ಯಾಕೂಬ್ ಕೊಲೆ ಆರೋಪಿಗಳ ಬಂಧನ

ಸೈಯದ್ ಯಾಕೂಬ್ ಕೊಲೆ ಪ್ರಕರಣ ಭೇದಿಸಿರುವ ಜಗಜೀವನರಾಂ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸೈಯದ್ ಯಾಕೂಬ್ ಕೊಲೆ ಪ್ರಕರಣ ಭೇದಿಸಿರುವ ಜಗಜೀವನರಾಂನಗರ  ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಯಪುರ ನಿವಾಸಿ ಅಬ್ದುಲ್ ಸುಬಾನ್(28), ವಾಲ್ಮಿಕಿನಗರದ ಆರೀಫ್(24), ಗಂಗೋಡನಹಳ್ಳಿಯ ಸೈಯದ್ ವಸೀಂ(27) ಮತ್ತು ವಾಲ್ಮಿಕಿನಗರದ ಇಮ್ರಾಝ್ (25) ಬಂಧಿತ  ಆರೋಪಿಗಳು. ಸಾಲದ ಹಣ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಾದರಾಯನಪುರದ ನಿವಾಸಿಯಾದ ಸೈಯದ್ ಯಾಕುಬ್, ಆರೋಪಿ ಅಬ್ದುಲ್ ಸುಬಾನ್ ಬಳಿ ಕೈಸಾಲ ಪಡೆದಿದ್ದ. ಇತ್ತೀಚೆಗೆ ಸುಬಾನ್ ಸಾಲ ವಾಪಸು  ಕೇಳಲು ಹೋದಾಗ ಯಾಕುಬ್ ಹಣ ನೀಡದೆ ಜಗಳ ಮಾಡಿದ್ದ. ಇದರಿಂದ ಕುಪಿತಗೊಂಡಿದ್ದ ಸುಬಾನ್ ತನ್ನ ಮೂವರು ಸ್ನೇಹಿತರನ್ನು ಸೇರಿಸಿಕೊಂಡು ಹೊಸ ವರ್ಷದ ದಿನ (ಜ.1) ಬೆಳಗಿನ ಜಾವ 1.30ರ  ಸುಮಾರಿನಲ್ಲಿ ಯಾಕುಬ್ ನನ್ನು ಆಟೋರಿಕ್ಷಾದಲ್ಲಿ ಅಪಹರಿಸಿದ್ದರು. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಯಾಕುಬ್ ಮೇಲೆ ಹಲ್ಲೆ  ನಡೆಸಿ ಗಂಭೀರವಾಗಿ   ಗಾಯಗೊಳಿಸಿದ್ದರು. ಬಳಿಕ ಅದೇ ಆಟೋರಿಕ್ಷಾದಲ್ಲಿ ವಿಕ್ಟೋರಿಯಾ ಆಸ್ಪತ್ರೆವರೆಗೆ ಕರೆತಂದು ಗೇಟ್  ಬಳಿ ಮಲಗಿಸಿ ಪರಾರಿಯಾಗಿದ್ದರು.

ಗಂಭೀರ ಹಲ್ಲೆಯಿಂದ  ತೀವ್ರವಾಗಿ ರಕ್ತಸ್ರಾವವಾಗಿ ಹೊರಳಾಡುತ್ತಿದ್ದ ಯಾಕೂಬ್ ನನ್ನು ಕಂಡ ಕೆಲ ಅಪರಿಚಿತರು, ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಬೆಳಗ್ಗೆ 9.20ರ ವೇಳೆಗೆ ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ  ದಾಖಲಿಸಿಕೊಂಡಿದ್ದ ಜೆಜೆ ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು  ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಯಾಕುಬ್‍ನ ಕೊಲೆ ರಹಸ್ಯ ಬಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com