ಶಾಲೆಗಾಗಿ ಸಮಸ್ತ ಜಮೀನು ದಾನ, ಜೋಪಡಿಯಲ್ಲಿ ಜೀವನ!

20 ಲಕ್ಷ ಬೆಲೆ ಬಾಳುವ ಭೂಮಿ ದಾನ...
ಕುಣಿಕೇರಿ ಗ್ರಾಮದ ನಿವಾಸಿ ಹುಚ್ಚಮ್ಮ ಚೌದ್ರಿ
ಕುಣಿಕೇರಿ ಗ್ರಾಮದ ನಿವಾಸಿ ಹುಚ್ಚಮ್ಮ ಚೌದ್ರಿ

ಕೊಪ್ಪಳ: ತನ್ನ ಬಳಿ ಇದ್ದ ಭೂಮಿಯನ್ನೆಲ್ಲ ಈಕೆ ತಮ್ಮೂರಿನ ಶಾಲೆಗೆ ದಾನ ಮಾಡಿದ್ದಾಳೆ. ಈಗ ಅದೇ ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುತ್ತಾ, ಜೋಪಡಿಯಲ್ಲಿ ಜೀವನ ಮಾಡುತ್ತಿದ್ದಾಳೆ.

ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ನಿವಾಸಿ ಹುಚ್ಚಮ್ಮ ಚೌದ್ರಿ ಈ ಆಧುನಿಕ ದಾನಚಿಂತಾಮಣಿ.

ಲಕ್ಷ ಅಲ್ಲ, ಕೋಟಿ ಗಳಿಸಿದರೂ ಪುಡಿಗಾಸು ದಾನ ಮಾಡುವುದಕ್ಕೆ ನೂರೆಂಟು ಸಾರಿ ಯೋಚನೆ ಮಾಡುವ ಈ ಕಾಲದಲ್ಲಿ ರೂ.20 ಲಕ್ಷ ಬೆಲೆ ಬಾಳುವ ಭೂಮಿಯನ್ನು ದಾನ ಮಾಡಿದ ಹುಚ್ಚಮ್ಮ ಮಾತ್ರ ನಿರಕ್ಷರಕುಕ್ಷಿ.

ತಮ್ಮೂರಿಗೆ ಶಾಲೆ ಮಂಜೂರಾಗಿದೆ, ಅದಕ್ಕೆ ನಿವೇಶನ ಇಲ್ಲ ಎಂದು ಗೊತ್ತಾದ ತಕ್ಷಣ ಹಿಂದೆಮುಂದೆ ಯೋಚಿಸಲಿಲ್ಲ. ಊರ ಜನರನ್ನು ಕರೆದು ತನ್ನ ಒಂದೂವರೆ ಎಕರೆ ಭೂಮಿಯನ್ನು ಉಚಿತವಾಗಿ ನೀಡುವುದಾಗಿ ಹೇಳಿದಾಗ ಗ್ರಾಮದ ಹಿರಿಯರಿಗೆ ಅಚ್ಚರಿ. ಆಕೆ ಈ ವಾಗ್ದಾನ ಮಾಡಿದ್ದು ಮಾತ್ರವಲ್ಲ, ವಿಳಂಬ ಮಾಡದೆ ಎಲ್ಲ ದಾಖಲೆ ಪತ್ರಗಳನ್ನೂ ಹಸ್ತಾಂತರಿಸಿ ಬಿಟ್ಟಳು.

ಈಕೆ ಭೂಮಿ ಕೊಟ್ಟಿದ್ದರಿಂದ ಈಗ ಕುಣಿಕೇರಿ ಗ್ರಾಮದಲ್ಲಿ ಸುಸಜ್ಜಿತ ಶಾಲೆ ನಿರ್ಮಾಣವಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಈ ಶಾಲೆಗೆ ನಿವೇಶನ ನೀಡುವ ಮೊದಲು ತಮ್ಮೂರಿನ ಅಂಗನವಾಡಿಗೂ ಈಕೆಯೇ ಜಾಗ ನೀಡಿದ್ದಳು ಎನ್ನುವುದು ಗಮನಾರ್ಹ ಸಂಗತಿ.

ಜಮೀನೆಲ್ಲ ಕೊಟ್ಟಾಯಿತು. ಇರುವುದೆಲ್ಲಿ? ಜೀವನ ಹೇಗೆ? ಎಂಬ ಬಗ್ಗೆ ಹೆಚ್ಚು ಯೋಚಿಸದ ಹುಚ್ಚಮ್ಮ ಇದೇ ಶಾಲೆಯಲ್ಲಿ ಬಿಸಿಯೂಟ ತಯಾರಿಸುತ್ತಿದ್ದಾಳೆ. ಮಕ್ಕಳಿಲ್ಲದ ಈಕೆ ಶಾಲೆಯ ಎಲ್ಲ ಮಕ್ಕಳನ್ನು ತನ್ನವೆಂದೇ ತಿಳಿದು ಪ್ರೀತಿಯಿಂದ ಉಣಬಡಿಸುತ್ತಾಳೆ. ಉಳಿದ ಅವಧಿಯನ್ನು ತನ್ನ ಪುಟ್ಟ ಜೋಪಡಿಯಲ್ಲಿ ಕಳೆಯುತ್ತಿದ್ದಾಳೆ.

-ಸೋಮರಡ್ಡಿ ಅಳವಂಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com