ನಕಲಿ ಅಂಕಪಟ್ಟಿ ಹಾವಳಿಗೆ ಬೆಂವಿವಿ ಬ್ರೇಕ್

ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ನಕಲಿ ಅಂಕಪಟ್ಟಿ ಹಾವಳಿ ತಡೆಗೆ ಮುಂದಾಗಿರುವ ಬೆಂಗಳೂರು ವಿಶ್ವವಿದ್ಯಾಲಯ ಹೊಸ ರೀತಿಯ ಅಂಕಪಟ್ಟಿ ಮುದ್ರಣಕ್ಕೆ ಮುಂದಾಗಿದೆ...
ಸಂಗ್ರಹ ಚಿತ್ರ)
ಸಂಗ್ರಹ ಚಿತ್ರ)

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ನಕಲಿ ಅಂಕಪಟ್ಟಿ ಹಾವಳಿ ತಡೆಗೆ ಮುಂದಾಗಿರುವ ಬೆಂಗಳೂರು ವಿಶ್ವವಿದ್ಯಾಲಯ ಹೊಸ ರೀತಿಯ ಅಂಕಪಟ್ಟಿ ಮುದ್ರಣಕ್ಕೆ ಮುಂದಾಗಿದೆ.

ವಿಶ್ವವಿದ್ಯಾಲಯದ ಅಂಕಪಟ್ಟಿಗಳಲ್ಲಿ 9 ಸೂಕ್ಷ್ಮ ಅಂಶಗಳನ್ನು ಒಳಗೊಂಡ ನೂತನ ಅಂಕಪಟ್ಟಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮುದ್ರಣ ಮಾಡುತ್ತಿದ್ದು, ನಕಲಿ ಅಂಕಪಟ್ಟಿಗಳು ಈ ಮಾದರಿಯಲ್ಲಿ ಮುದ್ರಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ನಕಲಿ ಅಂಕಪಟ್ಟಿಗಳ ಕುರಿತಂತೆ ಬೆಂವಿವಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ವಿವಿ ನೀಡಿರುವಂತೆ ದೇಶಾದ್ಯಂತ ಸಾವಿರಾರು ನಕಲಿ ಅಂಕಪಟ್ಟಿಗಳು ಕಂಡುಬಂದಿವೆ. ಇದರಿಂದ ವಿವಿಗೆ ಕೆಟ್ಟ ಹೆಸರು ಬರುತ್ತಿದ್ದು, ನಕಲಿ ಅಂಕಪಟ್ಟಿಗೆ ಬ್ರೇಕ್ ಹಾಕಲು ಕ್ರಮ ಕೈಗೊಳ್ಳಲಾಗಿದೆ. ತೆಲುಗು ಭಾಷೆಯಲ್ಲಿ ಮುದ್ರಣಗೊಂಡಿದ್ದ 124 ಬಿ.ಎಡ್ ಅಂಕಪಟ್ಟಿಗಳನ್ನು ಬಿಹಾರದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇಂತಹ ನೂರಾರು ಪ್ರಕರಣಗಳು ಆಗಿಂದಾಗ್ಗೆ ಕಂಡು ಬರುತ್ತಲೇ ಇವೆ. ಸಿಬಿಐ ಅಧಿಕಾರಿಗಳು ಸಾಕಷ್ಟು ಪ್ರಕರಗಳನ್ನು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇಂತಹ ದಂಧೆ ಕೊನೆಗಾಣಿಸಲು ನೂತನ ತಂತ್ರಜ್ಞಾನವಿರುವ ಅಂಕಪಟ್ಟಿಯನ್ನು ಪರಿಚಯಿಸಲಾಗುತ್ತಿದೆ.

ಬೆಂಗಳೂರು ವಿಶ್ವವಿದ್ಯಾಲಯ ಈಗ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗಾಗಿ ಮುದ್ರಿಸುತ್ತಿರುವ ಅಂಕಪಟ್ಟಿಗಳಲ್ಲಿ ಯಾವುದೇ ರೀತಿಯ ಸೆಕ್ಯೂರಿಟಿ ಅಂಶಗಳಿಲ್ಲ. ಆದರೆ ಇನ್ನು ಮುಂದೆ ಮುದ್ರಣಗೊಳ್ಳು ಅಂಕಪಟ್ಟಿಗಳು ನೂತನ 9 ಅಂಶಗಳನ್ನು ಒಳಗೊಂಡಿರುವುದರಿಂದ ನಕಲಿ ಸಾಧ್ಯವಿಲ್ಲ.

ಹೊಸ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಪ್ರತಿ ವರ್ಷ ವಿವಿಯ 10 ಲಕ್ಷಕ್ಕೂ ಹೆಚ್ಚು ಅಂಕಪಟ್ಟಿಗಳನ್ನು ಮುದ್ರಣ ಮಾಡಲಾಗುತ್ತಿದೆ. ಮುದ್ರಣದಲ್ಲಿ ಜಾಗ್ರತೆ ಮತ್ತು ಎಚ್ಚರಿಕೆ ವಹಿಸುತ್ತಿದ್ದು, ಹೆಚ್ಚಿನ ಸುಧಾರಣಾ ಕ್ರಮ ಕೈಗೊಳ್ಳಾಗಿದೆ. ಸಾಮಾನ್ಯ ಅಂಕಪಟ್ಟಿಗೂ ನೂತನ ಅಂಕಪಟ್ಟಿಗೂ ವ್ಯತ್ಯಾಸವಿದೆ. ಇದನ್ನು ಹಣ ಮಾಡುವ ಉದ್ದೇಶದಿಂದ ನಕಲಿ ಅಂಕಪಟ್ಟಿ ತಯಾರಿಸುತ್ತಿರುವವರು ಮಾಡಲು ಸಾಧ್ಯವಿಲ್ಲ. ಇನ್ನು ಮುಂದೆ ಇದಕ್ಕೆ ಕಡಿವಾಣ ಬೀಳಲಿದೆ.

ಸೂಕ್ಷ್ಮ ಅಂಶಗಳೇನು?
ಬೆಂವಿವಿ ಲಾಂಛನ, ವಿತರಿಸಿದ ದಿನಾಂಕ, ಸೀಕ್ರೇಟ್ ಕೋಡ್ ಅಂಶಗಳನ್ನು ಒಳಗೊಂಡ ಮಾಹಿತಿಗಳನ್ನು ಒಗ್ಗೂಡಿಸಲಾಗಿದೆ. ಈ ಅಂಶಗಳನ್ನು ಪತ್ತೆ ಹಚ್ಚಲು ಅಧಿಕಾರಿಗಳಿಂದ ಮಾತ್ರ ಸಾಧ್ಯ. ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಅಂಕಪಟ್ಟಿಯನ್ನು ಇದೇ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ಹೊಸ ಅಂಕಪಟ್ಟಿಗಳ ಮುದ್ರಣಕ್ಕೆ ವೆಚ್ಚ ಸಹ ಹೆಚ್ಚಳವಾಗಿದೆ. ಈಗ ಒಂದು ಅಂಕಪಟ್ಟಿಗೆ ರು.1.93 ಖರ್ಚು ಮಾಡುತ್ತಿದ್ದು, ಅದು ರು.4ಕ್ಕೆ ಹೆಚ್ಚಳವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com