ಗೋಕುಲ್ ಬಿಚ್ಚಿಟ್ಟ ಬಾಂಬ್ ರಹಸ್ಯ

ಕೆಐಎಎಲ್, ದೆಹಲಿ ಹಾಗೂ ಮುಂಬೈ ಏರ್ ಪೋರ್ಟ್‍ಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿಕರೆ ಮಾಡಿ ಪೊಲೀಸರಿಂದ ಬಂಧಿತನಾಗಿರುವ ಟೆಕ್ಕಿ ಎಂ.ಜಿ. ಗೋಕುಲ್ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ದಿನಕ್ಕೊಂದು ಹೊಸ ಹೊಸ ಮಾಹಿತಿಗಳನ್ನು ಹೊರಗೆಡುವುತ್ತಿದ್ದು...
ಬಂಧಿತ ಆರೋಪಿ ಎಂ.ಜಿ. ಗೋಕುಲ್
ಬಂಧಿತ ಆರೋಪಿ ಎಂ.ಜಿ. ಗೋಕುಲ್

ಬೆಂಗಳೂರು: ಕೆಐಎಎಲ್, ದೆಹಲಿ ಹಾಗೂ ಮುಂಬೈ ಏರ್ ಪೋರ್ಟ್‍ಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿಕರೆ ಮಾಡಿ ಪೊಲೀಸರಿಂದ ಬಂಧಿತನಾಗಿರುವ ಟೆಕ್ಕಿ ಎಂ.ಜಿ. ಗೋಕುಲ್ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ದಿನಕ್ಕೊಂದು ಹೊಸ ಹೊಸ ಮಾಹಿತಿಗಳನ್ನು ಹೊರಗೆಡುವುತ್ತಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಯತ್ನದಲ್ಲಿದ್ದಾಗ ವಕೀಲರು ಸಿಗದ್ದರಿಂದ ಆಕೆಯನ್ನು ಹತ್ಯೆಗೈದಿರುವುದಾಗಿ ಹೇಳಿದ್ದಾನೆಂದು ಮೂಲಗಳು ತಿಳಿಸಿವೆ.

ಪತ್ನಿ ಅನುರಾಧ ಜತೆ ಸಂಸಾರ ಮಾಡಲು ಇಷ್ಟವಿಲ್ಲದ ಕಾರಣ ವಿಚ್ಛೇದನ ನೀಡಲು ನಿರ್ಧರಿಸಿದ್ದೆ. ಕೋರ್ಟ್‍ಗೆ ಅರ್ಜಿ ಸಲ್ಲಿಸಲು ವಕೀಲರ ಭೇಟಿ ಮಾಡಲೂ ಹೋಗಿದ್ದೆ. ಆದರೆ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ವಿಧಿವಶವಾಗಿದ್ದರಿಂದ ಆ ದಿನ ವಕೀಲರ ಭೇಟಿ ಸಾಧ್ಯವಾಗಲಿಲ್ಲ. ಒಂದು ವೇಳೆ ವಕೀಲರು ಸಿಕ್ಕಿದ್ದರೆ ಪತ್ನಿಗೆ ವಿಚ್ಛೇದನ ಅರ್ಜಿ ನೀಡುತ್ತಿದ್ದೆ. ಆಕೆಯನ್ನು ಕೊಲೆ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

ಬುದ್ಧಿಮಾತು ಕೇಳದ ಹೆಂಡತಿ: ಅನೈತಿಕ ಸಂಬಂಧ ಬಿಟ್ಟು ಉತ್ತಮ ಗೃಹಿಣಿಯಾಗಿ ಜೀವನ ನಡೆಸುವಂತೆ ಹಲವು ಬಾರಿ ಬುದ್ಧಿವಾದ ಹೇಳಿದ್ದೆ. ಆದರೂ, ಆಕೆ ಸರಿದಾರಿಗೆ ಬಾರದೆ ತನ್ನದೇ ಹಾದಿಯಲ್ಲೇ ಸಾಗುತ್ತಿದ್ದಳು. ಹೀಗಾಗಿ ಆಕೆಯಿಂದ ದೂರವಾಗಲು ವಿಚ್ಛೇದನ ನೀಡುವ ನಿರ್ಧಾರಕ್ಕೆ ಬಂದಿದ್ದೆ.

ಜುಲೈ 28ರ ಬೆಳಗ್ಗೆ ವಕೀಲರ ಸಂಪರ್ಕಿಸಿ ಕೋರ್ಟ್‍ಗೆ ಅರ್ಜಿ ಸಲ್ಲಿಸಲು ಹೋಗಿದ್ದೆ. ಆದರೆ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನದ ಹಿನ್ನೆಲೆಯಲ್ಲಿ ವಕೀಲರ ಭೇಟಿ ಸಾಧ್ಯವಾಗಲಿಲ್ಲ. ವಾಪಸ್ ಮನೆಗೆ ಬಂದೆ. ಆ ದಿನ ರಾತ್ರಿ ಮತ್ತೆ ಜಗಳವಾಯಿತು.

