
ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಅಧಿಕಾರಾವಧಿ ಈ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಈ ಸ್ಥಾನವನ್ನು ಅಲಂಕರಿಸುವುದಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ದರ್ಜೆ ಅಧಿಕಾರಿಗಳಿಂದ ತೀವ್ರ ಲಾಬಿ ಆರಂಭಗೊಂಡಿದೆ. ಮುಖ್ಯ ಕಾರ್ಯದರ್ಶಿ ನೇಮಕಾಧಿಕಾರವ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡುವುದಕ್ಕೆ ಕಳೆದ ತಿಂಗಳು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದಾದ ಬಳಿಕ ರಾಜ್ಯದ ಪರಮೋಚ್ಚ ಅಧಿಕಾರಿಯ ಸ್ಥಾನ ಗಳಿಕೆಗಾಗಿ ಹಲವು ಪ್ರಯತ್ನಗಳು ನಡೆದಿದ್ದು, ಸದ್ಯಕ್ಕೆ ಕೇಂದ್ರ ಸೇವೆಯಲ್ಲಿರುವ ಉಪೇಂದ್ರ ತ್ರಿಪಾಠಿ ಅವರ ಹೆಸರು ಮುಂಚೂಣಿಯಲ್ಲಿದೆ. ಕೌಶಿಕ್ ಮುಖರ್ಜಿ ಅವರ ಸೇವೆಯನ್ನು ಮತ್ತೆ 6 ತಿಂಗಳು ವಿಸ್ತರಿಸುವ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ನಿರಾಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಲಾಬಿ ತೀವ್ರಗೊಂಡಿದೆ.
ಕನ್ನಡಪ್ರಭಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ 1978ನೇ ಬ್ಯಾಚ್‍ನ ಅರವಿಂದ್ ಜಾಧವ್ (30-6-2016 ನಿವೃತ್ತಿ), 1980ನೇ ಬ್ಯಾಚ್‍ನ ಡಾ.ಅನೂಪ್ ಕೆ.ಪೂಜಾರಿ (31-1-2016ಕ್ಕೆ ನಿವೃತ್ತಿ), ಉಪೇಂದ್ರ ತ್ರಿಪಾಠಿ (31-10-2016 ನಿವೃತ್ತಿ), 1981ನೇ ಬ್ಯಾಚ್‍ನ ಸುಭಾಷ್ ಟಿ.ಕುಂಠ್ಯಾ (31-11-2017ಕ್ಕೆ ನಿವೃತ್ತಿ), ವಿ.ಉಮೇಶ್ (31-5-2016 ನಿವೃತ್ತಿ) , ಕೆ.ರತ್ನಪ್ರಭಾ (31-3-2018) ಹಾಗೂ 1982ನೇ ಬ್ಯಾಚ್ ನ ಎಸ್.ಕೆ.ಪಟ್ಟನಾಯಕ್ (30-9-2018 ಕ್ಕೆ ನಿವೃತ್ತಿ) ಹೆಸರು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಪರಿಗಣನೆಯಲ್ಲಿದೆ.
ಈ ಪೈಕಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ವಿ.ಉಮೇಶ್, ರತ್ನಪ್ರಭಾ ಹಾಗೂ ಪಟ್ಟನಾಯಕ್ ರಾಜ್ಯ ಸೇವೆಯಲ್ಲಿದ್ದಾರೆ. ಆದರೆ ಉಪೇಂದ್ರ ತ್ರಿಪಾಠಿ ಅವರ ಆಯ್ಕೆ
ಸಾಧ್ಯತೆ ಹೆಚ್ಚಿದೆ. ಈ ಸಂಬಂಧ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಒಂದು ಬಾರಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
Advertisement