ಮುಂಬೈಗೂ ಬಾಂಬ್ ಬೆದರಿಕೆ ಕರೆ

ಕೆಐಎಎಲ್ ಹಾಗೂ ದೆಹಲಿ ಏರ್‍ ಪೋರ್ಟ್ ಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಹಾಗೂ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಪೊಲೀಸರಿಂದ ಬಂಧಿತನಾಗಿರುವ ಆರೋಪಿ ಎಂ.ಜಿ.ಗೋಕುಲ್ ಮುಂಬೈ ಏರ್ ಪೋರ್ಟ್ ಗೂ ಫೋನ್ ಕರೆ ಮಾಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ...
ಬೆದರಿಕೆ ಕರೆ ಮಾಡಿದ್ದ ಆರೋಪಿ ಎಂ.ಜಿ.ಗೋಕುಲ್ (ಸಂಗ್ರಹ ಚಿತ್ರ)
ಬೆದರಿಕೆ ಕರೆ ಮಾಡಿದ್ದ ಆರೋಪಿ ಎಂ.ಜಿ.ಗೋಕುಲ್ (ಸಂಗ್ರಹ ಚಿತ್ರ)

ಬೆಂಗಳೂರು: ಕೆಐಎಎಲ್ ಹಾಗೂ ದೆಹಲಿ ಏರ್‍ ಪೋರ್ಟ್ ಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಹಾಗೂ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಪೊಲೀಸರಿಂದ ಬಂಧಿತನಾಗಿರುವ ಆರೋಪಿ ಎಂ.ಜಿ.ಗೋಕುಲ್ ಮುಂಬೈ ಏರ್ ಪೋರ್ಟ್ ಗೂ ಫೋನ್ ಕರೆ ಮಾಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಸಿಸಿಬಿ ಪೊಲೀಸರು 14 ದಿನಗಳ ಕಾಲ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಶನಿವಾರ ತಡರಾತ್ರಿ 1.40ರ ಸುಮಾರಿಗೆ ಕೆಐಎಎಲ್ ಹಾಗೂ ದೆಹಲಿ ಏರ್ ಪೋರ್ಟ್‍ಗಳಿಗೆ ಕರೆ ಮಾಡಿದ್ದ ಆರೋಪಿ ಮುಂಬೈಗೆ ಅದೇ ಮಾದರಿಯಲ್ಲಿ ಹುಸಿ ಕರೆ ಮಾಡಿದ್ದ. ಆದರೆ, ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯಿಸಿದ್ದರು. ಫೋನ್ ಕರೆ ಮಾಡಿದ ವ್ಯಕ್ತಿ ಯಾರು ಎಂಬ ಬಗ್ಗೆಯೂ ತನಿಖೆ ನಡೆಸುವ ಗೋಜಿಗೆ ಹೋಗಿರಲಿಲ್ಲ ಎಂದು ತಿಳಿದು ಬಂದಿದೆ.

ಮತ್ತೆ ಮತ್ತೆ ಕರೆ ಮಾಡಲು ಮುಂದಾದಾಗ ಫೋನ್ ಕರೆಯನ್ನು ಕಟ್ ಮಾಡಿದ್ದರು ಎಂದು ತಿಳಿದು ಬಂದಿದೆ. ಘಟನೆಯ ಗಾಂಭಿರ್ಯತೆ ಹಿನ್ನೆಲೆಯಲ್ಲಿ, ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ದೆಹಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವ ಸಾಧ್ಯತೆಯೂ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆರೋಪಿಯನ್ನು 14 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಆರೋಪಿಯಿಂದ ವಶಪಡಿಸಿಕೊಂಡಿರುವ ಮೊಬೈಲ್ ಫೋನ್, ಲ್ಯಾಪ್‍ಟಾಪ್, ಪೆನ್‍ಡ್ರೈವ್ ಸೇರಿದಂತೆ ಇತರ ಉಪಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಗರಿಷ್ಠ ಶಿಕ್ಷೆ ಜೀವಾವಧಿ: ಆರೋಪಿ ವಿರುದ್ಧ `ನಾಗರೀಕ ವಿಮಾನಯನ ಸುರಕ್ಷತೆಗೆ ಧಕ್ಕೆ ತರುವ ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ '(ಎಸ್ ಯುಎಎಸ್‍ಸಿಎ) ಅನ್ವಯ ಪ್ರಕರಣ ದಾಖಲಿಸಿದೆ. ಈ ಕಾಯ್ದೆ ಅನ್ವಯ ಆರೋಪಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಇದೆ. ಇದುವರೆಗೂ ಹುಸಿ ಬಾಂಬ್ ಕರೆ ಮಾಡಿರುವ ಯಾವೊಬ್ಬ ವ್ಯಕ್ತಿ ವಿರುದ್ಧವೂ `ಎಸ್‍ಯುಎಎಸ್‍ಸಿಎ' ಕಾಯ್ದೆ ದಾಖಲಿಸಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ಹಾಗೂ ದೆಹಲಿ ವಿಮಾನ ನಿಲ್ದಾಣಗಳಿಂದ ಸಂಚರಿಸುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯಾಯ ಉಂಟು ಮಾಡಿದ್ದಲ್ಲದೇ ಪ್ರಯಾಣಿಕರು ಹಾಗೂ ಭದ್ರತಾ ಸಿಬ್ಬಂದಿಗಳಿಗೆ ತೀವ್ರ ಆತಂಕ ಸೃಷ್ಟಿಸಿದ್ದ. ಅಷ್ಟೇ ಅಲ್ಲದೇ ಗೋಕುಲ್ ಮಾಡಿದ ಹುಸಿ ಕರೆಗಳಿಂದ ವಿಮಾನಯಾನ ಸಂಸ್ಥೆಗಳು ಹಾಗೂ ಏರ್ ಪೋರ್ಟ್‍ಗಳಿಗೆ ರು.6.5 ಕೋಟಿ ನಷ್ಟ ಉಂಟಾಗಿದೆ.

ಹೀಗಾಗಿ, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ ಅಪರಾಧಿಗಳಿಗೆ ಗಂಭೀರ ಸಂದೇಶ ರವಾನಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಐಎಎಲ್ ಜತೆಗೆ ದೆಹಲಿಗೂ ಆರೋಪಿ ಕರೆ ಮಾಡಿದ್ದಾನೆ. ಒಂದೇ ದಿನವೇ ಎರಡು ಕಡೆ ಕರೆಗಳು ಹೋಗಿರುವುದರಿಂದ ದೆಹಲಿ ಅಧಿಕಾರಿಗಳು ಪ್ರಕರಣದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ತಿಳಿದಿಲ್ಲ. ಆದರೆ, ಅವರು ಕೂಡಾ ಆರೋಪಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಸಿಸಿಬಿ ಹಿರಿಯ ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com