ದುಬಾರಿ ಬೆಲೆಗೆ ವೈದ್ಯ ಸೀಟು: ಸರ್ಕಾರ ಉಲ್ಟಾ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ನಡೆಸಿರುವ ಮೆಡಿಕಲ್ ಸೀಟು ಹಂಚಿಕೆ ಪ್ರಕ್ರಿಯೆ ಅಚ್ಚರಿ ಬೆಳವಣಿಗೆಯೊಂದಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ನಡೆಸಿರುವ ಮೆಡಿಕಲ್ ಸೀಟು ಹಂಚಿಕೆ ಪ್ರಕ್ರಿಯೆ ಅಚ್ಚರಿ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಯಿತು. ಪ್ರಮಾದದಿಂದ
ಎಚ್ಚೆತ್ತುಕೊಂಡ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಿತು.

ಆಗಿದ್ದಿಷ್ಟು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸರ್ಕಾರಿ ಕಾಲೇಜುಗಳ ಸೀಟುಗಳು ಮತ್ತು ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟ ಸೀಟು ಹಂಚಿಕೆಯಾಗುತ್ತಿದೆ. ಈ ಸೀಟುಗಳ ಶುಲ್ಕವನ್ನು ಸರ್ಕಾರವೇ ನಿಗದಿ ಮಾಡುತ್ತದೆ. ಈ ಪೈಕಿ ಮೆಡಿಕಲ್ ಸೀಟಿನ ಶುಲ್ಕ ಎಂದಿಗೂ 65 ಸಾವಿರ ರೂ ಮೀರಿಲ್ಲ. ಆದರೆ, ಪ್ರಸ್ತುತ ನಡೆಯುತ್ತಿರುವ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಎರಡು ಡೀಮ್ಡ್ ವಿಶ್ವವಿದ್ಯಾಲಯಗಳ ಸೀಟುಗಳನ್ನು ಸರ್ಕಾರವೇ ಅಂಕೆ ಮೀರಿದ ಶುಲ್ಕಕ್ಕೆ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವ ಆದೇಶವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಹೊರಡಿಸಿತ್ತು.

2015--16ನೇ ಸಾಲಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎರಡನೇ ಸುತ್ತಿನಲ್ಲಿ ಎರಡು ಡೀಮ್ಡ್ ವಿವಿಗಳಿಂದ ಬಂದ ಮೆಡಿಕಲ್ ಸೀಟು ಗಳನ್ನು ಕೌನ್ಸೆಲಿಂಗ್‍ಗೆ ಸೇರಿಸಿಕೊಂಡಿತ್ತು.

ಮಂಗಳೂರಿನ ಏನಪೋಯ ಮತ್ತು ಬೆಳಗಾವಿಯ ಜೆಎನ್‍ಎಂಸಿ ಮೆಡಿಕಲ್ ಕಾಲೇಜಿನ ಮೆಡಿಕಲ್ ಸೀಟು ಕೌನ್ಸೆಲಿಂಗ್‍ಗೆ ಸೇರ್ಪಡೆಯಾಗಿತ್ತು. ಅಚ್ಚರಿಯ ಸಂಗತಿ ಎಂದರೆ ಏನಪೋಯ ಸೀಟಿಗೆ  11 ಲಕ್ಷ ರು.ಮತ್ತು ಜೆಎನ್‍ಎಂಸಿ ಸೀಟಿಗೆ 6 ಲಕ್ಷ ನಿಗದಿ ಮಾಡಿತ್ತು ಸರ್ಕಾರ.

ಈ ಬೆಲೆಗೆ ಸೀಟು ಹಂಚಿಕೆ ಮಾಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಿದ್ದ ಸೂಚನೆ ಕಂಡು ಪ್ರಾಧಿಕಾರವೇ ಒಂದು ಕ್ಷಣ ಅವಕ್ಕಾಗಿತ್ತು. ಏನೋ ಗೊಂದಲವಾಗಿರಬಹುದೆಂದು
ಸರ್ಕಾರದ ಗಮನಕ್ಕೆ ತರಲು ಪ್ರಾಧಿಕಾರ ಪ್ರಯತ್ನಿಸಿದರೂ, ಅಂತಿಮವಾಗಿ ಅದೇ ಶುಲ್ಕವೇ ನಿಗದಿಯಾಗಿದೆ.

ಮೊದಲ ಸುತ್ತಿನ ಸೀಟು ಕೈತಪ್ಪಿದ್ದ ವಿದ್ಯಾರ್ಥಿಗಳು  ಎರಡನೇ ಸುತ್ತಿನಲ್ಲಿ ದುಬಾರಿ ಮೊತ್ತ ನೀಡಿ ಈ ಸೀಟುಗಳನ್ನು ಪಡೆಯುವ ಅನಿವಾರ್ಯತೆಗೆ ಸಿಲುಕಿದ್ದರು. ಮತ್ತೂ ಅಚ್ಚರಿ ಎಂದರೆ 11 ಲಕ್ಷ ರು. ಒಂದು ವರ್ಷದ ಶುಲ್ಕವಾಗಿ ದ್ದು, ನಾಲ್ಕು ಶೈಕ್ಷಣಿಕ ವರ್ಷವೂ ಇದೇ ಶುಲ್ಕ ಪಾವತಿಸಬೇಕಿತ್ತು. ಶುಲ್ಕ ಕಂಡು ಅನೇಕ ವಿದ್ಯಾರ್ಥಿಗಳು, ಪೋಷಕರು ಪ್ರಾಧಿಕಾರಕ್ಕೆ ಕರೆ ಮಾಡಿ  ಆತಂಕ ತೋಡಿಕೊಂಡಿದ್ದರು.

ಇದೇ ವೇಳೆ, ಇಷ್ಟೊಂದು ದುಬಾರಿ ಶುಲ್ಕಕ್ಕೆ ಸರ್ಕಾರ ಸೀಟು ಹಂಚಿದ್ದೇಕೆ ಎಂಬ ಪ್ರಶ್ನೆ ಎದ್ದಿತ್ತು. ಎರಡು ಕಾಲೇಜು ಗಳ ಲಕ್ಷಾಂತರ ಶುಲ್ಕದ ಸೀಟನ್ನು ಸರ್ಕಾರಿ ವ್ಯವಸ್ಥೆಯಲ್ಲಿ ಹಂಚುವ ಆಸಕ್ತಿ ಸರ್ಕಾರಕ್ಕೇನು ಎಂಬ ಅನುಮಾನವೂ ಹುಟ್ಟಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಲಿಲ್ಲ.

ಆದರೆ, ದಿಢೀರ್ ಬೆಳವಣಿಗೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು 11ಲಕ್ಷ ಮತ್ತು 6 ಲಕ್ಷ ರು ಶುಲ್ಕಕ್ಕೆ ಸಂಬಂಧಿಸಿದ ಆದೇಶವನ್ನು ಏಕಾಏಕಿ ಹಿಂತೆಗೆದುಕೊಂಡಿದೆ. ಸೀಟುಗಳನ್ನು
ಮುಂದುವರಿಸಲಾಗಿದೆ. ಪೋಷಕರ ಆತಂಕವೂ ಸ್ವಲ್ಪ ಕಡಿಮೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com