
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳುವ ಸಂಚಾರ ಪೊಲೀಸರು ಅದಕ್ಕಾಗಿ ಮೊಬೈಲ್ ಫೋನ್ ಅಪ್ಲಿಕೇಷನ್‍ಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಮೂಲಕ ತಾವು ಮತ್ತಷ್ಟು ಸಾರ್ವಜನಿಕ ಸ್ನೇಹಿ ಆಗುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಸಂಚಾರ ನಿಯಮ ಉಲ್ಲಂಘಿಸಿ ಪ್ರಾಣಕ್ಕೆ ಸಂಚಕಾರ ತಂದ ವ್ಯಕ್ತಿಯೊಬ್ಬನ ವಿರುದ್ಧ ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವ ಪ್ರಕರಣವೊಂದು ಆರ್.ಟಿ. ನಗರದಲ್ಲಿ ನಡೆದಿದೆ.
ವ್ಹೀಲಿಂಗ್ ತಂದ ಅಪಘಾತ: ಕಿರಾಣಿ ಅಂಗಡಿ ವ್ಯಾಪಾರಿ ಶಾನವಾಜ್ ಅವರು ಆ.6 ರಂದು ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸದ ಸ್ಥಳದಿಂದ ಮನೆಗೆ ಮರಳುತ್ತಿದ್ದರು. ಬೆಳಗ್ಗೆ 10.015ರ ಸುಮಾರಿಗೆ ಆರ್.ಟಿ ನಗರದ ಟ್ರಾಫಿಕ್ ಸಿಗ್ನಲ್ ದಾಟುತ್ತಿದ್ದ ವೇಳೆ ವ್ಹೀಲಿಂಗ್ ಮಾಡಿಕೊಂಡು ವೇಗವಾಗಿ ಬಂದ ಸುಮಾರು 15 ವರ್ಷದ ಬಾಲಕ, ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದ್ದ. ಪರಿಣಾಮ ಶಾನವಾಜ್‍ಗೆ ಗಾಯವಾಗಿ ಆಸ್ಪತ್ರೆ ಸೇರುವಂತಾಗಿತ್ತು. ಆದರೆ, ವ್ಹೀಲಿಂಗ್ ಮಾಡಿಕೊಂಡು ಡಿಕ್ಕಿ ಮಾಡಿದ್ದ ಬಾಲಕ ಪರಾರಿಯಾಗಿದ್ದ. ಡಿಕ್ಕಿಯಿಂದ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದವು. ಡಿಕ್ಕಿ ಮಾಡಿದ ದ್ವಿಚಕ್ರ ವಾಹನ ಹೊಂಡಾ ಡಿಯೋದ ಮುಂಭಾಗದ ಫೈಬರ್ ತುಣುಕುಗಳು ಸ್ಥಳದಲ್ಲೇ ಬಿದ್ದಿದ್ದವು. ಅದರೊಂದಿಗೆ ವಾಹನದ ನೋಂದಣಿ ಸಂಖ್ಯೆ ಕೂಡಾ ಸಿಕ್ಕಿತ್ತು.
ಈ ಹಿನ್ನೆಲೆಯಲ್ಲಿ ಶಾನವಾಜ್ ಅವರ ಸಂಬಂಧಿ ಅಬ್ದುಲ್ ರಜಾಕ್ ಅವರು ಘಟನಾ ಸ್ಥಳದಲ್ಲಿ ಸಿಕ್ಕಿದ್ದ ವಾಹನದ ನೋಂದಣಿ ಸಂಖ್ಯೆ ತೆಗೆದುಕೊಂಡು ಆರ್.ಟಿ.ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಕೂಡಲೇ ವಾಹನ ಸವಾರನ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಒಂದು ತಿಂಗಳು ಕಳೆದರೂ ದೂರು ದಾಖಲಿಸಿಕೊಂಡಿಲ್ಲ. ಡಿಕ್ಕಿ ಮಾಡಿದ ಬೈಕ್ ಸವಾರನನ್ನು ಕೂಡಾ ಪತ್ತೆ ಮಾಡಿಲ್ಲ ಎಂದು ಶಾನವಾಜ್ ಆರೋಪಿಸಿದ್ದಾರೆ.
ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಶಾನವಾಜ್ ಅವರು ಚಿಕಿತ್ಸೆಗಾಗಿ ತಮ್ಮ ಕೈಯಿಂದ ರು.10 ಸಾವಿರ ಖರ್ಚು ಮಾಡಿದ್ದಾರೆ. ಅಲ್ಲದೇ, ಜಖಂಗೊಂಡಿರುವ ದ್ವಿಚಕ್ರ ವಾಹನ ರಿಪೇರಿಗಾಗಿ ರು.15 ಸಾವಿರ ಖರ್ಚು ಮಾಡಿದ್ದಾರೆ. ಆದರೆ, ಪೊಲೀಸರು ಇವರ ದೂರನ್ನು ಗಂಭೀರವಾಗಿ ಪರಿಗಣಸುತ್ತಿಲ್ಲ. ಪ್ರತಿ ಬಾರಿ ರಜಾಕ್ ಠಾಣೆಗೆ ತೆರಳಿ ಪ್ರಕರಣದ ಪ್ರಗತಿ ಬಗ್ಗೆ ಕೇಳಿದರೆ ತಾವು ಬೇರೊಂದು ಕೆಲಸದಲ್ಲಿ ವ್ಯಸ್ತರಾಗಿದ್ದೇವೆ ಎಂದು ಸಾಗಹಾಕುತ್ತಿದ್ದಾರಂತೆ.
ಟ್ರಾಫಿಕ್ ಸಿಗ್ನಲ್ ನಲ್ಲಿರುವ ಸಿಸಿ ಕ್ಯಾಮರಾಗಳು ರಸ್ತೆ ಬದಿಯಲ್ಲಿ ನಿಂತು ದಂಡ ಹಾಕುವುದರಲ್ಲಿ ಸಂಚಾರ ಪೊಲೀಸರದ್ದು ಎತ್ತಿದ ಕೈ, ಆದರೆ, ಖುದ್ದಾಗಿ ಠಾಣೆಗೆ ತೆರಳಿ ನೀಡಿರುವ ದೂರುಗಳನ್ನು ದಾಖಲಿಸಿಕೊಂಡು ಪತ್ತೆ ಮಾಡುವ ವಿಚಾರಕ್ಕೆ ಬಂದರೆ ಬಹಳ ನಿಧಾನ ಎಂಬುದು ಅಬ್ದುಲ್ ರಜಾಕ್ ಆರೋಪ.
Advertisement