ಬಾಷ್ ವಿರುದ್ಧ ಹೋರಾಟ ಚುರುಕು

ಬಾಷ್ ಆಡಳಿತ ಮಂಡಳಿ ಕಾನೂನು ಬಾಹಿರವಾಗಿ 263 ಹಂಗಾಮಿ ನೌಕರರನ್ನು ವಜಾಗೊಳಿಸಿರುವುದನ್ನು ಖಂಡಿಸಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಾಷ್ ಆಡಳಿತ ಮಂಡಳಿ ಕಾನೂನು ಬಾಹಿರವಾಗಿ 263 ಹಂಗಾಮಿ ನೌಕರರನ್ನು ವಜಾಗೊಳಿಸಿರುವುದನ್ನು ಖಂಡಿಸಿ, ಕಳೆದ 139 ದಿನಗಳಿಂದ ನಡೆಸುತ್ತಿರುವ ಹೋರಾಟ ಮತ್ತಷ್ಟು ಚುರುಕುಗೊಂಡಿದೆ. ಇದಕ್ಕೆ ಕನ್ನಡಪರ ಸಂಘನೆಗಳು ಕೈಜೋಡಿಸಿದ್ದು, ಶನಿವಾರ ಪುರಭವನ ಎದುರು ಜಂಟಿ ಸಮಾವೇಶ ಹಮ್ಮಿಕೊಂಡಿದ್ದವು.
ಸಮಾವೇಶದಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಬಾಷ್ ಕಂಪನಿಯಿಂದ ಕಾರ್ಮಿಕರು ಬೀದಿಗೆ ಬರುವ ಸಂದರ್ಭ ಎದುರಾಗಿದ್ದು, ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.`ಬಾಷ್ ಕಂಪನಿ ಆಡಳಿತ ಮಂಡಳಿಯವರು ನನ್ನ ಜತೆ ಮಾತನಾಡಿದ್ದು, ವಿಜ್ಞಾನ ಮತ್ತು ತ್ರಂತ್ರಜ್ಞಾನವನ್ನು ಅಳವಡಿಸಿಕೊಂಡ ಮೇಲೆ ಕಾರ್ಮಿಕರ ಅವಶ್ಯಕತೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ'. 
ಇಂದು 263 ಕಾರ್ಮಿಕರ ನ್ನು ಹೊರಹಾಕಿದೆ. ಮುಂದೊಂದು ದಿನ ಎಲ್ಲರನ್ನೂ ಹೊರಹಾಕುವುದಿಲ್ಲವೆಂದು ಹೇಗೆ ನಂಬುವುದು? ಕಾರ್ಮಿಕರ ಹಿತದೃಷ್ಟಿಯಿಂದ ಹೋರಾಟ ಮತ್ತಷ್ಟು ತೀವ್ರಗೊಳ್ಳಬೇಕಿದೆ ಎಂದು ಕರೆ ನೀಡಿದರು. ಪ್ರಸ್ತುತ ಸಮಾವೇಶದಲ್ಲಿ ಕಾರ್ಮಿಕ ಸಂಘಟನೆಗಳು ದುರ್ಬಲವಾಗಿವೆ. ಹಾಗಾಗಿ ಕೇವಲ ಒಂದೆರಡು ದಿನಗಳು ಮಾತ್ರ ಹೋರಾಟ ನಡೆಸಿದರೆ ನ್ಯಾಯ ಸಿಗುವುದಿಲ್ಲ. ನಿರಂತವಾಗಿ ಹೋರಾಟ ನಡೆಯುತ್ತಲೇ ಇರಬೇಕು ಎಂದು ಪ್ರತಿಭಟನಾಕಾರರಿಗೆ ಸಲಹೆ ನೀಡಿದರು.
