
ಬೆಂಗಳೂರು: ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.31.54 ಮಂದಿ ಇನ್ನೂ ಅನಕ್ಷರಸ್ಥರಾಗಿಯೇ ಉಳಿದಿದ್ದು, ಅವರಲ್ಲಿ ಹೈದರಾಬಾದ್ ಕರ್ನಾಟಕದಲ್ಲೇ ಹೆಚ್ಚು. ರಾಜ್ಯದಲ್ಲಿ ಒಟ್ಟು 1.31 ಕೋಟಿ ಕುಟುಂಬಗಳಿದ್ದು, ಒಟ್ಟು 5.99 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಶೇ.77.38 ಮಂದಿ ಬಳಿ ಮೊಬೈಲ್ ಇದೆ. ಶೇ.32 ದಿನಗೂಲಿಗಳಿದ್ದಾರೆ.
ಹಾಗೆಯೇ ಶೇ.5ರಷ್ಟು ಮಂದಿ ಮಾತ್ರ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಈ ಸಮೀಕ್ಷೆಯಂತೆ ರಾಜ್ಯದಲ್ಲಿ 64.46ರಷ್ಟು ಅಕ್ಷರಸ್ಥರಿದ್ದು, ಶೇ.31.54 ರಷ್ಟು ಅನಕ್ಷರಸ್ಥರಾಗಿದ್ದಾರೆ.
ನಿರೀಕ್ಷೆಯಂತೆ ದಕ್ಷಿಣ ಕನ್ನಡದಲ್ಲಿ ಹೆಚ್ಚು ಅಕ್ಷರಸ್ಥರಿದ್ದು, ಯಾದಗಿರಿಯಲ್ಲಿ ಅತಿ ಹೆಚ್ಚು ಅನಕ್ಷರಸ್ಥರಿದ್ದಾರೆ. ಶೇ.3.61ರಷ್ಟು ಮಂದಿ ಮಾತ್ರ ಪದವಿ ಮತ್ತು ಹೆಚ್ಚಿನ ಶಿಕ್ಷಣ ಹೊಂದಿದ್ದಾರೆ. ಅಚ್ಚರಿಯ ಬದಲಾವಣೆ ಎಂದರೆ, ರಾಜ್ಯದಲ್ಲಿರುವ ಕುಟುಂಬಗಳ ಪೈಕಿ ಶೇ.18ರಲ್ಲಿ ಮಹಿಳೆಯರೇ ಮುಖ್ಯಸ್ಥರು. ಅವರೇ ಕುಟುಂಬದ ಜೀವನಾಧಾರ. ಅಲ್ಲದೆ, ಶೇ.0.62ರಷ್ಟು ಕುಟುಂಬಗಳಲ್ಲಿ ಅಪ್ರಾಪ್ತ ವಯಸ್ಕರೇ ಮುಖ್ಯಸ್ಥರು. ಇದಿಷ್ಟು ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರ ಸಿದ್ಧಪಡಿಸಿರುವ `ಸಾಮಾಜಿಕ ಆರ್ಥಿಕ ಮತ್ತು ಜಾತಿಗಣತಿ 2011ರ ವರದಿಯ ಪ್ರಮುಖ ಸಾರಂಶ. ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರದಿ ಬಿಡುಗಡೆಗೊಳಿಸಿದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಕೆ. ಪಾಟೀಲ್ ವರದಿಯ ವಿವರ ನೀಡಿದರು.
