ಮೇಯರ್ ಆಯ್ಕೆ ಚುನಾವಣೆಗಿಂತ ಕ್ಲಿಷ್ಟಕರ

ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆಯಾದರೆ ಎಲ್ಲಾ ಪ್ರಕ್ರಿಯೆ ಒಂದೇ ದಿನ ಮುಕ್ತಾಯವಾಗಲಿದೆ. ಹಾಗೊಂದು ವೇಳೆ ಸ್ಥಾಯಿ ಸಮಿತಿಗೆ ಬೇಕಿರುವ 11 ಸದಸ್ಯರಿಗಿಂತ ಹೆಚ್ಚಿನ ಮಂದಿ ಸ್ಪರ್ಧಿಸಿದರೆ ಗೌಪ್ಯ ಮತದಾನ ಅನಿವಾರ್ಯ...
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆಯಾದರೆ ಎಲ್ಲಾ ಪ್ರಕ್ರಿಯೆ ಒಂದೇ ದಿನ ಮುಕ್ತಾಯವಾಗಲಿದೆ. ಹಾಗೊಂದು ವೇಳೆ ಸ್ಥಾಯಿ ಸಮಿತಿಗೆ ಬೇಕಿರುವ 11 ಸದಸ್ಯರಿಗಿಂತ ಹೆಚ್ಚಿನ ಮಂದಿ ಸ್ಪರ್ಧಿಸಿದರೆ ಗೌಪ್ಯ ಮತದಾನ ಅನಿವಾರ್ಯ. ಆಗ ಸಮಿತಿಗಳ ಆಯ್ಕೆ ಪ್ರಕ್ರಿಯೆ ಐದಾರು ದಿನಗಳವರೆಗೂ ನಡೆಯುವ ಸಾಧ್ಯತೆ ಇದೆ.

ಈತನಕ ಪಾಲಿಕೆ ಇತಿಹಾಸದಲ್ಲಿ ಸ್ಥಾಯಿ ಸಮಿತಿಗಳಿಗೆ ಗೌಪ್ಯ ಮತದಾನದ ಚುನಾವಣೆ ನಡೆದಿರುವ ದಾಖಲೆ ಇಲ್ಲ. ಆದರೆ, ಈ ಬಾರಿ ತಲೆದೋರಿರುವ ಸಮಸ್ಯೆ ನೋಡಿದರೆ ಗೌಪ್ಯ ಮತದಾನ ನಡೆದರೂ ಅಚ್ಚರಿ ಇಲ್ಲ. ಪ್ರತಿ ಸಮಿತಿಗೆ 11 ಸದಸ್ಯರನ್ನು ಆಯ್ಕೆ ಮಾಡಬೇಕಿದ್ದು, ಇದರ ಮತದಾನಕ್ಕೆ ಕನಿಷ್ಠ 2 ತಾಸು ಬೇಕಾಗುತ್ತದೆ. ಆನಂತರ ಮತ ಎಣಿಕೆಗೆ 3ರಿಂದ 4 ತಾಸು ಬೇಕಾಗುತ್ತದೆ. ಹೀಗೆ ದಿನಕ್ಕೆ ಎರಡು ಅಥವಾ ಮೂರು ಸಮಿತಿಗಳ ಚುನಾವಣೆಯಂತೆ 6 ದಿನಗಳವರೆಗೂ ಚುನಾವಣೆ ನಡೆಸುವ ಸಂಭವ ಬಂದರೂ ಅಚ್ಚರಿಯಿಲ್ಲ.

ಅಡ್ಡ ಮತದಾನ ನಡೆದರೆ ಏನಾಗುತ್ತೆ ?:

ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್ ನೀಡಿವೆ. ಹೀಗಾಗಿ ಸದಸ್ಯರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿಯೇ ಮತದಾನ ಮಾಡಬೇಕು. ಅದರಲ್ಲೂ ಮೇಯರ್ ಚುನಾವಣೆಯಲ್ಲಿ ಕೈ ಎತ್ತುವ ಮೂಲಕ ಮತದಾನ ಮಾಡುವುದರಿಂದ ಅಡ್ಡ ಮತದಾನ ಕಷ್ಟ ಸಾಧ್ಯ. ಹಾಗೊಂದು ವೇಳೆ ಸದಸ್ಯರು ಅಡ್ಡ ಮತದಾನ ಮಾಡಿದರೆ ಅಂಥವರು ಪಕ್ಷದ ಶಿಸ್ತು ಕ್ರಮಕ್ಕೆ, ಅಂದರೆ ಪಕ್ಷದಿಂದ ಉಚ್ಚಾಟಿತರಾಗುತ್ತಾರೆ.

