ಆದಾಯ ಏರಿಸಿ, ಸೋರಿಕೆಗೆ ಬ್ರೇಕ್ ಹಾಕಿ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಂದ ಕಟ್ಟುನಿಟ್ಟಾಗಿ ಶುಲ್ಕ ವಸೂಲಿ, ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕ ಸಂಗ್ರಹಣೆಗೆ ಚಿಂತನೆ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
Updated on

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಂದ ಕಟ್ಟುನಿಟ್ಟಾಗಿ ಶುಲ್ಕ ವಸೂಲಿ, ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕ ಸಂಗ್ರಹಣೆಗೆ ಚಿಂತನೆ, ಮನೋರಂಜನೆ ಹಾಗೂ ವೃತ್ತಿ ತೆರಿಗೆ ಸಂಗ್ರಹ ಸೇರಿದಂತೆ ಸಾಧ್ಯವಾದಷ್ಟು ಆದಾಯ ತರಲು ಪ್ರಯತ್ನ
ಸೋಮವಾರ ನಡೆದ ಬಿಬಿಎಂಪಿಯ ಮೊದಲ ಸಾಮಾನ್ಯ ಸಭೆಯಲ್ಲಿ ಮೇಯರ್ ಮಂಜುನಾಥರೆಡ್ಡಿ ಆದಾಯ ಸಂಗ್ರಹಿಸುವ ಹೊಸ ಚಿಂತನೆಗಳ ಬಗ್ಗೆ ಮಾತನಾಡಿದರು.

ಆದಾಯದ ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಡಳಿತಾಧಿಕಾರಿಗಳ ಅವಧಿಯಲ್ಲಿ ಉತ್ತಮ ಆದಾಯ ಬಂದಿದ್ದು, ಮತ್ತಷ್ಟು ಆದಾಯ ತರಲು ಯತ್ನಿಸಬೇಕಿದೆ. ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕವನ್ನು ಮತ್ತೆ ಸಂಗ್ರಹಿಸಬೇಕು. ಮನೋರಂಜನಾ ತೆರಿಗೆ ಹಾಗೂ ವೃತ್ತಿ ತೆರಿಗೆ ಸಂಗ್ರಹಣೆಯ ಅಧಿಕಾರ ಸರ್ಕಾರಕ್ಕಿದ್ದು, ಇದನ್ನು ಬಿಬಿಎಂಪಿಗೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಕೆಲವು ಕಟ್ಟಡಗಳು ಖಾತಾ ಹೊಂದಿಲ್ಲದೆ ಆದಾಯ ನೀಡದಂತಾಗಿವೆ. ಇಂತಹ ಕಟ್ಟಡ ಗುರುತಿಸಿ `ಎ' ಖಾತಾ ಇಲ್ಲದಿದ್ದರೆ `ಬಿ' ಖಾತಾ ನೀಡಿ ತೆರಿಗೆ ಸಂಗ್ರಹಿಸಬೇಕು. ಸರ್ಕಾರಿ ಕಟ್ಟಡಗಳ ಶುಲ್ಕ ವಸೂಲಿ ಮಾಡಲು ಅಧಿಕಾರಿಗಳು ಹಿಂಜರಿಯುತ್ತಾರೆ.