ಗ್ರಾಮೀಣ ಜನ ಕಡಿಮೆ: ಗ್ರಾಮೀಣ ಭಾಗದ ಲಿಂಗಾನುಪಾತ ನೋಡಿದರೆ, 1000 ಪುರುಷರಿಗೆ 956 ಮಂದಿ ಮಹಿಳೆಯರಂತೆ ಇದ್ದಾರೆ. ಅಂದರೆ ಪುರುಷ, ಮಹಿಳೆ ಜನಸಂಖ್ಯೆ ಬಹುತೇಕ ಸಮನಾಗಿದೆ. ಪುರುಷರು ಶೇ.32ರಷ್ಟಿದ್ದರೆ, ಮಹಿಳೆಯರು ಶೇ.31.10 ಇದ್ದಾರೆ. ಆದರೆ, ನಗರದಲ್ಲಿ ಮಾತ್ರ ಮಹಿಳೆಯರಿಂತ ಪುರುಷರೇ ಹೆಚ್ಚಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಪುರುಷರು ಶೇ.18.71 ಇದ್ದರೆ, ಮಹಿಳೆಯರು ಶೇ.17.63 ರಷ್ಟಿದ್ದಾರೆ. ಇನ್ನು ಜಾತಿ ವಿಚಾರಕ್ಕೆ ಬಂದರೆ, ಪರಿಶಿಷ್ಟ ಜಾತಿಯವರು ಶೇ.16.06 ಇದ್ದರೆ, ಪರಿಶಿಷ್ಟ ಪಂಗಡದವರು ಶೇ. 6.45 ಇದ್ದಾರೆ. ಇತರ ಜಾತಿಗಳವರು ಶೇ. 73.50 ಪ್ರಮಾಣದಲ್ಲಿದ್ದಾರೆ. ಇನ್ನುಳಿದಶೇ.3.78ರಷ್ಟು ಜನ ಜಾತಿಯನ್ನು ದಾಖಲಿಸದವರೂ ಇದ್ದಾರೆ. ಇದರಲ್ಲಿ ಕೋಲಾರದಲ್ಲಿ ಹೆಚ್ಚು ಪರಿಶಿಷ್ಟ ಜಾತಿಯವರಿದ್ದರೆ, ದಕ್ಷಿಣ ಕನ್ನಡದಲ್ಲಿ ಅತಿ ಕಡಿಮೆ ಇದ್ದಾರೆ.
ಅಪ್ರಾಪ್ತರೇ ಮುಖ್ಯಸ್ಥರು!: ರಾಜ್ಯದ ಗ್ರಾಮೀಣ ಕುಟುಂಬಗಳ ಪೈಕಿ ಶೇ.26.46 ನೀರಾವರಿ ಭೂಮಿ ಹೊಂದಿವೆ. ಶೇ.47.54 ಒಣ ಬೇಸಾಯ ಆಶ್ರಯಿಸಿವೆ. ಶೇ.7.49 ಮಾತ್ರ ಕೃಷಿ ಉಪಕರಣಗಳನ್ನು ಹೊಂದಿವೆ. ಗ್ರಾಮೀಣ ಕುಟುಂಬಗಳಲ್ಲಿ ಶೇ.18ರಷ್ಟು ಮಾತ್ರ ಮಹಿಳಾ ಮುಖ್ಯಸ್ಥರಿದ್ದಾರೆ. ಅಂದರೆ, ಈ ಕುಟುಂಬಗಳಲ್ಲಿ ಮಹಿಳೆಯೇ ಪ್ರಧಾನವಾಗಿದ್ದಾರೆ. ಶೇ.0.62 ಕುಟುಂಬಗಳಲ್ಲಿ ಅಪ್ರಾಪ್ತ ವಯಸ್ಕರೇ ಮುಖ್ಯಸ್ಥರು. ಗ್ರಾಮಾಂತರದಲ್ಲಿ 50,050 ಕುಟುಂಬಗಳಲ್ಲಿ ಅಪ್ರಾಪ್ತರೇ ಕುಟುಂಬ ಮುಖ್ಯಸ್ಥರು. ಅದೇ ರೀತಿ ನಗರಗಳಲ್ಲಿ 23353 ಅಪ್ರಾಪ್ತರು ಕುಟುಂಬಕ್ಕೆ ಆಶ್ರಯರಾಗಿದ್ದಾರೆ. ಶೇ.77.38 ಮಂದಿ ಮೊಬೈಲ್ ಮತ್ತು ಇತರ ದೂರವಾಣಿ ಗಳನ್ನು ಹೊಂದಿದ್ದಾರೆ. ಶೇ.45ರಷ್ಟು ಜನ ವ್ಯವಸಾಯ ನಂಬಿದ್ದಾರೆ. ಶೇ.32 ದಿನಗೂಲಿಯೇ ಆಧಾರ. ಕೇವಲ ಶೇ.5 ರಷ್ಟು ಮಂದಿ ಮಾತ್ರ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ. 5,68,987 ಮಂದಿ ವಿಕಲಚೇತರಿದ್ದಾರೆ. ಗ್ರಾಮೀಣ ಜನಸಂಖ್ಯೆ ಶೇ.1.49ರಷ್ಟಿದ್ದಾರೆ.
