೆ ಮಾಡಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆದರೆ, ಪೊಲೀಸರ ವಿಚಾರಣೆ ವೇಳೆ ಟಿವಿ ಮೈ ಮೇಲೆ ಬಿದ್ದು ಪತ್ನಿ ಮೃತಪಟ್ಟಿದ್ದಾಳೆ ಎಂದು ಹೇಳಿಕೆ ನೀಡಿದ್ದ. ಅನು ಸಾವಿನ ಬಗ್ಗೆ ಯಾರೊಬ್ಬರು ಅನುಮಾನ ವ್ಯಕ್ತಪಡಿಸಿರಲಿಲ್ಲ.

ಪತ್ನಿ ಕೊಂದ ವಿಚಾರ ಬಾಯಿಬಿಟ್ಟ

ಮೃತ ಅನು ತಂದೆ ಉತ್ತರ ಭಾರತದಲ್ಲಿ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವವರು. ಅವರು ಕೂಡ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರಲಿಲ್ಲ. ತನ್ನ ಅಳಿಯ ಒಳ್ಳೆಯವನು. ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಇಬ್ಬರೂ ಚೆನ್ನಾಗಿದ್ದರು ಎಂದು ಹೇಳಿದ್ದರು. ಹೀಗಾಗಿ, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ವಿವಾಹಿತ ಸ್ನೇಹಿತೆ ಮೇಲೆ ಕಣ್ಣು ಹಾಕಿದ್ದನಾ?:

ಬಂಧಿತ ಆರೋಪಿ ಗೋಕುಲ್, ಕೇರಳ ಮೂಲದ ಪರಿಚಿತ ಸಜು ಜೋಸ್ ಎಂಬಾತನ ಪತ್ನಿ ಧನ್ಯ ಸಹಪಾಠಿಗಳಾಗಿದ್ದರು. ಧನ್ಯಳನ್ನು ಗೋಕುಲ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಆಕೆ ಜೋಸ್‍ನನ್ನು ವಿವಾಹವಾಗಿ ಎಚ್‍ಎಸ್‍ಆರ್ ಬಡಾವಣೆಯ ಫ್ಲ್ಯಾಟ್‍ನಲ್ಲಿ ನೆಲೆಸಿದ್ದಳು. ಇತ್ತ ಆರೋಪಿ ಗೋಕುಲ್ ಕೂಡ ಪಶ್ಚಿಮ ಬಂಗಾಳದ ಎಂಬಿಎ ಪದವಿಧರೆ ಅನುಳನ್ನು ಮದುವೆ ಮಾಡಿಕೊಂಡು ಅದೇ ಪ್ರದೇಶದ ಪಕ್ಕದ ಫ್ಲ್ಯಾಟ್‍ನಲ್ಲೇ ವಾಸವಿದ್ದ. ಕಳೆದ ಜುಲೈನಲ್ಲಿ ಗೋಕುಲ್ ಪತ್ನಿ ಅನು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು.

ಅದಾದ ನಂತರ ಹಳೇ ಗೆಳತಿ ಧನ್ಯ ಜತೆ ಸಂಪರ್ಕವನ್ನು ಗೋಕುಲ್ ಮುಂದುವರಿಸಿದ್ದ ಎನ್ನಲಾಗಿದೆ. ಅಲ್ಲದೇ ಆಕೆಯನ್ನೇ ಮದುವೆಯಾಗಬೇಕೆಂದು ನಿರ್ಧರಿಸಿ ಜೋಸ್‍ನನ್ನು ಧನ್ಯಳಿಂದ ದೂರ ಮಾಡಲು ಸಂಚು ರೂಪಿಸಿದ್ದ. ಅದಕ್ಕಾಗಿ ಜೋಸ್ ಹೆಸರಿನ ಗುರುತಿನ ಚೀಟಿ ಹಾಗೂ ಫೋಟೋ ನೀಡಿ ಸಿಮ್ ಕಾರ್ಡ್ ಖರೀದಿಸಿ ಅದೇ ಸಿಮ್ ನಿಂದಲೇ ಕೆಐಎಎಲ್ ಹಾಗೂ ದೆಹಲಿ ಏರ್ ಪೋರ್ಟ್ ಗೂ ವಾಟ್ಸ್ ಅಪ್ ಸಂದೇಶದ ಜತೆಗೆ ಫೋನ್ ಕರೆಯನ್ನು  ಮಾಡಿ ಬಾಂಬ್ ಬೆದರಿಕೆ ಹಾಕಿದ್ದ. ಇದರಿಂದ ಜೋಸ್ ಬಂಧಿತನಾಗಿ ಜೈಲಿಗೆ ಹೋಗುತ್ತಾನೆ.