ಮುಖ್ಯವಾಗಿ ಕೇಂದ್ರ ಸರ್ಕಾರಿ ಕಟ್ಟಡಗಳಿಂದ ಶುಲ್ಕ ವಸೂಲಿ ಮಾಡಬೇಕು. ಮಾರುಕಟ್ಟೆಗಳು ಆದಾಯ ಮೂಲವಾಗಿದ್ದು, ಇಲ್ಲಿನ ಆದಾಯ ಸೋರಿಕೆಗೂ ಕಡಿವಾಣ ಹಾಕಬೇಕು ಎಂದರು. ಗುಂಡಿ ಮುಚ್ಚಲು ಘಟಕ: ರಸ್ತೆಗುಂಡಿ ಮುಚ್ಚಲು ಪ್ರತಿ ವಾಡ್ರ್ ಗಳಲ್ಲಿ ಮೂರು ಟಾರ್ ಘಟಕ ಆರಂಭಿಸಬಹುದು. ಇದರಿಂದ ಗುಂಡಿ ಮುಚ್ಚಲು ಯೋಜನೆಗಳಿಗೆ ಕಾಯದೆ ಕೂಡಲೇ ಕ್ರಮ ಕೈಗೊಳ್ಳಬಹುದು. ಲೆಕ್ಕಪತ್ರ ವರದಿ ಹಾಗೂ ಆಡಳಿತ ವರದಿಗಳನ್ನು ಹಲವು ವರ್ಷಗಳಿಂದ ಮಂಡಿಸಿಲ್ಲ. ಈ ಸಾಲಿನಲ್ಲಿ ವರದಿ ಮಂಡಿಸಲು ಕ್ರಮ ಕೈಗೊಳ್ಳಬೇಕಿದೆ. ಕಾನೂನು
ಕೋಶದಲ್ಲಿ ಕೆಲವು ವಕೀಲರು ಪ್ರತಿವಾದಿಯೊಂದಿಗೆ ಶಾಮೀಲಾಗುತ್ತಿದ್ದಾರೆ. ಹೀಗಾಗಿ ಉತ್ತಮ ಅನುಭವ ಇರುವ ಹಿರಿಯರನ್ನೇ ನೇಮಿಸಿಕೊಳ್ಳಬೇಕು ಎಂದರು.
ಫ್ರೀಜ್  ಕಾಮಗಾರಿ: ಹಳೆಯ ಕಾಮಗಾರಿಗಳನ್ನು ಸ್ಥಗಿತ ಫ್ರೀಜ್ ಮಾಡಿರುವುದರ ಬಗ್ಗೆ ಪಾಲಿಕೆ ಸದಸ್ಯರು ಆಯುಕ್ತರನ್ನು ಪ್ರಶ್ನಿಸಿದರು. ಬಿಜೆಪಿಯ ಎನ್. ನಾಗರಾಜು ಮಾತನಾಡಿ, ವಾರ್ಡ್ ನಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನೂ ಫ್ರೀಜ್ ಮಾಡಲಾಗಿದೆ. ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿಯ ಶಾಂತಕುಮಾರಿ ಮಾತನಾಡಿ, ಆಸ್ಪತ್ರೆ, ಶಾಲಾ ಕಟ್ಟಡ, ಸ್ಮಶಾನ ಸೇರಿ ದಂತೆ ಇಲ್ಲಿನ ಸಣ್ಣ ಕಾಮಗಾರಿಗಳನ್ನೂ ಫ್ರೀಜ್ ಮಾಡಲಾಗಿದೆ ಎಂದು ದೂರಿದರು. ಜೆಡಿಎಸ್ ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ವಾರ್ಡ್‍ನಲ್ಲಿ ರೂ. 20 ಲಕ್ಷದ ಕಾಮಗಾರಿ ನಡೆಯುತ್ತಿದ್ದು, ಶಾಸಕರ ಅನುದಾನಲ್ಲಿ ರೂ. 50ಲಕ್ಷ ಮೊತ್ತದ ಕಾಮಗಾರಿ ನಡೆಸಲಾಗಿದೆ. ಆದರೆ, ಶಾಸಕರ ಅನುದಾನದಲ್ಲಿ ನಡೆಸುವ ಕಾಮಗಾರಿಯನ್ನೂ ಫ್ರೀಜ್ ಮಾಡಲಾಗಿದೆ. ಇದನ್ನು ಮತ್ತೆ ಆರಂಭಿಸಬೇಕು ಎಂದರು.

