ನಗರಕ್ಕೆ ಬರಲಿದೆ ಅತೀ ದೊಡ್ಡ ಉಕ್ಕಿನ ಸೇತುವೆ

ಎಲ್ಲ ಅಂದುಕೊಂಡಂತಾದರೆ, ಇನ್ನೆರಡು ವರ್ಷಗಳಲ್ಲಿ ನಗರ ಕೇಂದ್ರ ಭಾಗದಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಪ್ರಯಾಣ 30 ನಿಮಿಷ!.
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಎಲ್ಲ ಅಂದಕೊಂಡಂತಾದರೆ, ಇನ್ನೆರಡು ವರ್ಷಗಳಲ್ಲಿ ನಗರ ಕೇಂದ್ರ ಭಾಗದಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಪ್ರಯಾಣ ಕೇವಲ 30 ನಿಮಿಷ!

ಹೌದು. ರಾಜಧಾನಿ ಬೆಂಗಳೂರಿನಲ್ಲಿ ದೇಶದಲ್ಲೇ ದೊಡ್ಡದೆನಿಸುವ ಸ್ಟೀಲ್ ಸೇತುವೆ ನಿರ್ಮಾಣವಾಗಲಿದ್ದು, ಇದಕ್ಕಾಗಿ ಬಿಡಿಎ ಮಂಗಳವಾರ ಗ್ಲೋಬಲ್ ಟೆಂಡರ್ ಆಹ್ವಾನಿಸಿದೆ. ಈ ಪ್ರಕ್ರಿಯೆ 6 ತಿಂಗಳ ಅವಧಿಯಲ್ಲಿ ಮುಗಿ-ಯಲಿದ್ದು, ಆನಂತರ 24 ತಿಂಗಳ ಒಳಗಾಗಿ ಸ್ಟೀಲ್ ಸೇತುವೆ ನಿರ್ಮಾಣವಾಗಲಿದೆ. ಆಗ ಚಾಲುಕ್ಯ ವೃತ್ತದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕೇವಲ 30 ನಿಮಿಷಗಳಲ್ಲಿ ಸೇರಬಹುದು. ನೆರೆ ರಾಜ್ಯದವರು ಮತ್ತು ವಿದೇಶಿಯರು ಬೆಂಗಳೂರಿನ ಟ್ರಾಪಿsಕ್ ನೋಡಿ ಗಾಬರಿಯಾಗುತ್ತಾರೆ.

ಅಂದರೆ ದೂರದ ದೇಶಗಳಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಆದರೆ, ನಿಲ್ದಾಣದಿಂದ ಸಿಟಿ ಪ್ರವೇಶಿಸಬೇಕೆಂದರೆ ಅವರು ಆತಂಕಕ್ಕೊಳಗಾಗುತ್ತಾರೆ. ಅದೇ ರೀತಿ ನಗರದಲ್ಲಿರುವವರು ನಿಲ್ದಾಣಕ್ಕೆ ಹೋಗುವಾಗ ಗಂಟೆಗಟ್ಟಲೇ ರಸ್ತೆಯಲ್ಲಿ ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಲು ಬಿಡಿಎ ಸಮಗ್ರ ಯೋಜನೆ ರೂಪಿಸಲು ಮುಂದಾಯಿತು. ಅಂತಿಮವಾಗಿ ಸ್ಟೀಲ್ ಸೇತುವೆ ನಿರ್ಮಾಣಕ್ಕೆ ತೀರ್ಮಾನಿಸಿ, ಸ್ಟೂಪ್ ಕನ್ಸೆ ಲ್ಟೆನ್ಸಿ ಸಂಸ್ಥೆಯಿಂದ ಸೇತುವೆಯ ವಿನ್ಯಾಸದ ಬಗ್ಗೆ ಯೋಜನಾ ವರದಿ ಪಡೆಯಿತು. ಸರ್ಕಾರದಿಂದ ಅನುಮೋದನೆಯೂ ಸಿಕ್ಕಿ, ಟೆಂಟರ್ ಆಹ್ವಾನವನ್ನೂ ಮಾಡಲಾಗಿದೆ.

ಎಲ್ಲೆಲ್ಲಿ ಸಮಸ್ಯೆ ನಿವಾರಣೆ?:
ಹೈಗ್ರೌಂಡ್ ವೃತ್ತದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ವಿಪರೀತ ಟ್ರಾಫಿಕ್ ಜಾಮ್ ನಿಂದ ತತ್ತರಿಸುತ್ತದೆ. ಅದರಲ್ಲೂ ಪೀಕ್ ಅವರ್ ನಲ್ಲಿ ಈ ರಸ್ತೆಯಲ್ಲಿ ಸಾಗುವುದೇ ಸಾಹಸ. ಇದನ್ನು ಪರಿಹರಿಸಲು ಸ್ಟೀಲ್ ಸೇತುವೆ ನೆರವಾಗಲಿದೆ. ಅಂದರೆ ಹೈಗ್ರೌಂಡ್ ಜಂಕ್ಷನ್, ವಿಂಡ್ಸರ್ ಮ್ಯಾನರ್, ಕಾವೇರಿ ಚಿತ್ರಮಂದಿರ, ಮೇಖ್ರಿ ವೃತ್ತ, ಹೆಬ್ಬಾಳ ಮೇಲು ಸೇತುವೆ, ಹೆಬ್ಬಾಳ-ಕೆಂಪಾಪುರ ಎಸ್ಟೀಮï ಮಾಲ್ ಹಾಗೂ ಬಿಎಸ್‍ಎಫ್ ಜಂಕ್ಷನ್ ಮಾರ್ಗದಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ.

