
ಹುಬ್ಬಳ್ಳಿ:ಮಹದಾಯಿ ನದಿ ಜೋಡಣೆ ಹಾಗೂ ಕಳಸಾ--ಬಂಡೂರಿ ನಾಲಾ ಜೋಡಣೆಗಾಗಿ ನರಗುಂದದಲ್ಲಿ 66 ದಿನಗಳಿಂದ ಧರಣಿ ನಡೆಸುತ್ತಿರುವ ರೈತಸೇನಾ ಕರ್ನಾಟಕ ಸಂಘಟನೆ, ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಲು ಸೆ. 25ರಿಂದ ಪಾದಯಾತ್ರೆಗೆ ಸಿದ್ಧತೆ ನಡೆಸಿದೆ.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹಾಗೂ ಪ್ರಧಾನ ಕಾರ್ಯದರ್ಶಿ ಶಂಕ್ರಪ್ಪ ಅಂಬಲಿ, ಮಹಾದಾಯಿ ನದಿ ನೀರು ಬಂದು ಕೂಡುವ ಸುಕ್ಷೇತ್ರ ಕೂಡಲ ಸಂಗಮದಿಂದ ಈ ಪಾದಯಾತ್ರೆ ಆರಂಭವಾಗಲಿದ್ದು, ಪ್ರತಿದಿನ 25 ಕಿ.ಮೀ. ಚಲಿಸುತ್ತದೆ. 25 ದಿನಗಳ ನಂತರ ಮಹದಾಯಿ ನದಿ ಉಗಮಸ್ಥಾನಕ್ಕೆ ತಲುಪುತ್ತದೆ ಎಂದರು.
ಪಾಪು ನೇತೃತ್ವ?: ಈ ಮಧ್ಯೆ ಪ್ರಬಲ ನಾಯಕನ ನೇತೃತ್ವವಿಲ್ಲದೆ ಹತ್ತಾರು ಟಿಸಿಲೊಡೆದಿದ್ದ ಮಹದಾಯಿ ಹೋರಾಟ ಇನ್ನೂ ಮುಂದೆ ಹೋರಾಟಗಾರ ನಾಡೋಜ ಪಾಟೀಲ ಪುಟ್ಟಪ್ಪ ನೇತೃತ್ವದಲ್ಲಿ ನಡೆಯವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶನಿವಾರ ಪಾಟೀಲ ಪುಟ್ಟಪ್ಪ ಮನೆಗೆ ಭೇಟಿ ನೀಡಿ, ಚರ್ಚಿಸಿದ್ದಾರೆ. ಜಯಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಾಪು ಹೇಳಿದ್ದೂ ಇದಕ್ಕೆ ಪುಷ್ಟಿ ನೀಡಿದೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ, ಅರಣ್ಯ ಪ್ರದೇಶದ ನೆಪವೊಡ್ಡಿ ಗೋವಾ ಸರ್ಕಾರ ಮಹದಾಯಿ ಯೋಜನೆಗೆ ಅಡ್ಡಿಪಡಿಸುವುದು ಸರಿಯಲ್ಲ. ಮಹದಾಯಿ ನದಿ ಹರಿಯುವ ಗೋವಾ ಪ್ರದೇಶವನ್ನು ಖುದ್ದು ವೀಕ್ಷಿಸಿದ್ದೇನೆ. ಅಲ್ಲಿ ಅರಣ್ಯವೇ ಇಲ್ಲ ಎಂದರು. 26ರಂದು ಕರ್ನಾಟಕ ಬಂದ್: ಮಹದಾಯಿ ನದಿ ಜೋಡಣೆ, ಹೈದರಾಬಾದ್ ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಡಾ. ಎಂ.ಎಂ.ಕಲಬುರ್ಗಿ ಹಂತಕರ ಶೀಘ್ರ ಬಂಧಿಸುವಂತೆ ಆಗ್ರಹಿಸಿ ಸೆ. 26ರಂದು ಅಖಂಡ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ. ಗೋವಾ ರಾಜ್ಯದವರು ಕಳಸಾ-ಬಂಡೂರಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸಿದ್ದನ್ನು ಕೆಡವಲು ಅಕ್ಟೋಬರ್ 15ರಂದು ಗುದ್ದಲಿ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ ಹೇಳಿದ್ದಾರೆ.
ತಜ್ಞರಿಂದ ಸಲಹೆ ಸಿಕ್ಕಿದೆ:ಟಿ.ಬಿ.ಜಯಚಂದ್ರ
ಕಳಸಾ ಬಂಡೂರಿ ವಿಚಾರದಲ್ಲಿ ನ್ಯಾಯಾಧಿಕರಣದಿಂದ ಮಧ್ಯಂತರ ತೀರ್ಪು ಅಪೇಕ್ಷಿಸುವ ವಿಚಾರದಲ್ಲಿ ಕಾನೂನು ತಜ್ಞರು ಸಲಹೆ ನೀಡಿದ್ದು, ಶೀಘ್ರವೇ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ತಜ್ಞರು ವರದಿ ನೀಡಿದ್ದಾರೆ. ನ್ಯಾಯಾಧೀಕರಣದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವ ಕಾರಣ ಸರ್ಕಾರ ಆ ವರದಿಯನ್ನು ಅವಲೋಕಿಸಿ ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ಸಮಾಲೋಚಿಸಿ ನೀರು ಬಳಸಿಕೊಳ್ಳಿ
ಸಮುದ್ರ ಸೇರುತ್ತಿರುವ ಮಹದಾಯಿ ನದಿ ನೀರನ್ನು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಸಮಾಲೋಚನೆ ನಡೆಸಿ ಬಳಕೆ ಮಾಡಿಕೊಳ್ಳುವಂತೆ ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ ಹೆಗ್ಡೆ ಸಲಹೆ ನೀಡಿದರು. ಗ್ರಾಮ ಸ್ವರಾಜ್ಯ ಅಭಿಯಾನ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನೀರಿನ ಬಳಕೆಯಲ್ಲಿ ಮಾನವೀಯತೆ ಮೆರೆಯಬೇಕು. ಮೂರು ರಾಜ್ಯಗಳ ಜನಪ್ರತಿನಿಧಿಗಳು ಸಮಾಲೋಚನೆ ನಡೆಸಿ ಮತ್ತು ನೀರಿನ ಹಂಚಿಕೆ ಕುರಿತ ಸಮಿತಿ ರಚಿಸಿ ಸಮರ್ಪಕ ಬಳಕೆಗೆ ಅನುಸರಿಸಬಹುದಾದ ಕ್ರಮಗಳನ್ನು ತಿಳಿಯಬೇಕಿದೆ ಎಂದು ಸಲಹೆ ನೀಡಿದರು.
Advertisement