ಕೊನೆಯಲ್ಲಿ ಉತ್ತರ ನೀಡಿದ ಆಯುಕ್ತ ಕುಮಾರ್ ನಾಯಕ್, ಹಿಂದಿನ ಬಜೆಟ್ ಪರಿಷ್ಕರಿಸಿ ರೂ.5,411 ಕೋಟಿ ವಾಸ್ತವ ಬಜೆಟ್ ಮಾಡಲಾಗಿದೆ.ಆದಾಯ ಕೊರತೆಯಿಂದ ಅನುಮೋದನೆ ಪಡೆಯದ ಕಾಮಗಾರಿ ಸ್ಥಗಿತ ಮಾಡಲಾಗಿದೆ. ಸಮಿತಿಗಳ ಸಭೆಯಲ್ಲಿ ಈ ಬಗ್ಗೆ ವಿವರಿಸಲಾಗುವುದು. ಕ್ರಿಯಯೋಜನೆ ಇಲ್ಲದೆ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಎಷ್ಟು ಆದಾಯವಿದೆ ಎಂದು ಸಮಿತಿಯಲ್ಲಿ ಚರ್ಚಿಸಿದ ಬಳಿಕ ಕಾಮಗಾರಿ ನಡೆಸಬಹುದು ಎಂದರು.

ಪೂಜ್ಯ ಮಹಾಪೌರರೇ!
ಸಭೆಯಲ್ಲಿ ಸದಸ್ಯರು ಮೀತನಾಡುವ ಮುನ್ನ `ಪೂಜ್ಯ ಮಹಾಪೌರರೇ' ಎಂದು ಸಂಭೋಧಿಸುತ್ತಾರೆ. ಆದರೆ, ಮೊದಲ ಸಭೆಯಲ್ಲಿ ಮೇಯರ್ ಮಂಜುನಾಥ ರೆಡ್ಡಿ ಅವರೇ ಪೂಜ್ಯ ಮಹಾಪೌರರೇ ಎಂದು ಕರೆದು ಎಲ್ಲರೂ ನಗುವಂತೆ ಮಾಡಿದರು. ನಂತರ, ಸದಸ್ಯನಾಗಿದ್ದರಿಂದ ಅಭ್ಯಾಸದಿಂದ ಇಲ್ಲಿಯೂ ಅದನ್ನೇ ಹೇಳುತ್ತಿದ್ದೇನೆ ಎಂದು ನಗೆಯಾಡಿದರು.

ನಿಂತು ಮಾತನಾಡಿ!
ಸಭೆಯ ನಡುವೆ ರಾಜಕೀಯ ಕಚ್ಚಾಟ ನಡೆದಾಗ ಕೆಲವು ಸದಸ್ಯರು ಕುಳಿತಲ್ಲಿಂದಲೇ ಮಾತನಾಡಿದರು. ಇದರಿಂದ ಸಿಟ್ಟಾದ ಮೇಯರ್, ಸಭೆಯಲ್ಲಿ ನಿಂತುಕೊಂಡೇ ಮಾತನಾಡಬೇಕು ಎಂದು ಸದಸ್ಯರಿಗೆ ಈ ಹಿಂದೆಯೇ ತಿಳಿಸಲಾಗಿದೆ. ಇನ್ನೂ ಕುಳಿತು ಮಾತನಾಡಿದರೆ ಸಭೆಯಿಂದ ಹೊರಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.

ಇ-ಶೌಚಾಲಯ ಮಾಡಿ
ಇ-ಶೌಚಾಲಯ ಕಡೆಗಣನೆಯಾಗಿರುವ ಬಗ್ಗೆ ಮೇಯರ್ ಮಂಜುನಾಥ ರೆಡ್ಡಿ ಹಾಗೂ ಬಿಜೆಪಿಯ ಕಟ್ಟೆ ಸತ್ಯನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು. ಕೊನೆಯಲ್ಲಿ ಉತ್ತರ ನೀಡಿದ ಮುಖ್ಯ ಎಂಜಿನಿಯರ್ ಎಂ.ಆರ್. ವೆಂಕಟೇಶ್, 29 ಇ-ಶೌಚಾಲಯ ಅಳವಡಿಸಿದ್ದು, ಗುತ್ತಿಗೆ ಪಡೆದ ಇರಾಮ್ ಸಂಸ್ಥೆಗೆ ರೂ. 56 ಲಕ್ಷ ಪಾವತಿಸಲಾಗಿದೆ. ಸ್ಥಳಾವಕಾಶ ದೊರೆತರೆ ಮತ್ತಷ್ಟು ಅಳವಡಿಸಲಾಗುವುದು ಎಂದರು.