ಆಗ ಕೊಲೆ ಮಾಡುವ ನಿರ್ಧಾರಕ್ಕೆ ಬಂದೆ. ಚೆಂದದ ಮಾತುಗಳನ್ನಾಡುತ್ತಾ ಸಿಕ್ಕಾಪಟ್ಟೆ ಮದ್ಯ ಸೇವಿಸಲು ಪ್ರೇರೇಪಿಸಿದೆ. ಬಳಿಕ ಅಮಲಿನಲ್ಲಿದ್ದಾಗ ಗಣೇಶ ವಿಗ್ರಹದಿಂದ ಹೊಡೆದು ಹತ್ಯೆ ಮಾಡಿದೆ. ಕುಡಿದು ಬಿದ್ದು ಮೃತಪಟ್ಟಿದ್ದಾಗಿ ಪೊಲೀಸರು ಹಾಗೂ ಮಾವ ನಿಗೆ ಕರೆ ಮಾಡಿ ತಿಳಿಸಿದ್ದೆ ಎಂದು ಗೋಕುಲ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಿಮ್ ಕಾರ್ಡ್ ನಾಶ, ಮೊಬೈಲ್ ಎಸೆದ:
 ಪತ್ನಿ ಕೊಲೆಗೈದ ನಂತರ ಆಕೆಯ ಸಿಮ್ ಕಾಡ್ರ್ ನ್ನು ನಾಶಗೊಳಿಸಿ ಮೊಬೈಲ್ ಫೋನ್‍ನ್ನು ಮಾರಾಟ ಮಾಡಿದ್ದ ಎನ್ನುವುದು ಸಿಸಿಬಿ ಪೊಲೀಸರ ವಿಚಾರಣೆಯಿಂದ ಬಯಲಾಗಿದೆ. ಗೋಕುಲ್‍ನನ್ನು 14 ದಿನಗಳ ಕಾಲ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳ ಹೇಳಿಕೆ ಪ್ರಕಾರ, ಜುಲೈ ತಿಂಗಳಲ್ಲಿ ಪತ್ನಿ ಅನುರಾಧಳನ್ನು ಕೊಲೆ ಮಾಡಿದ ನಂತರ ಸಾಕ್ಷ್ಯನಾಶಕ್ಕಾಗಿ ಆಕೆಯ ಮೊಬೈಲ್ ಫೋನ್ ನಾಶಗೊಳಿಸಿದ್ದ. ಅಲ್ಲದೇ, ಆಕೆಯ ಸಿಮ್ ನಿಂದಲೇ ಆಕೆಯ ಸ್ನೇಹಿತ ವರ್ಗ ಅಥವಾ ಹಳೇ ಬಾಯ್ ಫ್ರೆಂಡ್ ಗಳಿಗೆ ಮದುವೆ ಮಾಡಿಕೊಳ್ಳುವಂತೆ ಪ್ರಸ್ತಾವನೆ ಕಳುಹಿಸಿದ್ದ. ಈ ಮೂಲಕ ಆಕೆಯೇ ಗೋಕುಲ್‍ನನ್ನು ತೊರೆದು ಬೇರೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು ಎನ್ನುವಂತೆ ಬಿಂಬಿಸಲು ಯತ್ನಿಸಿದ್ದ.

ಒಮ್ಮೆ ಮೊಬೈಲ್ ಫೋನ್ ಮಾರಾಟ ಮಾಡಿದೆ  ಎಂದರೆ ಮತ್ತೊಮ್ಮೆ ಎಲ್ಲೋ ಬಿಸಾಡಿದ್ದೆ ಎಂದು ಹೇಳಿಕೆ ನೀಡುತ್ತಿದ್ದಾನೆ. ಬಹುಶಃ ಮೊಬೈಲ್ ಫೋನ್ ನಲ್ಲಿ ಪ್ರಮುಖ ಮಾಹಿತಿ ಇದ್ದಿರಬಹುದು. ಅನುರಾಧ ಮೊಬೈಲ್ ಫೋನ್ ನಿಂದ ಹಲವಾರು ಟೆಕ್ಸ್ ಮೆಸೇಜ್ ಗಳು ಹೊರ ಹೋಗಿವೆ ಹಾಗೂ ಬಂದಿವೆ. ಈ ನಂಬರ್ ಗಳು ದೆಹಲಿ, ಸುತ್ತಮುತ್ತಲು ನೆಲೆಸಿರುವ ವ್ಯಕ್ತಿಗಳಾದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಮದ್ಯದ ಅಮಲಿನಲ್ಲಿ ಕರೆ ಮಾಡಿದೆ!

