ಗೊಂದಲದ ಗೂಡಾದ ವೀರಶೈವರ ವಾರ್ಷಿಕ ಸಭೆ

ನಗರದಲ್ಲಿ ಭಾನುವಾರ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ 41ನೇ ವಾರ್ಷಿಕ ಸಭೆ ಬಹುತೇಕ ಗದ್ದಲ ಮತ್ತು ಗೊಂದಲದ ಗೂಡಾಗಿತ್ತು. ಅಷ್ಟೇ ಅಲ್ಲ,ಜನಾಂಗವನ್ನು ಪ್ರತಿನಿಧಿಸುತ್ತಿರುವ ಸರ್ಕಾರದ ಹಿರಿಯ ಸಚಿವ ಶಾಮನೂರು ಶಂಕರಪ್ಪ ಅವರನ್ನು ತರಾಟೆಗೆ ತೆಗೆದುಕೊಳ್ಳಲು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು; ನಗರದಲ್ಲಿ ಭಾನುವಾರ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ 41ನೇ ವಾರ್ಷಿಕ ಸಭೆ ಬಹುತೇಕ ಗದ್ದಲ ಮತ್ತು ಗೊಂದಲದ ಗೂಡಾಗಿತ್ತು. ಅಷ್ಟೇ ಅಲ್ಲ,
ಜನಾಂಗವನ್ನು ಪ್ರತಿನಿಧಿಸುತ್ತಿರುವ ಸರ್ಕಾರದ ಹಿರಿಯ ಸಚಿವ ಶಾಮನೂರು ಶಂಕರಪ್ಪ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಸೇರಿದ್ದ ವೇದಿಕೆಯಾಗಿ ಮಾರ್ಪಟ್ಟಿತ್ತು.

ನಗರದ ಅರಮನೆ ಮೈದಾನದಲ್ಲಿ ನಡೆದ ಸಭೆಯಲ್ಲಿ ಬಹುತೇಕ ಮುಖಂಡರು ಇತ್ತೀಚಿ ನ ದಿನಗಳಲ್ಲಿ ವೀರಶೈವ ಜನಾಂಗ ರಾಜಕೀಯ ಮತ್ತು ಸಾಮಾಜಿಕವಾಗಿ ಹಿಂದಡಿ ಇಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಸ್ಥಾನ ಅಲಂಕರಿಸಿರುವವರ ಪೈಕಿ ಉಪಲೋಕಾಯುಕ್ತ ಸಂತೋಷ್ ಬಿ. ಆಡಿ ವಿರುದ್ಧ ಒಂದು ಪಕ್ಷದ ಶಾಸಕರು ಸಹಿ ಸಂಗ್ರಹ ಮಾಡಿ ಪದಚ್ಯುತಿಗೊಳಿಸಲು ಮುಂದಾದಾಗ ಸರ್ಕಾರದ ಭಾಗವಾಗಿದ್ದ ಯಾವೊಬ್ಬ ಸಚಿವರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂಬ ಆರೋಪ ಕೇಳಿ ಬಂತು.

ತಪ್ಪೊಪ್ಪಿಕೊಂಡ ಖಂಡ್ರೆ: ಈ ಪ್ರಮುಖ ವಿಚಾರಗಳ ಜತೆಗೆ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಮಹಾಸಭಾ ಮುದ್ರಿಸಿದ್ದ ವಾರ್ಷಿಕ ವರದಿಯಲ್ಲಿನ ಲೋಪ ದೋಷಗಳು. ಇವು ಇಡೀ ಸಭೆಯನ್ನು ಮುಜುಗರಕ್ಕೆ ಈಡು ಮಾಡಿದವು. ಮಹಾಸಭಾದ ವಾರ್ಷಿಕ ವರದಿಯಲ್ಲಿ ಉಲ್ಲೇಖವಾಗಿದ್ದ `ವೀರಶೈವ ಮಹಿಳೆಯರ ಮೇಲೆ ಅನ್ಯ ಕೀಳು ಜಾತಿಯವರಿಂದ ಅತ್ಯಾಚಾರ, ಬಲಾತ್ಕಾರ, ಕೊಲೆ ಯತ್ನ ನಡೆಯುತ್ತಿದೆ' ಎಂಬ ಅಸಂವಿಧಾನಿಕ ಪದ ಬಳಕೆಯ ಬಗ್ಗೆಯೂ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಇದರಿಂದ ಎಚ್ಚೆತ್ತ ಮಹಾಸಭಾದ ಕಾರ್ಯದರ್ಶಿ ಈಶ್ವರ್ ಖಂಡ್ರೆ, ಅಖಿಲ ಭಾರತ ವೀರಶೈವ ಮಹಾಸಭಾ ಕಣ್ತಪ್ಪಿನಿಂದ ಈ ಪ್ರಮಾದ ಸಂಭವಿಸಿದ್ದು, ವಾರ್ಷಿಕ ವರದಿಯನ್ನು ಹಿಂಪಡೆದು ಮರು ಮುದ್ರಣ ಮಾಡುವುದಾಗಿ ತಪ್ಪೊಪ್ಪಿಗೆ ನೀಡಿದರು.