ಆನಂತರ ಪಕ್ಷದಿಂದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಸಲ್ಲಿಕೆಯಾಗಿ, ಅಂತಿಮವಾಗಿ ಸದಸ್ಯರ ಸದಸ್ಯತ್ವೇರದ್ದಾಗುತ್ತದೆ. ಆದರೆ, ಸ್ಥಾಯಿ ಸಮಿತಿ ಚುನಾವಣೆಗೆ ಗೌಪ್ಯ ಮತದಾನ ನಡೆಯುವುದರಿಂದ ಇಲ್ಲಿ ಅಡ್ಡ ಮತದಾನಕ್ಕೆ ಅವಕಾಶವಿದೆ. ಮತದಾನ ಗೌಪ್ಯವಾಗಿ ನಡೆಯುವುದರಿಂದ ಯಾರು ಅಡ್ಡ ಮತದಾನ ಮಾಡಿದ್ದಾರೆ ಎನ್ನುವುದು ತಿಳಿಯುವುದಿಲ್ಲ. ಹಾಗೊಂದು ವೇಳೆ ಸದಸ್ಯರು ಅಡ್ಡ ಮತದಾನ ಮಾಡಿರುವುದು ತಿಳಿದು ಪಕ್ಷ ಕ್ರಮಕೈಗೊಂಡರೂ ಸದಸ್ಯತ್ವ ರದ್ದಾಗಬಹುದು ಎಂದು ಪ್ರಾದೇಶಿಕ ಆಯುಕ್ತರ ಕಚೇರಿ ಮೂಲಗಳು ತಿಳಿಸಿವೆ.

ಚುನಾವಣೆ ಹೇಗೆ ನಡೆಯುತ್ತೆ?:

ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೂ ಶುಕ್ರವಾರವೇ ಚುನಾವಣೆ ನಡೆಯಲಿದ್ದು, ಪ್ರಾದೇಶಿಕ ಆಯುಕ್ತರು ಒಂದೇ ಸಭೆಯಲ್ಲಿ ಇಡೀ ಚುನಾವಣಾ ಪ್ರಕ್ರಿಯೆ ಮುಗಿಸಲು ಮುಂದಾಗಿದ್ದಾರೆ. ಇದರಲ್ಲಿ 12 ಸ್ಥಾಯಿ ಸಮಿತಿಗಳಿಗೆ ಒಟ್ಟು 132 ಸದಸ್ಯರನ್ನು ಆಯ್ಕೆ ಮಾಡಬೇಕಿದ್ದು, ಆಯ್ಕೆಯಾಗ ಬೇಕಾದ ಪ್ರತಿಯೊಬ್ಬ ಸದಸ್ಯರು ಗೆಲುವಿಗೆ (260 ಸದಸ್ಯರು/12 ಸಮಿತಿಗಳು-23 ಮತಗಳು ಅಗತ್ಯ) 23 ಮತಗಳನ್ನು ಗಳಿಸಬೇಕಾಗುತ್ತದೆ.

ಹೀಗಾಗಿ ಯಾವುದಾದರೂ ಪಕ್ಷ ಸಮಿತಿ ಅಧ್ಯಕ್ಷ ಸ್ಥಾನ ಹಿಡಿಯಬೇಕಾದರೆ ಕನಿಷ್ಠ 6 ಸದಸ್ಯರನ್ನು ಗೆಲ್ಲಿಸಿಕೊಳ್ಳಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಸದಸ್ಯ ಬಲದಲ್ಲಿ ಒಂದೊಂದೇ ಮತಗಳನ್ನು ಚಲಾಯಿಸಿ 5 ಸದಸ್ಯರನ್ನು ಸುಲಭವಾಗಿ ಆಯ್ಕೆ ಮಾಡಿ ಕೊಳ್ಳಬಹುದು. ಆದರೆ, ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬೇಕಾದ 6ನೇ ಸದಸ್ಯನ ಆಯ್ಕೆಅನಿವಾರ್ಯ. ಆಗ ಮತದಾರರು 6ನೇ ಸದಸ್ಯನ ಆಯ್ಕೆ ವೇಳೆ ಎರಡು ಮತಗಳನ್ನು ಚಲಾಯಿಸಿ ಅಂದರೆ ಎರಡನೇ ಪಾಶಸ್ತ್ಯ ಮತಗಳನ್ನು ಚಲಾಯಿಸಬೇಕಾಗುತ್ತದೆ. ಆಗ 6ನೇ ಸದಸ್ಯ ಸುಲಭವಾಗಿ ಗೆಲವು ಸಾಧಿಸುತ್ತಾನೆ.

ಮತದಾನ ನಡೆದರೆ...

  • ಗಲಾಟೆ ನಡೆಯಬಹುದು
  • 750 ಪೊಲೀಸ್ ಸಿಬ್ಬಂದಿ ಸೇವೆ ಮುಂದುವರಿಸಬೇಕಾಗುತ್ತದೆ
  • ಊಟ ಮತ್ತು ನಿರ್ವಹಣೆಗೆ ದಿನಕ್ಕೆ ರು.4ಲಕ್ಷದಂತೆ 6 ದಿನ ವೆಚ್ಚ
  • 260 ಮತದಾರರನ್ನೂ 6 ದಿನ ಹಾಜರಿಪಡಿಸುವುದು ಕಷ್ಟ ಸಾಧ್ಯ
  • ಪಾಲಿಕೆ ದೈನಂದಿನ ಚಟುವಟಿಕೆ ಸ್ಥಗಿತ
ಅಧಿಕಾರ ಹಂಚಿಕೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com