ಬೆಂಗಳೂರು: ಡಿಜಿಟಲ್ ತಂತ್ರಜ್ಞಾನ ಮತ್ತು ಡಿಜಿಟಲ್ ಇಂಡಿಯಾ ಸಂಪೂರ್ಣ ಲಾಭ ಗ್ರಾಮೀಣ ಪ್ರದೇಶಕ್ಕೆ ದೊರೆಯಬೇಕಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಏರ್ಪಡಿಸಿದ್ದ `ಉತ್ತಮ ಆಡಳಿತ ಮತ್ತು ಆರ್ಥಿಕ ಬೆಳವಣಿಗೆಗೆ ಡಿಜಿಟಲ್ ಇಂಡಿಯಾ ಒಂದು ಹೆದ್ದಾರಿ' ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಶೇ.50ಕ್ಕೂ ಹೆಚ್ಚು ಜನ ಬಡತನ ರೇಖೆಗಿಂತ ಕೆಳಮಟ್ಟದಲ್ಲಿದ್ದಾರೆ. ಇಂತಹ ಜನರಿಗೆ ತಂತ್ರಜ್ಞಾನವನ್ನು ತಲುಪಿಸುವುದು ಸವಾಲಿನ ಕೆಲಸ. ನಗರ ಮತ್ತು ಗ್ರಾಮೀಣ ಜನರ ತಾರತಮ್ಯ ನೀತಿ ಹೋಗಲಾಡಿಸಲು ತಂತ್ರಜ್ಞಾನ ಬಳಕೆಯಾಗಲಿ. ಕೃಷಿ ವಲಯ ಎದುರಿಸುತ್ತಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಬಳಕೆಯಾಗಲಿ ಎಂದರು.
ಡಿಜಿಟಲ್ ಇಂಡಿಯಾ ಜನರ ಮೂಲ ಅವಶ್ಯಕತೆಗಳನ್ನು ಪೂರೈಸಬೇಕಿದೆ. ನ್ಯಾಯಯುತ, ಸಮಾನತೆಗಾಗಿ ಡಿಜಿಟಲ್ ತಂತ್ರಜ್ಞಾನ ಮಾರುಕಟ್ಟೆಯಿಂದ ವ್ಯಾಪಾರಕ್ಕೆ ವೇದಿಕೆ ಒದಗಿಸುವ ಮೂಲಕ ಪ್ರಪಂಚಕ್ಕೆ ತೆರೆದುಕೊಳ್ಳಬೇಕಿದೆ ಎಂದು ಹೇಳಿದರು.
ತಂತ್ರಜ್ಞಾನಕ್ಕೆ ಮನ್ನಣೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್‍ರಾವ್ ಮಾತನಾಡಿ, ದೇಶದಲ್ಲಿ ಈ ವರೆಗೆ ಹಲವಾರು ಕ್ರಾಂತಿಗಳಾಗಿವೆ. ಆದರೆ ಡಿಜಿಟಲ್ ಕ್ರಾಂತಿ ಭಾರತವನ್ನು ಬದಲಾವಣೆ ಮಾಡಲಿದೆ. ಈ ವರೆಗೆ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯವಿತ್ತು. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಆ ಜಾಗವನ್ನು ಆಕ್ರಮಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಫಲವಾಗಿ ದೇಶ ಡಿಜಿಟಲ್ ಇಂಡಿಯಾ ಅಬಿsಯಾನ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಜಗತ್ತಿಗೇ ತಂತ್ರಜ್ಞಾನದ ಬೋಧನೆ ಮಾಡಲಿದೆ ಎಂದರು. ಇನ್ಫೋಸಿಸ್ ಸಂಸ್ಥೆಯ ಸಿಬುಲಾಲ್ ಮಾತನಾಡಿ, ತಂತ್ರಜ್ಞಾನದಿಂದ ಕಾಲೇಜು, ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಿಗೆ ಬುಕಿಂಗ್‍ಗಾಗಿ ಅಲೆದಾಡಬೇಕಿಲ್ಲ. ಎಲ್ಲದಕ್ಕೂ ಬೆರಳ ತುದಿಯಲ್ಲೇ ಕೆಲಸವಾಗಲಿದೆ.
ಡಿಜಿಟಲ್ ಪ್ರಪಂಚದಲ್ಲಿ ನಮ್ಮದೇ ಆದ ಐಡೆಂಟಿಟಿ ಪಡೆಯಲು ಆಧಾರ್ ಪಡೆಯಲು ತಂತ್ರಜ್ಞಾನ ಸಹಕಾರಿಯಾಗಿದೆ. ತಂತ್ರಜ್ಞಾನ ಬೆಳವಣಿಗೆಗೆ ಪ್ರಾದೇಶಿಕ ಭಾಷಿಕರ ಅವಶ್ಯಕತೆ ಇದೆ ಎಂದು ಹೇಳಿದರು.
Advertisement