ಪಿಡಬ್ಲ್ಯುಡಿ ಹಗರಣ

ಲೊಕೋಪಯೋಗಿ ಇಲಾಖೆ ಕಾಮಗಾರಿಯಲ್ಲಿ ಅಕ್ರಮ ನಡೆಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೂ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ದೂರಿದರು. ಇಲಾಖೆಯು ರೂ. 342 ಕೋಟಿ ವೆಚ್ಚದಲ್ಲಿ 114 ಕಾಮಗಾರಿ ನಡೆಸಬೇಕಿತ್ತು. ಇದರಲ್ಲಿ 130 ಕಾಮಗಾರಿಗೆ ರೂ.140 ಕೋಟಿ ಎಂದು ಅಂದಾಜಿಸಲಾಗಿತ್ತು. ನಂತರ ಆಡಳಿತಾಧಿಕಾರಿಗಳು ಪರಿಶೀಲಿಸಿದಾಗ ಪರಿಷ್ಕರಿಸಿ ಮೊತ್ತವನ್ನು ರೂ.70 ಕೋಟಿಗೆ ಇಳಿಸಲಾಯಿತು. ನಂತರ ಮತ್ತೊಮ್ಮೆ ಪರಿಷ್ಕರಿಸಿ ರೂ. 50 ಕೋಟಿಗೆ ಇಳಿಸಲಾಯಿತು. ಅಂದರೆ ರೂ. 90 ಕೋಟಿ ಹೆಚ್ಚುವರಿಯಾಗಿ ಅಧಿಕಾರಿಗಳು ಅಂದಾಜು ಪಟ್ಟಿ ತಯಾರಿಸಿದ್ದಾರೆ. ಅಕ್ರಮ ನಡೆದಿದ್ದು ಮುಂದಿನ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಬೇಕು ಎಂದರು.      

ಆಯುಕ್ತರಿಗೆ ಮೇಯರ್ ಸೂಚನೆ-ಸಲಹೆ
 ಇತ್ತೀಚೆಗೆ ಒಣಗಿದ ಮರ, ಕೊಂಬೆ ಬಿದ್ದು, ಅಮಾಯಕರು ಸಾವನ್ನಪಿದ್ದಾರೆ. ಅಧಿಕಾರಿಗಳು ಒಣಗಿದ ಕೊಂಬೆ, ಮರ ಗುರುತಿಸಿ ಕಡಿಯಬೇಕು. ಈ ಮೂಲಕ ಅಪಾಯ ತಡೆಗಟ್ಟಬೇಕು. ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸುರಿದು, ಸ್ಥಳವನ್ನು ಗಲೀಜು ಮಾಡಿದರೆ ಮಾಲಿಕರಿಗೆ ಕಟ್ಟುನಿಟ್ಟಾಗಿ ದಂಡ ಹಾಕಬೇಕು.  ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸುವ ನಿಟ್ಟಿನಲ್ಲಿ ಬಿಬಿಎಂಪಿ ಪ್ರಯತ್ನಿಸಬೇಕಿದೆ .ಸರ್ಕಾರ ಮತ್ತು ಪಾಲಿಕೆಯ ನಡುವೆ ನಡುವೆ ಕೊಂಡಿಯಂತೆ ಕೆಲಸ ಮಾಡಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಿ.
ಕಡತ ವಿಲೇವಾರಿ ಟೇಬಲ್‍ನಿಂದ ಟೇಬಲ್‍ಗೆ ಹೋಗದೆ ಶೀಘ್ರವಾಗಿ ನಡೆಯಲು ಕ್ರಮ ಕೈಗೊಳ್ಳಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com