ತಾನು ಧನ್ಯ ಜತೆ ಸಂಸಾರ ನಡೆಸಬಹುದು ಎನ್ನುವ ಸಂಚು ರೂಪಿಸಿದ್ದ ಎನ್ನಲಾಗಿದೆ. ಆದರೆ, ಗೋಕುಲ್‍ನ ಎಲ್ಲ ಸಂಚು ಆತನಿಗೆ ಉಲ್ಟಾ ಹೊಡೆದಿದೆ. ಶನಿವಾರ ತಡರಾತ್ರಿ
1.40ರ ವೇಳೆಗೆ ಗೋಕುಲ್ ಹುಸಿ ಬಾಂಬ್ ಸಂದೇಶ ಕಳುಹಿಸಿದ ನಂತರ ಕೇಂದ್ರೀಯ ಕೈಗಾರಿಕಾ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ವಿಮಾನಗಳ ಪರಿಶೀಲಿಸಿದಾಗಯಾವುದೇ ಸ್ಪೋಟಕ ವಸ್ತು ಕಂಡು  ಬಂದಿರಲಿಲ್ಲ. ಹೀಗಾಗಿ ಇದು ಹುಸಿ ಬೆದರಿಕೆ ಎಂದು ದೃಢಪಡಿಸಿದ್ದರು.

ಮೊಬೈಲ್ ಪೋನ್ ಸಂಖ್ಯೆ ವಿಳಾಸ ಹಿಡಿದು ಹೊರಟ ಪೊಲೀಸರು ಎಚ್‍ಎಸ್‍ಆರ್ ಲೇಔಟ್ ನ ವಿಳಾಸ ಪತ್ತೆಹಚ್ಚಿದರು. ಶನಿವಾರ ಬೆಳಗ್ಗೆ ಜೋಸ್ ಮನೆ ಬಾಗಿಲು ಎಡತಾಕಿದರು. ಆದರೆ, ತಾನು ಯಾವುದೇ ರೀತಿ ಸಂದೇಶ ಕಳುಹಿಸಿಲ್ಲ. ಅಲ್ಲದೇ, ತನ್ನ ಬಳಿ ಇರುವ ಮೊಬೈಲ್ ಸಂಖ್ಯೆ ಬೇರೆ ಇದೆ ಎಂದು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ಟವರ್ ಲೋಕೇಶನ್ ಪರಿಶೀಲಿಸಿದಾಗ ನಿಮ್ಮ ಹೆಸರಿನಲ್ಲಿಯಾರಿಗಾದರೂ ಸಿಮ್ ಕಾರ್ಡ್ ಕೊಡಿಸಿದ್ದೀರಾ  ಅಥವಾ ನಿಮ್ಮವರು ಯಾರಾದರೂ ಇದ್ದಾರಾ ಎಂದು ಕೇಳಿದ್ದಾರೆ. ಆಗ, ನನ್ನ ಸ್ನೇಹಿತ ಇದ್ದಾನೆ. ಆದರೆ, ಆತನಿಗೆ ಸಿಮ್ ಕಾರ್ಡ್ ಕೊಡಿಸಿಲ್ಲಎಂದು ಜೋಸ್ ಹೇಳಿದ್ದಾನೆ. ಕೂಡಲೇ  ಪೊಲೀಸರು ಪಕ್ಕದ ಫ್ಲ್ಯಾಟ್‍ನಲ್ಲಿದ್ದ ಗೋಕುಲ್ ನನ್ನು ವಶಕ್ಕೆ ತೆಗೆದುಕೊಂಡ ತೀವ್ರ ವಿಚಾರಣೆ ನಡೆಸಿದಾಗ ತಾನೇ ಸಂದೇಶ ಕಳುಹಿಸಿದ್ದನ್ನು ಒಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ.

ಪತ್ನಿ ಸಾವಿಗೆ ಮರುಜೀವ: ಗೋಕುಲ್ ಹಿನ್ನೆಲೆ ಪರಿಶೀಲಿಸಿದಾಗ ಇದೇ ವರ್ಷ ಜು.27ರಂದು ಪತ್ನಿ ಅಸಹಜವಾಗಿ ಮೃತಪಟ್ಟಿದ್ದರು. ತಲೆ ಮೇಲೆ ಟಿವಿ ಸೆಟ್ ಬಿದ್ದು ಮೃತಪಟ್ಟಿದ್ದಾಳೆ ಎಂದು ಗೋಕುಲ್ ಪೊಲೀಸರಿಗೆ ತಿಳಿಸಿದ್ದ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಅಂತ್ಯ ಹಾಡಿದ್ದರು. ಆದರೆ, ಹುಸಿ ಕರೆ ಪ್ರಕರಣದಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com