ದೇಶಪಾಂಡೆ ರಾಜಿನಾಮೆಗೆ 10 ದಿನ ಎಚ್‍ಡಿಕೆ ಗಡುವು

ಜಕ್ಕೂರು ಮತ್ತು ಅಲ್ಲಾಳಸಂದ್ರ ಅರಣ್ಯ ಜಮೀನು ಒತ್ತುವರಿ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಜೆಡಿಎಸ್ ರಾಜ್ಯ ಸರ್ಕಾರಕ್ಕೆ 10 ದಿನಗಳ ಗಡುವು ನೀಡಿದೆ...
ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ (ಸಂಗ್ರಹ ಚಿತ್ರ)
ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ (ಸಂಗ್ರಹ ಚಿತ್ರ)

ಬೆಂಗಳೂರು: ಜಕ್ಕೂರು ಮತ್ತು ಅಲ್ಲಾಳಸಂದ್ರ ಅರಣ್ಯ ಜಮೀನು ಒತ್ತುವರಿ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಜೆಡಿಎಸ್ ರಾಜ್ಯ ಸರ್ಕಾರಕ್ಕೆ 10 ದಿನಗಳ ಗಡುವು ನೀಡಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ, 117 ಎಕರೆ ಅರಣ್ಯ ಒತ್ತುವರಿ ವಿರುದ್ಧ ಸರ್ಕಾರ ಇನ್ನು 10 ದಿನಗಳಲ್ಲಿ ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕು. ಹಾಗೆಯೇ ಅವರು ಅಕ್ರಮವಾಗಿ ಪಡೆದಿರುವ ಜಮೀನಿನಲ್ಲಿ ನಿರ್ಮಿಸಿರುವ ಮನೆಯನ್ನು ಅವರೇ ನಿಂತು ನೆಲಸಮಗೊಳಿಸಬೇಕು. ಇಲ್ಲದಿದ್ದರೆ, ಜಮೀನು ಪಡೆದಿರುವ ಸಚಿವರು, ಕಂದಾಯ ಸಚಿವರು, ಅರಣ್ಯ ಸಚಿವರು ಮತ್ತು ಈ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಹಾಗೂ ಕ್ರಮಕೈಗೊಳ್ಳದ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ನ ಹಸಿರು ಪೀಠದಲ್ಲಿ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದರು.

117 ಎಕರೆ ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಸದ್ಯ ಸಿಕ್ಕಿರುವ ದಾಖಲೆಗಳ ಪ್ರಕಾರ ಎಲ್ಲವೂ ಸಾಗುವಳಿ ಪತ್ರದ ಆಧಾರದಲ್ಲಿ ಮಾಲಿಕತ್ವ ಪ್ರತಿಪಾದಿಸುತ್ತಿದ್ದಾರೆ. ಆದರೆ ಇಲ್ಲಿ ಅರಣ್ಯ ಭೂಮಿ ಕಂದಾಯ ಇಲಾಖೆಗೆ ಹಸ್ತಾಂತರವಾಗಿ ಅಧಿಸೂಚನೆಯಾಗಿರುವ ದಾಖಲೆಗಳು ಯಾವುದೇ ಇಲ್ಲ. ಅದು ಆಗಿಯೂ ಇಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ಆದೇಶದಂತೆ ಅಧಿಸೂಚನೆ ಇಲ್ಲದೆ ಕಂದಾಯ ಇಲಾಖೆ ಯಾವುದೇ ದಾಖಲೆಗಳನ್ನು ಹೊಂದಿದ್ದರೂ ಅದು ಪರಿಗಣನೆಗೆ ಬರುವುದಿಲ್ಲ. ಆದ್ದರಿಂದ 117 ಎಕರೆ ಒತ್ತುವರಿ ಆಗಿರುವುದು ಸ್ಪಷ್ಟ ಎಂದು
ಕುಮಾರಸ್ವಾಮಿ ಹೇಳಿದರು.

