ಅಡ್ಡಾದಿಡ್ಡಿ ಚಲಿಸಿದ ಶಾಲೆ ಬಸ್‍ಗೆ ಪಾದಚಾರಿ ಬಲಿ

ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಮಿನಿ ಬಸ್ ಅಡ್ಡಾದಿಡ್ಡಿ ಚಲಿಸಿ, ಪಾದಚಾರಿಯೊಬ್ಬರ ಪ್ರಾಣ ಬಲಿ ಪಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಮಿನಿ ಬಸ್ ಅಡ್ಡಾದಿಡ್ಡಿ ಚಲಿಸಿ, ಪಾದಚಾರಿಯೊಬ್ಬರ ಪ್ರಾಣ ಬಲಿ ಪಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಾಣಸವಾಡಿ ಸಮೀಪದ ಗೆದ್ದಲಹಳ್ಳಿ ಮುಖ್ಯರಸ್ತೆಯಲ್ಲಿ ಮಂಗಳವಾರ ಘಟನೆ ನಡೆದಿದೆ. ಸಮೀಪದ ಜಲಮಂಡಲಿ ಆವರಣದಲ್ಲಿರುವ ಎಸ್‍ಎಂಸಿ ನೀರು ಶುದ್ಧೀಕರಣ ಘಟಕದಲ್ಲಿ ಸೆಕ್ಯುರಿಟಿಗಾರ್ಡ್ ಆಗಿದ್ದ ಪಶ್ಚಿಮ ಬಂಗಾಳ ಮೂಲದ ಶೌಕತ್ ಅಲಿ (40) ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಗಾರ್ಡ್ ನಯಾಜ್ ಅಲಿ ಎಂಬಾತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಹಿನ್ನೆಲೆಯಲ್ಲಿ ರಾಮಮೂರ್ತಿನಗರ ನಾರಾಯಣ ಇಟೆಕ್ನೋ ಶಾಲೆಯ ಬಸ್ ಚಾಲಕ ರಫೀಯಲ್‍ನನ್ನು (19) ಬಾಣಸವಾಡಿ ಸಂಚಾರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಬೆಳಗ್ಗೆ 7.30ರ ಸುಮಾರಿನಲ್ಲಿ ಗೆದ್ದಲಹಳ್ಳಿ ಮುಖ್ಯರಸ್ತೆ ಯಲ್ಲಿ ತೆರಳುತ್ತಿದ್ದ ವಾಹನ, ಎಡತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಫುಟ್‍ಪಾತ್ ಮೇಲೆ
ಅಡ್ಡಾದಿಡ್ಡಿಯಾಗಿ ಸಾಗಿದೆ. ಅದೇ ವೇಳೆ ಚಹಾ ಸೇವಿಸಲು ಸಮೀಪದ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದ ಶೌಕತ್ ಹಾಗೂ ನಯಾಜ್ ಅವರಿಗೆ ಬಸ್ ಡಿಕ್ಕಿ ಹೊಡೆದಿದೆ. ಬಳಿಕ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದ ಬಸ್ ನಿಂತಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತ ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಘಾತಕ್ಕೀಡಾಗಿದ್ದ ಬಸ್‍ನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಕಿರುಚಾಡುತ್ತಿದ್ದ ಮಕ್ಕಳನ್ನು ಸ್ಥಳೀಯರೇ ರಕ್ಷಿಸಿದ್ದಾರೆ. ತಲೆಗೆ ಗಂಭೀರ ಗಾಯವಾಗಿದ್ದ ಶೌಕತ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮಾ್ಹನ್ಸ್ ಆಸ್ಪತ್ರೆಗೆಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶೌಕತ್ ಅಸುನೀಗಿದ್ದಾರೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ತರಚಿದ ಗಾಯಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com