ಕೇಶವಕುಮಾರ್ ಹೈಡ್ರಾಮಾ!
ವಾರ್ಷಿಕ ವರದಿ ಮಂಡನೆ ವೇಳೆ ಬೆಂಗಳೂರು ಮಹಾನಗರ ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಕೇಶವ ಕುಮಾರ್ ನೇರವಾಗಿ ವೇದಿಕೆಗೆ ತೆರಳಿ ಮಹಾಸಭಾದ ಅಧ್ಯಕ್ಷ
ಶಾಮನೂರು ಶಿವಶಂಕರಪ್ಪ ಅವರಿಗೆ ರಾಜಿನಾಮೆ ಸಲ್ಲಿಸಿದರು. `ಮೂರು ವರ್ಷದಿಂದ ಅಧ್ಯಕ್ಷನಾಗಿದ್ದರೂ ಯಾರೂ ಕೆಲಸ ಮಾಡಲಿಕ್ಕೆ ಬಿಟ್ಟಿಲ್ಲ ಎನ್ನುವ ಕಾರಣಕ್ಕಾಗಿ ರಾಜಿನಾಮೆ
ಸಲ್ಲಿಸಿರುವುದಾಗಿ' ತಿಳಿಸಿದ್ದು ಹೈಡ್ರಾಮಾ ಸೃಷ್ಟಿಸಿತು. ಜನಾಂಗದ ಹಿರಿಯ ಮುಖಂಡರಾದ ಎನ್. ತಿಪ್ಪಣ್ಣ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಸೇರಿದಂತೆ ನೂರಾರು ಮಂದಿ
ಭಾಗವಹಿಸಿದ್ದರು.

ವೀರ ಬಸವ ಸೇನೆ ವೀರಶೈವರನ್ನು ನಿಕೃಷ್ಟವಾಗಿ ಕಾಣುವ ಕಾಲ ಈಗ ಪ್ರಾರಂಭವಾಗಿದೆ.ನಾವೆಲ್ಲರೂ ಸ್ವಾಭಿಮಾನದಿಂದ  ಧರ್ಮಪ್ರಜ್ಞೆ ಮೆರೆಯಲು ಇದು ಸಕಾಲ. ಬಜರಂಗದಳ ಹಾಗೂ ಶಿವಸೇನೆಯ ರೀತಿಯಲ್ಲಿ ವೀರ ಬಸವ ಸೇನೆಯ ಸ್ಥಾಪನೆ ಕುರಿತು ಪರಿಶೀಲಿಸುತ್ತೇವೆ ಎಂದು ಖಂಡ್ರೆ ಭರವಸೆ ನೀಡಿದರು. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ಮಹಿಳೆಯರ ಮೇಲೆ ಬೇರೆ ಜನಾಂಗದರಿಂದ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಯಲು ವೀರಶೈವ ಸಮುದಾಯದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಈ ದುಷ್ಕೃತ್ಯವನ್ನು ಖಂಡಿಸಬೇಕಾದ ಮಹಾಸಭಾವು ವಾರ್ಷಿಕ ವರದಿಯಲ್ಲಿ ಆಕ್ಷೇಪಾರ್ಹ ಪದ ಬಳಸಿರುವುದು ತಪ್ಪು. ಅದನ್ನು ಬೇರೆ ರೀತಿ ಹೇಳಬೇಕಿತ್ತು ಎಂದು ವಿರೋಧ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com