ಗುತ್ತಿಗೆ ನೀತಿ ತೊಲಗಲಿ: ಬಾಷ್ ಸಂಸ್ಥೆಯು ತುಂಬಾ ವರ್ಷಗಳಿಂದ ದೇಶದಲ್ಲಿ ನೆಲೆಯೂರಿದ್ದು, ಇಂತಹ ಘಟನೆಗಳು ಆಗಿಂದಾಗ್ಗೆ ನಡೆಯುತ್ತಲೇ ಇವೆ. ಸರ್ಕಾರಗಳು ಸಹ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿವೆ. ಆ ಕಾರ್ಮಿಕರ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ ಎಂದು ತಿಳಿಸಿದರು. ಸಂಘಟನೆಯ ಅನಂತಸುಬ್ಬರಾವ್ ಮಾತನಾಡಿ, ಕಾರ್ಮಿಕರನ್ನು ಬೇಕಾದಾಗ ಬಳಸಿಕೊಳ್ಳುತ್ತೇವೆಂಬ ಹೇಳಿಕೆ ಆಡಳಿತ ಮಂಡಳಿಯ ದರ್ಪವನ್ನು ತೋರಿಸುತ್ತದೆ. ಬಿಡದಿ ಘಟಕದಲ್ಲಿ ಎರಡು ಸಾವಿರ ಉದ್ಯೋಗ ಸೃಷ್ಟಿಸಿದ್ದೇವೆ ಎನ್ನುವವರು 263 ಕಾರ್ಮಿಕರಿಗೆ ಕೆಲಸ ನೀಡಲಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ನೂತನ ಕಾರ್ಮಿಕ ನೀತಿ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಬಾಷ್ ಕಂಪನಿ ನೀತಿಯನ್ನು ಈಗಾಗಲೇ ಅಳವಡಿಸಿಕೊಂಡಿದ್ದು, ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದೆ. ವಿದೇಶಿ ಕಂಪನಿಗಳು ಕಾನೂನು ಉಲ್ಲಂಘನೆ ಮಾಡಿದರೂ ಸರ್ಕಾರಗಳು ಅವರ ಉಪ್ಪಿನ ಋಣ ತೀರಿಸಲು ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿದರು. ಹೋರಾಟಗಾರ ಸಿದ್ದನಗೌಡ ಪಾಟೀಲ್ ಮಾತನಾಡಿ, ಬಾಷ್ ಕಾನೂನು ಉಲ್ಲಂಘನೆ ಮಾಡಿದ್ದರೂ ರಾಜ್ಯ ಸರ್ಕಾರ ಮೌನಕ್ಕೆ ಶರಣಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು. ಸ್ವಾತಂತ್ರ್ಯ ಪೂರ್ವದಿಂದಲೂ ಎಲ್ಲ ಸರ್ಕಾರಗಳು ಕಂಪನಿ ಆಡಳಿತ ಮಂಡಳಿಗಳ ಪರವಾಗಿಯೇ ಸ ಮಾಡಲಿವೆ. ಕಾರ್ಮಿಕರ ಹಿತಾಸಕ್ತಿ ಕಾಯುವುದಿಲ್ಲ. ನಕ್ಸಲರನ್ನು ಸಂಧಾನಕ್ಕೆ ಕರೆಯುವ ಸರ್ಕಾರಗಳು, ತಹ ಕಾರ್ಮಿಕರ ನೋವನ್ನು ಏಕೆ ಆಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಕ್ಕೆ ಕಾರ್ಮಿಕ ಸಂಘಟನೆಗಳಾದ ಎಐಟಿ ಯುಸಿ, ಎಐಯುಟಿಯುಸಿ, ಎಐಸಿಸಿಟಿಯು, ಸಿಐಟಿಯು, ಎಚ್‍ಎಂಎಸ್, ಐಎನ್‍ಟಿಯುಸಿ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸೇರಿ 42 ಸಂಘಟನೆಗಳು ಪಾಲ್ಗೊಂಡಿದ್ದವು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಎಐಯುಟಿಸಿ ಕಾರ್ಯಾಧ್ಯಕ್ಷ ಡಾ.ಎಚ್. ಮಹದೇವನ್, ಡಾ. ಬಿ.ಆರ್. ಶಿವಶಂಕರ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com