ಯಾವುದು ಈ ಹೊಸ ಸಮೀಕ್ಷೆ ?
ಕೇಂದ್ರದ ಆದೇಶದಂತೆ ರಾಜ್ಯ ಸರ್ಕಾರ 2002ರಲ್ಲೇ ಇಂಥದೊಂದು ಸಮೀಕ್ಷೆ ನಡೆಸಿತ್ತು. ಆನಂತರ 2011ರಲ್ಲೂ ಇದೇ ರೀತಿ ಸಮೀಕ್ಷೆ ನಡೆಸಿತ್ತು. ನಂತರ 2014ಕ್ಕೂ ಒಂದು ಸಮೀಕ್ಷೆ ನಡೆಸುವಂತೆ ಆದೇಶಿಸಲಾಗಿತ್ತು. ಈ ಎಲ್ಲ ಸಮೀಕ್ಷೆಗಳ ಪೈಕಿ ಕೇಂದ್ರ ಸರ್ಕಾರ ಸದ್ಯ 2011ರ ಸಮೀಕ್ಷೆಯ ವಿವರವನ್ನು ಮಾತ್ರ ಅನುಮೋ ದಿಸಿದೆ. ಹೀಗಾಗಿ ಸಮೀಕ್ಷೆಯ ನೋಡಲ್ ಸಂಸ್ಥೆಯಾಗಿದ್ದ ಪಂಚಾಯತ್ ರಾಜ್ ಇಲಾಖೆ ಸಮೀಕ್ಷೆ ವರದಿಯನ್ನು ಸಿದ್ಧಪಡಿಸಿ ಬಿಡುಗಡೆಗೊಳಿಸಿದೆ.
ಅಷ್ಟಕ್ಕೂ ಇಂಥ ಸಮೀಕ್ಷೆಗಳನ್ನು ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಆದೇಶಿತ್ತು. ಆದರೆ, ಮೊದಲಿಗೆ ಅಸ್ಸಾಂ ಇಂಥ ವರದಿಯನ್ನು ಸಿದ್ಧಪಡಿಸಿ ಪ್ರಕಟಿಸಿತು. ಆನಂತರ ವರದಿ ಬಿಡುಗಡೆ ಮಾಡಿದ ಎರಡನೇ ರಾಜ್ಯ ಕರ್ನಾಟಕ. ಈ ವರದಿ ಹೊಸದು ಎನಿಸಿದರೂ ಇದು 2011ರಲ್ಲಿ ರಾಜ್ಯದಲ್ಲಿದ್ದ ಸ್ಥಿತಿಗತಿಯನ್ನು ಬಿಂಬಿಸುತ್ತದೆ. ಅದೇ ಸಮಯದಲ್ಲಿ ದೇಶಾದ್ಯಂತ ಜನಗಣತಿಯೂ ನಡೆದಿದೆ.
ಆದ್ದರಿಂದ 2011ರ ಜನಗಣತಿ ವರದಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿದ್ಧಪಡಿಸಿರುವ ಈ ವರದಿಯೂ ಬಹುತೇಕ ಒಂದೇ ರೀತಿ ಇರುತ್ತದೆ. ಆದರೆ, ಈ ವರದಿಯಲ್ಲಿ ಪ್ರತಿ ಗ್ರಾಮ, ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ಅಂಶಗಳು ಗಮನವಾಗಿರುತ್ತದೆ. ಆದ್ದರಿಂದ ಸರ್ಕಾರದ ಎಲ್ಲ ಇಲಾಖೆಗಳು ಇನ್ನು ಮುಂದೆ ತಮ್ಮ ಯೋಜನೆಗಳ ಅನುಷ್ಠಾನಕ್ಕೆ ಮತ್ತು ಫಲಾನುಭವಿಗಳ ಆಯ್ಕೆಗೆ ಈ ವರದಿಯನ್ನು ಆಧಾರವಾಗಿಟ್ಟುಕೊಳ್ಳಬೇಕಾಗುತ್ತದೆ ಎಂದು ಇಲಾಖೆಯ ಸಲಹೆಗಾರ ಅನ್ವರ್ ಪಾಷಾ ಹೇಳಿದ್ದಾರೆ.
Advertisement