
ಬೆಂಗಳೂರು: ಹುತಾತ್ಮ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಪತ್ನಿ ತೀವ್ರ ಆನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಹಲವು ದಿನಗಳಿಂದ ಬ್ರೈನ್ ಟ್ಯೂಮರ್ ಖಾಯಿಲೆಯಿಂದ ಬಳಲುತ್ತಿರುವ ಮಲ್ಲಮ್ಮ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ನಿ ಮಲ್ಲಮ್ಮ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಸರಕಾರ ನೆರವು ನೀಡಬೇಕು ಎಂದು ಮಲ್ಲಿಕಾರ್ಜುನ್ ಬಂಡೆ ತಂದೆ ಕರಿಬಸಪ್ಪ ಬಂಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.
ಸೊಸೆ ಮಲ್ಲಮ್ಮ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಬೇಕು ಎಂದು ಮೌರ್ಯ ಸರ್ಕಲ್ ಬಳಿ ಧರಣಿ ನಡೆಸಿದ್ದ ಕರಿಬಸಪ್ಪ ಬಂಡೆ, ಮುಖ್ಯಮಂತ್ರಿಯನ್ನು ಭೇಟಿಯಾಗದೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.
ನಂತರ ಪೊಲೀಸರು ಕರಿಬಸಪ್ಪ ಅವರನ್ನು ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ಕರೆದುಕೊಂಡು ಹೋಗಿ ಮನವಿ ಸಲ್ಲಿಸಲು ನೆರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕರಿಬಸಪ್ಪನವರಿಗೆ ಸರಕಾರದಿಂದ ನೆರವು ನೀಡುವ ಭರವಸೆ ದೊರೆತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
2014 ಜ.14 ರಂದು ಕಲ್ಬುರ್ಗಿಯಲ್ಲಿ ಭೂಗತ ಪಾತಕಿ ಮುನ್ನಾ ನಡುವಿನ ಶೂಟೌಟ್ ವೇಳೆ ಪಿಎಸ್ಐ ಬಂಡೆ ಹುತಾತ್ಮರಾಗಿದ್ದರು.
Advertisement