ಆರೋಪಿ ಗೋಕುಲ್ ತಾನು ಮದ್ಯದ ಅಮಲಿನಲ್ಲಿ ಏರ್‍ಪೋರ್ಟ್ ಗಳಿಗೆ ಕರೆ ಮಾಡಿ ಸಂದೇಶಗಳನ್ನು ಕಳುಹಿಸಿದ್ದೇನೆ ಎಂದು ಹೇಳಿಕೆ ನೀಡುತ್ತಿದ್ದಾನೆ. ಅಮಲಿನಲ್ಲಿದ್ದ ಕಾರಣ ಏನು ಮಾಡಿದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಆದರೂ, ತಪ್ಪು ಮಾಡಿಬಿಟ್ಟೆ ಎಂದು ಒಪ್ಪಿಕೊಳ್ಳುತ್ತಿದ್ದಾನೆಂದು ಮೂಲಗಳು ಹೇಳಿವೆ.

ತನಿಖಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಗಂಭೀರ ಅಪರಾಧ ಪ್ರಕರಣದ ಬಗ್ಗೆ ಅನುಕಂಪ ಗಿಟ್ಟಿಸುವ ಮೂಲಕ ಅವರನ್ನೇ ದಾರಿ ತಪ್ಪಿಸುವ ಯತ್ನ ನಡೆಸುತ್ತಿದ್ದಾನೆ ಎನ್ನಲಾಗಿದೆ. ಎಂಜಿನಿಯರ್ ಆಗಿರುವ ಗೋಕುಲ್, ಭಾರಿ ಬುದಿಟಛಿಮತ್ತೆ ಬಳಸಿ ಪತ್ನಿ ಕೊಲೆ ಮಾಡಿ ನಂತರ ಗೆಳತಿಯನ್ನು ಒಲಿಸಿಕೊಳ್ಳಲು ಯತ್ನಿಸಿದ್ದ. ಪ್ರತಿಯೊಂದು ಹೆಜ್ಜೆಗಳನ್ನು ಬಹಳ ಎಚ್ಚರಿಕೆಯಿಂದ ಇಟ್ಟಿದ್ದ. ಆದರೆ, ಗೆಳತಿಯ ಪತಿ ಜಿತು ಜೋಸ್‍ನನ್ನು ಖೆಡ್ಡಾಕ್ಕೆ ಕೆಡವುವ ಸಂದರ್ಭದಲ್ಲಿ ತಾನೇ ಸಿಕ್ಕಿ ಬೀಳುತ್ತೇನೆ ಎನ್ನುವ ಯಾವುದೇ ಅಂಜಿಕೆಯನ್ನು ಆತ ಹೊಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಐಎಸ್‍ಐಎಸ್ ಟ್ವೀಟ್ ಅಕೌಂಟ್

ಸ್ನೇಹಿತ ಜಿತು ಜೋಸ್ ಹೆಸರಿನಲ್ಲಿ ದಾಖಲೆಗಳನ್ನು ನೀಡಿ ಸಿಮ್ ಕಾರ್ಡ್ ಖರೀದಿಸಿದ್ದ ಆರೋಪಿ ಗೋಕುಲ್, ಅದೇ ಮೊಬೈಲ್ ಫೋನ್ ಸಂಖ್ಯೆ ಆಧಾರದ ಮೇಲೆ `ಸಪೋರ್ಟ್ ಐಎಸ್ ಐಎಸ್' ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದಿದ್ದ. ಅಲ್ಲದೇ ಉಗ್ರ ಸಂಘಟನೆಗೆ ಬೆಂಬಲಿಸಿ ಬಂಧಿತನಾಗಿ ಸದ್ಯ ಜೈಲಿನಲ್ಲಿರುವ ಟೆಕ್ಕಿ ಮೆಹ್ದಿ ಮಸ್ರೂರ್ ಬಿಸ್ವಾಸ್‍ನ ಕೆಲ ಟ್ವಿಟ್‍ಗಳನ್ನು ಬಳಸಿಕೊಂಡಿದ್ದ. ಆದರೆ, ಅಕೌಂಟ್ ತೆರೆದ ಕೆಲವೇ ದಿನಗಳಲ್ಲಿ ಅದನ್ನು ಡಿ ಆ್ಯಕ್ಟಿವೇಟ್ ಮಾಡಿದ್ದ. ಈ ಅಕೌಂಟ್ ಮೂಲಕ ಪ್ರಚೋದನಕಾರಿ ಮಾಹಿತಿಗಳನ್ನು ಹರಿಯಬಿಟ್ಟಿದ್ದನಾ
ಎಂಬುದು ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com