
ಬೆಂಗಳೂರು: ಇದೇ ಸೆಪ್ಟೆಂಬರ್ 20ರಂದು ಎಚ್‍ಎಸ್‍ಆರ್ ಲೇಔಟ್‍ನ ಎಲ್ಲಾ ರಸ್ತೆಗಳು `ಓಪನ್ ಸ್ಟ್ರೀಟ್' ಆಗಲಿವೆ! ಅಂದು ಸರ್ಕಾರಿ ವಾಹನ ಹೊರತುಪಡಿಸಿ ಬೇರೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ.
ಅಂದು ನೀವು ಸಂಚರಿಸಬೇಕಾದರೆ ಬಿಎಂಟಿಸಿ ಬಸ್ ಮಾತ್ರ ಬಳಸಬೇಕು. ಆಟೋ, ಕ್ಯಾಬ್ ಸೇರಿದಂತೆ ಯಾವುದೇ ಸ್ವಂತ, ಖಾಸಗಿ ವಾಹನ ಬಳಕೆ ನಿಷಿದ್ಧ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ವಾಯುಮಾಲಿನ್ಯ ನಿಯಂತ್ರಿಸಲು ಈ `ಓಪನ್ ಸ್ಟ್ರೀಟ್' ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಬ್ಬನ್ ಪಾರ್ಕ್‍ನಲ್ಲಿ ಪ್ರತಿ ಭಾನುವಾರ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಅದೇ ರೀತಿ ಎಚ್‍ಎಸ್‍ಆರ್ ಲೇಔಟ್ ನಲ್ಲಿ ಸೆ.20ರಂದು ವಾಹನ ಸಂಚಾರ ನಿಷೇಧಿಸಲಾಗಿದೆ. ಬಿಎಂಟಿಸಿ ಬಸ್‍ಗಳ ಸಂಚಾರ ಇರುತ್ತದೆ ಎಂದು ಸಚಿವರು ತಿಳಿಸಿದರು.
ಪ್ರಾಯೋಗಿಕ ಪರೀಕ್ಷೆ: ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಖಾಸಗಿ ವಾಹನಗಳ ನಿಷೇಧ ಜಾರಿಯಲ್ಲಿರುತ್ತದೆ. ಆದರೆ, ಕಸದ ವಾಹನ, ಆಂಬುಲೆನ್ಸ್, ನೀರಿನ ಟ್ಯಾಂಕರ್ ಸೇರಿದಂತೆ ತುರ್ತು ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಇದು ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಕ್ರಮೇಣವಾಗಿ ವಿವಿಧ ಬಡಾವಣೆಗಳಲ್ಲಿ ಜಾರಿಗೆ ತರಲಾಗುವುದು. ಲಂಡನ್, ಕೇಪ್ ಟೌನ್, ಗುಡಗಾಂವ್ ಸೇರಿದಂತೆ ಹಲವು ನಗರಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ.
ಮುಂದಿನ ದಿನಗಳಲ್ಲಿ ಬೆಂಗಳೂರು ನಗರವೂ ಈ ಸಾಲಿಗೆ ಸೇರಲಿದೆ. ನಗರ ಭೂಸಾರಿಗೆ ಇಲಾಖೆ, ಬಿಎಂಟಿಸಿ, ಪೊಲೀಸ್, ಅರಣ್ಯ ಮತ್ತು ಪರಿಸರ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮೆಟ್ರೊ, ಬಿಬಿಎಂಪಿ, ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಹಾಗೂ ಸ್ಥಳೀಯ ಸಂಘಟನೆಗಳೊಂದಿಗೆ ಈ ಯೋಜನೆ ಹಮ್ಮಿ ಕೊಳ್ಳಲಾಗಿದೆ. ಜನರು ಸಹಕರಿಸಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದರು.
ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುಳಾ, ಬಿಎಂಟಿಸಿ ಎಂಡಿ ಏಕ್‍ರೂಪ್ ಕೌರ್, ಅಧ್ಯಕ್ಷ ನಾಬಿರಾಜ್ ಜೈನ್, ಉಪಾಧ್ಯಕ್ಷ ವಿ.ಎಸ್. ಆರಾಧ್ಯ,ನಿರ್ದೇಶಕ ರೇಣುಕೇಶ್ವರ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಟಿಕೆಟ್ ರು.5, ಪಾಸ್ ರು.50: ಸೆ.20ರಂದು ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲದ ಕಾರಣ ಸಾರ್ವಜನಿಕರ ನೆರವಿಗಾಗಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಅಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಟ್ರಾಫಿಕ್ ವಾರ್ಡನ್‍ಗಳು ಕೆಲಸ ನಿರ್ವಹಿಸಲಿದ್ದು, ಜನರಿಗೆ ಅಗತ್ಯ ಮಾಹಿತಿ ನೀಡಲಿದ್ದಾರೆ. ಖಾಸಗಿ ವಾಹನ ಸಂಚಾರವಿಲ್ಲದ ಕಾರಣ, ಪ್ರಯಾಣಿಕರಿಗೆ ಅಗತ್ಯವಿರುವ ಕಡೆ ನಿಲುಗಡೆ ಮಾಡಲು ಸೂಚಿಸಲಾಗಿದೆ.
ಅಂದು ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಎಲ್ಲಿ ಹತ್ತಿ, ಎಲ್ಲಿ ಇಳಿದರೂ ಟಿಕೆಟ್ ದರ ರು.5 ಮಾತ್ರ. ಇನ್ನು ದೈನಿಕ ಬಸ್ ಪಾಸ್‍ಗೆ ರು.50 ನಿಗದಿಪಡಿಸಲಾಗಿದೆ. ಆ ಬಡಾವಣೆ ಬಿಟ್ಟು ಬೇರೆ ಕಡೆ ಸಂಚರಿಸಿದರೂ ಅದೇ ಪಾಸ್ ಅನ್ವಯವಾಗಲಿದೆ. ಖಾಸಗಿ ವಾಹನ ನಿರ್ಬಂಧ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 35 ಬಸ್ (ಆ ಬಡಾವಣೆಗೆ ಸೀಮಿತ) ಹಾಗೂ ಮಾರುಕಟ್ಟೆ, ಮೆಜೆಸ್ಟಿಕ್, ಶಿವಾಜಿನಗರಕ್ಕೆಸಂಪರ್ಕಕಲ್ಪಿಸುವಂತೆ 17 ಬಸ್‍ಗಳನ್ನು ಬಿಡಲಾಗುವುದು.
Advertisement