ಸ್ಟೀಲ್ ಸೇತುವೆ ಹೇಗಿರುತ್ತೆ?
ಇದು 6.77 ಕಿ.ಮೀ. ಉದ್ದದ ಸ್ಟೀಲ್ ಸೇತುವೆ. ಇದರ ಆಯುಸ್ಸು ಬರೋಬ್ಬರಿ 100 ವರ್ಷಗಳು. ಕೊಲ್ಕೊತಾದ ಹೌರಾದಲ್ಲಿ ಚಿಕ್ಕ ಸ್ಟೀಲ್ ಸೇತುವೆ ಬಿಟ್ಟರೆ ದೇಶದಲ್ಲೇ ಇಂಥ ಪ್ರಯೋಗ ಮತ್ತು ಪ್ರಯತ್ನ ಆಗಿಲ್ಲ. ಚೀನಾ ಮಾದರಿಯಲ್ಲಿ 18 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತದೆ. ಆದ್ದರಿಂದ ಇದಕ್ಕೆ ಭೂ ಸ್ವಾಧೀನ ಸಮಸ್ಯೆ ಎದುರಾಗುವುದಿಲ್ಲ. ಕಾಮಗಾರಿ ನಡೆಯುವಾಗ ಕೊಂಚ ಸಂಚಾರ ಸಮಸ್ಯೆ ಉಂಟಾಗಬಹುದು. ಸುಮಾರು ರು.1,350 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಸೇತುವೆಯಲ್ಲಿ ಸಂಚಾರ ಟೋಲ್‍ರಹಿತವಾಗಿರುತ್ತದೆ. ವಿಮಾನ ನಿಲ್ದಾಣದಿಂದ ನಗರ ಪ್ರಮುಖ ಭಾಗಗಳಿಗೆ ಸರಾಗವಾಗಿ ಬಂದು ಸೇರಲು ಇದಕ್ಕೆ ನಾಲ್ಕು ಕಡೆಯಿಂದ ರ್ಯಾಂಪ್‍ಗಳನ್ನೂ ನಿರ್ಮಿಸಲಾಗುತ್ತದೆ. ಅಂದರೆ ವಿಧಾನಸೌಧ, ರಾಜಭವನ, ರೇಸ್‍ಕೋರ್ಸ್ ರಸ್ತೆ ಹಾಗೂ ಅರಮನೆ ರಸ್ತೆಗಳನ್ನು ಸಂಪರ್ಕಿಸುವಂತೆ ರ್ಯಾಂಪ್ ನಿರ್ಮಾಣವಾಗುತ್ತವೆ. ಹೀಗಾಗಿ ಸಂಚಾರ ಸುಗಮವಾಗಲಿದೆ.

ಗ್ಲೋಬಲ್ ಟೆಂಡರ್ ಏನು?

ಬಿಡಿಎ ಇತಿಹಾಸದಲ್ಲೇ ಮೊದಲ ಬಾರಿಗೆ ರೂಪಿಸುತ್ತಿರುವ ಭಾರಿ ಮೊತ್ತದ ಯೋಜನೆ ಇದಾಗಿದ್ದು, ಇದಕ್ಕಾಗಿ ಗ್ಲೋಬಲ್ ಟೆಂಡರ್ ಆಹ್ವಾನಿಸಲಾಗಿದೆ. ಇಂಥ ಯೋಜನೆಗಳಿಗೆ ಒಂದು ಸಂಸ್ಥೆಗಳು ಬರುವ ಸಾಧ್ಯತೆ ಕಡಿಮೆ. ಆದ್ದರಿಂದ ಪಾಲುದಾರ ಸಂಸ್ಥೆಗಳು ಟೆಂಡರ್‍ನಲ್ಲಿ ಭಾಗಿಯಾಗಬಹುದು. ಸೇತುವೆ ನಿರ್ಮಿಸುವ ಸಂಸ್ಥೆಗಳು ಕಡ್ಡಾಯವಾಗಿ ಫ್ಲೈಓವರ್ ಸೇರಿದಂತೆ ಬೃಹತ್ ಕಾಮಗಾರಿಗಳನ್ನು ನಡೆಸಿರಬೇಕು. ಹಾಗೆಯೇ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕೆನ್ನುವುದೂ ಸೇರಿದಂತೆ ಅನೇಕ ಷರತ್ತುಗಳನ್ನು ವಿಧಿಸಲಾಗಿದೆ. ಈಗ ಆರಂಭವಾಗಿರುವ ಟೆಂಡರ್ ಪ್ರಕ್ರಿಯೆಗೆ ವಿಶ್ವದ ವಿವಿಧ ಭಾಗಗಳಿಂದ ಪ್ರತಿಕ್ರಿಯೆ ಲಭ್ಯವಾಗಲಿದ್ದು, ಕೆಲವು ಕಂಪನಿಗಳು ಯೋಜನೆ ಕುರಿತ ಅನುಮಾನ ಮತ್ತು ಗೊಂದಲಗಳ ಬಗ್ಗೆ ಪ್ರಶ್ನಿಸಲಿವೆ. ಅವುಗಳನ್ನು ನಿವಾರಿಸಿದ ನಂತರ ಟೆಂಡರ್‍ನ ತಾಂತ್ರಿಕ ಅನುಮೋದನೆ ಮುಗಿಯುತ್ತದೆ. ಬಳಿಕ ಆರ್ಥಿಕ ಅನುಮೋದನೆ ಮುಗಿದು, ಆಯ್ಕೆಯಾದ ಸಂಸ್ಥೆಗಳಿಗೆ ಕಾಮಗಾರಿ ಆರಂಭಿಸಲು ಆದೇಶ ನೀಡಲಾಗುತ್ತದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com