
ಬೆಂಗಳೂರು: ಪಾದಚಾರಿ ಮಾರ್ಗದಲ್ಲಿ ಕಸ, ಚರಂಡಿಗಳ ದುಸ್ಥಿತಿ, ಕಳಪೆ ಕಾಮಗಾರಿ ವಿರುದ್ಧ ಕಠಿಣ ನಿಲುವು ತಳೆದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಬಿಬಿಎಂಪಿ ಪೂರ್ವ ವಲಯದಲ್ಲಿ ಅವ್ಯವಸ್ಥೆ ಪರಿಶೀಲಿಸಿದ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಮಂಜುನಾಥ ರೆಡ್ಡಿ ತಂಡ, ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸುವ ಹಾಗೂ ಅಮಾನತುಗೊಳಿಸಿ ಆದೇಶಿಸಿದರು. ಮೊದಲಿಗೆ ರಸ್ತೆಗುಂಡಿಗಳ ಪರಿಶೀಲನೆ ಎಂದು ಹೇಳಿದ್ದರೂ, ಗುಂಡಿಗಿಂತ ಪಾದಚಾರಿ ಮಾರ್ಗ ಹಾಗೂ ಕಸದ ಪರಿಶೀಲನೆ ನಡೆಯಿತು.
ಮೇಯೋ ಹಾಲ್ ನಿಂದ ಆರಂಭವಾಗಿ ಹಲಸೂರು ಹಾಗೂ ಹಲಸೂರು ಕರೆ ಕಡೆ ತರೆಳುವ ರಸ್ತೆ, ಮರ್ಫಿ ಟೌನ್ ಮಾರುಕಟ್ಟೆ ಹಾಗೂ ಬೈಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದವರೆಗೆ ಅಲ್ಲಲ್ಲಿ ಪರಿಶೀಲನೆ ನಡೆಯಿತು. ಈ ವೇಳೆ ಬಿಬಿಎಂಪಿ ಅಧಿಕಾರಿಗಳಾದ ರಂಗಸ್ವಾಮಿ, ವಿಜಯ್ ಕುಮಾರ್, ಪ್ರಸಾದ್ ಹಾಗೂ ಶ್ರೀನಿವಾಸ್ ಅವರ ಮೇಲೆ ಕ್ರಮ ಕೈಗೊಳ್ಳಲಾಯಿತು.
ಅಮಾನತು, ದಂಡ
ಹಲಸೂರು ರಸ್ತೆಯ ಯಲ್ಲಪ್ಪ ಚೆಟ್ಟಿ ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿ ನಡೆದ ಸಚಿವ ರಾಮಲಿಂಗಾರೆಡ್ಡಿ, ಚರಂಡಿ ದುಸ್ಥಿತಿ, ಓಎಫ್ ಸಿ ಕೇಬಲ್ ಹಾವಳಿ, ಕಟ್ಟಡ ತ್ಯಾಜ್ಯ ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿನ ಪಾದಚಾರಿ ಮಾರ್ಗದಲ್ಲಿ ಕಸ, ಒಣಗಿದ ಗಿಡದ ಕೊಂಬೆಗಳನ್ನು ರಾಶಿ ಹಾಕಲಾಗಿತ್ತು. ಕಸ ಗುತ್ತಿಗೆದಾರರು ವಿಲೇವಾರಿಗೆ ನಿರ್ಲಕ್ಷಿಸಿದ್ದರಿಂದ ರು.50 ಸಾವಿರ ದಂಡ ವಿಧಿಸಲು ಸೂಚಿಸಲಾಯಿತು.
ಮತ್ತೊಂಡು ಕಡೆ ಮುಚ್ಚದ ಚರಂಡಿ, ಇನ್ನೂ ಮುಂದ ಕಾಲಿಗೆ ಸಿಲುಕುತ್ತಿದ್ದ ಓಎಫ್ ಸಿ ಕೇಬಲ್ ಕಂಡಿದೆ. ಸಚಿವರಿಗೆ ವಸ್ತುಸ್ಥಿತಿ ವಿವರಿಸಿದ ಮೇಯರ್ ಮಂಜುನಾಥ ರೆಡ್ಡಿ, `ಅಧಿಕಾರಿಗಳು ಕಚೇರಿ ಬಿಟ್ಟು ರಸ್ತೆಗೆ ಬರುವುದಿಲ್ಲ. ಹೀಗಾಗಿ ಇಂತಹ ಅವ್ಯವಸ್ಥೆ ಉಂಟಾಗಿದೆ' ಎಂದರು.
