
ಬಳ್ಳಾರಿ: ಆಟೋ ಮೊಬೈಲ್ ಉದ್ಯಮಿ ಪಿ.ಗಣೇಶ್ ಎಂಬುವರನ್ನು ದುಷ್ಕರ್ಮಿಗಳು ನಿನ್ನೆ ರಾತ್ರಿ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಮಾಡಿದ ತಂಡದ ಓರ್ವ ಸದಸ್ಯ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ನಗರದಲ್ಲಿನ ಲಾರಿ ಟರ್ಮಿನಲ್‌ನಲ್ಲಿ ರೋಹಿತ್ ಆಟೋಮೊಬೈಲ್ ಶಾಪ್ ಇಟ್ಟುಕೊಂಡಿರುವ ಗಣೇಶ್, ಅವರ ಸಹೋದರಿ ವಿಜಯಲಕ್ಷ್ಮಿ ಪತಿ ಶ್ರೀಹರಿ ಕರ್ನೂಲ್‌ನ ಕೃಷ್ಣರಾಯಲು ಎಂಬುವನ ಬಳಿ ೩೦ ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆತ ಸಾವನ್ನಪ್ಪಿದ್ದು, ವಿಜಯಲಕ್ಷ್ಮಿ ಸಹೋದರ ಗಣೇಶ್‌ನಿಗೆ ಹಣ ನೀಡುವಂತೆ ಒತ್ತಡ ಹೇರಲಾಗಿತ್ತು. ನಿನ್ನೆ ರಾತ್ರಿ ಗಣೇಶ್ ಅಂಗಡಿ ಬಂದ್ ಮಾಡಿ ಮನೆಗೆ ಹೋಗುವಾಗ ಆರು ಜನರ ತಂಡ ಅವರನ್ನು ಕಿಡ್ನಾಪ್ ಮಾಡಿತ್ತು.
ತಮಗೆ ಜೀವಭಯವಿದ್ದು ರಕ್ಷಣೆ ನೀಡುವಂತೆ ಕೋರಿ ಮೂರುವರೆ ತಿಂಗಳ ಹಿಂದೆ ಗಾಂಧಿನಗರ ಠಾಣೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಕಿಡ್ನಾಪ್ ಆಗಿದೆ. ಅಪಹರಣಕಾರರನ್ನು ಪತ್ತೆ ಹಚ್ಚಿ ಎಂದು ಎಸ್ಪಿಗೆ ಕಿಡ್ನಾಪ್ ಆದ ಗಣೇಶ್ ಅವರ ಪತ್ನಿ ಕಮಲ ಮನವಿ ಮಾಡಿದ್ದಾರೆ. ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
Advertisement