ಸಚಿವ ದೇಶಪಾಂಡೆ ಅವರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಹೇಳಿಲ್ಲ. ಅವರು ಕಾನೂನು ಬಾಹಿರವಾಗಿ ಖರೀದಿಸಿದ್ದಾರೆ. ಹಾಗೆಯೇ ಕಾನೂನು ಬಾಹಿರವಾಗಿ ಅಲ್ಲಿ ಮನೆ ನಿರ್ಮಿಸಿದ್ದಾರೆ ಎಂದು ಹೇಳಿದ್ದೇನೆ. ಅಷ್ಟಕ್ಕೂ ದಾಖಲೆ ಪ್ರಕಾರ ಅವರು 5 ಎಕರೆ ಪ್ರದೇಶದಲ್ಲಿ ಮನೆ ನಿರ್ಮಿಸಿದ್ದಾರೆ ಎಂದು ದಾಖಲಾಗಿದೆ. ಆದರೆ ನನಗೆ ಬಂದಿರುವ ಮಾಹಿತಿ ಪ್ರಕಾರ ಅವರು 11 ಎಕರೆ ಜಮೀನು ಹೊಂದಿದ್ದಾರೆ. ಅವರೀಗ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ದಾಖಲೆಗಳನ್ನು ತಿದ್ದುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಸಾಧ್ಯವಿಲ್ಲ. ಈಗಿನ
ದಾಖಲೆಗಳನ್ನು ತಿದ್ದಿದ ಮಾತ್ರಕ್ಕೆ ಅಕ್ರಮದಿಂದ ಬಜಾವ್ ಆಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ರಾಜಿನಾಮೆ ಸಲ್ಲಿಸುವುದೇ ಸೂಕ್ತ ಎಂದು ಅವರು ಪ್ರತಿಪಾದಿಸಿದರು.

ಬೆಂಗಳೂರಿನಲ್ಲಿ ಆಗಿರುವ ಅರಣ್ಯಭೂಮಿ ಒತ್ತುವರಿ ಮತ್ತು ಕೆರೆ ಒತ್ತುವರಿ ಸೇರಿದಂತೆ ಅನೇಕ ಪರಿಸರ ವಿಚಾರಗಳನ್ನು ಮುಂದಿಟ್ಟುಕೊಂಡು ಸದ್ಯದಲ್ಲೇ ಹೋರಾಟ ರೂಪಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಎಲ್ಲಾ ಹೋರಾಟಗಾರರಿಗೆ ಪತ್ರಗಳನ್ನು ಬರೆಯಲಾಗುತ್ತಿದೆ. ಅಷ್ಟೇ ಅಲ್ಲ. ಈ ಬಗ್ಗೆ ವಿಚಾರ ಸಂಕಿರಣವನ್ನೂ ಏರ್ಪಡಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೆ ಇದನ್ನೆಲ್ಲ ಜನರಿಗೆ ತಿಳಿ ಹೇಳುವ ಪ್ರಯತ್ನವನ್ನೂ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಹೈಕಮಾಂಡ್ ವರದಿ ಕೇಳಿಲ್ಲ
ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರ ಭೂ ಒತ್ತುವರಿ ಕುರಿತು ಪಕ್ಷದ ಹೈಕಮಾಂಡ್ ಯಾವುದೇ ವರದಿ ಕೇಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಭೂ ಒತ್ತುವರಿ ವರದಿ ಕೇಳಿ ಎಐಸಿಸಿಯಿಂದ ಯಾವ ಪತ್ರವೂ ತಮಗೆ ಬಂದಿಲ್ಲ. ದೇಶಪಾಂಡೆ ಅವರು ಪಕ್ಷದ ಹಿರಿಯ ನಾಯಕರು, ಜವಾಬ್ದಾರಿಯುತ ಸಚಿವರು. ತಾವು ಯಾವುದೇ ಒತ್ತುವರಿ ಮಾಡಿಲ್ಲ ಎಂಬ ಮಾಹಿತಿಯನ್ನು ಅವರು ತಮಗೆ ನೀಡಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ದೇಶಪಾಂಡೆ ಅವರು ಅರಣ್ಯಭೂಮಿಯನ್ನು ಒತ್ತುವರಿ ಮಾಡಿರುವುದರ ಬಗ್ಗೆ ದಾಖಲೆಗಳಿದ್ದರೆ ಕಾನೂನು ಚೌಕಟ್ಟಿನಲ್ಲಿ ಏನು ಬೇಕಾದರೂ ಕ್ರಮಕೈಗೊಳ್ಳಲು ಸ್ವಾತಂತ್ರರು. ಒತ್ತುವರಿ ಮಾಡಿಲ್ಲವೆಂದು ದೇಶಪಾಂಡೆ ಹೇಳುತ್ತಿದ್ದಾರೆ, ಒಂದು ವೇಳೆ ಒತ್ತುವರಿ ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ದೇಶಪಾಂಡೆ ಆಗಲಿ, ಪರಮೇಶ್ವರ ಆಗಲಿ ಯಾರೇ ತಪ್ಪು ಮಾಡಿದ್ದರೂ ಅಥವಾ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರೆ ಅದು ತಪ್ಪು ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com