ಸಚಿವರ ಸೂಚನೆ ಮೇರೆಗೆ ಆಯುಕ್ತ ಕುಮಾರ್ ನಾಯಕ್, ಹಲಸೂರು ವಾರ್ಡ್‍ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಂಗಸ್ವಾಮಿ ಅವರಿಗೆ 10 ದಿನಗಳ ಕಡ್ಡಾಯ ರಜೆ ಶಿಕ್ಷೆ, ಸಹಾಯಕ ಎಂಜಿನಿಯರ್ ಶ್ರೀನಿವಾಸ್ ಹಾಗೂ ವಲಯದ ಮುಖ್ಯ ಎಂಜಿನಿಯರ್ ಪ್ರಸಾದ್‍ರನ್ನು ಅಮಾನತು ಮಾಡಲು ಆದೇಶ ಹೊರಡಿಸಿದರು. ಆದರೆ, ಕಡ್ಡಾಯ ರಜೆಯಲ್ಲಿ ಅಧಿಕಾರಿ ಮನೆಯಲ್ಲಿ ಕೂರುವಂತಿಲ್ಲ, ವಾರ್ಡ್ ಪರಿಶೀಲಿಸಬೇಕು ಎಂದು ಸೂಚಿಲಾಯಿತು.
ಮರ್ಫಿ ಟೌನ್‍ನಲ್ಲಿ ಕಸ: ಮರ್ಫಿ ಟೌನ್ ನ ಮಾರ್ಕೆಟ್‍ಗೆ ಬಂದ ಸಚಿವರ ತಂಡಕ್ಕೆ, ಕಸ ಹಾಗೂ ಕೆಸರಿನ ನೆಲದ ವ್ಯಾಪಾರ ನಡೆಯುತ್ತಿರುವುದು ಕಂಡಿದೆ. ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳಾ ವ್ಯಾಪಾರಿ, `ಜನಪ್ರತಿನಿಧಿಗಳು ಒಂದು ಅಂಗಡಿ ನಿರ್ಮಿಸಿಕೊಟ್ಟು ಸಹಾಯ ಮಾಡಬೇಕು. ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ.
ಹಣ ನೀಡಿ ನೀರು ಕೊಳ್ಳಬೇಕಿದೆ. ಕಾವೇರಿ ನೀರು ಸರಿಯಾಗಿ ದೊರೆಯುತ್ತಿಲ್ಲ' ಎಂದು ದೂರಿದರು. ವ್ಯಾಪಾರ ಮಾಡುವ ಸ್ಥಳದಲ್ಲೇ ಸುಮಾರು 4-5 ಮೀಟರ್ ಸ್ಥಳದಲ್ಲಿ ಕಸ ರಾಶಿ ಹಾಕಲಾಗಿತ್ತು. ಇಲ್ಲಿನ ರಾಜಕಾಲುವೆಯಲ್ಲಿ ತಡೆಗೋಡೆಯ ಬೇಲಿ ಇಲ್ಲದ್ದರಿಂದ ಕಸ ಹಾಕುತ್ತಿದ್ದುದು ಗಮನಕ್ಕೆ ಬಂತು. ಆಯುಕ್ತ ಕುಮಾರ ನಾಯಕ್ ಸೇರಿದಂತೆ ಹಲವು ಅಧಿಕಾರಿಗಳು ಹೊಯ್ಸಳ ನಗರ ವಾರ್ಡ್‍ನ ಸಹಾಯಕ ಎಂಜಿನಿಯರ್ ವಿಜಯïಕುಮಾರ್ ಅವರಿಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ.
ಪರಿಶೀಲನೆಯಲ್ಲಿ ಹಾಜರಾಗದೆ ಕರ್ತವ್ಯಲೋಪ ತೋರಿದ್ದರಿಂದ ಅವರನ್ನು ಅಮಾನತುಗೊಳಿಸಲಾಯಿತು. ಉಪಮೇಯರ್ ಹೇಮಲತ, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಏಳುಮಲೈ, ಆನಂದ, ಚಂದ್ರಪ್ಪ ರೆಡ್ಡಿ,ಸದಸ್ಯರಾದ ಸಂಪತ್ ರಾಜ್, ಗುಣಶೇಖರ್ ಹಾಜರಿದ್ದರು. ನಂತರ ಕೃಷ್ಣಯ್ಯನಪಾಳ್ಯಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.
Advertisement